ADVERTISEMENT

‘ಉತ್ಪಾದನೆ ಜತೆಗೆ ಮಾರುಕಟ್ಟೆ ರೂಪಿಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 8:36 IST
Last Updated 16 ಸೆಪ್ಟೆಂಬರ್ 2013, 8:36 IST

ಹಿರಿಯೂರು: ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು ಸಣ್ಣ ಉದ್ದಿಮೆ ಮೂಲಕ ದಿನಬಳಕೆಯ ವಸ್ತುಗಳನ್ನು ಉತ್ಪಾದನೆ ಮಾಡುತ್ತಿರುವುದು ಶ್ಲಾಘನೀಯ ಕೆಲಸವಾದರೂ, ತಮ್ಮ ವಸ್ತುಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತಾಧಿಕಾರಿ ಮಲ್ಲಿಕಾರ್ಜುನಪ್ಪ ತಿಳಿಸಿದರು.

ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಆರ್ಥಿಕ ಸುಧಾರಣೆಯಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು’ ವಿಷಯ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ವಸ್ತುಗಳ ಉತ್ಪಾದನೆಯಲ್ಲಿ ಕೌಶಲ ಬಹಳ ಮುಖ್ಯವಾಗುತ್ತದೆ. ಅಗತ್ಯ ತರಬೇತಿ ಪಡೆಯದೆ ಯಾವುದೇ ವಸ್ತುಗಳ ಉತ್ಪಾದನೆಗೆ ಮುಂದಾಗಬಾರದು. ಬೇಡಿಕೆ ಆಧರಿಸಿ ವಸ್ತುಗಳ ಉತ್ಪಾದನೆ ಮಾಡಬೇಕು ಎಂದು ಅವರು ಸಲಹೆ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಿ.ಸುಧಾಕರ್‌, ಮಹಿಳೆಯರು ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ. ಸ್ವಸಹಾಯ ಸಂಘಗಳು ಸ್ಥಾಪನೆಯಾದ ನಂತರ ಮಹಿಳೆಯರಲ್ಲಿನ ಯೋಚನಾ ರೀತಿ ಬದಲಾಗಿದೆ. ಸಂಘಗಳು ಆರ್ಥಿಕವಾಗಿ ಸಬಲ ವಾಗುತ್ತಿದ್ದು, ದೇಶ ಆರ್ಥಿಕ ಪ್ರಗತಿಯತ್ತ ಮುನ್ನಡೆಯಲು ಸಹಕಾರಿಯಾಗಿದೆ. ವಾಣಿ ಕಾಲೇಜಿಗೆ ಅಗತ್ಯವಿರುವ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರದಿಂದ ` 75 ಲಕ್ಷ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಶಿಶು ಅಭಿವೃದ್ದಿ ಯೋಜನಾಧಿಕಾರಿ ಎ.ಎಂ.ಅಸ್ತೀರ್, ಬ್ಲಾಕ್‌ಸೊಸೈಟಿ ಅಧ್ಯಕ್ಷೆ ಶೈಲಜಾ, ಅಧ್ಯಕ್ಷತೆ
ವಹಿಸಿದ್ದ ಪ್ರಾಂಶುಪಾಲ ಡಾ.ಶಿವಲಿಂಗಪ್ಪ, ಪ್ರಾಧ್ಯಾಪಕ ಜಿ.ಟಿ.ಗೋವಿಂದಪ್ಪ, ಕೆ.ಬಿ.ರಂಗಪ್ಪ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.