ADVERTISEMENT

‘ಮಾಡರ್ನ್ ಟೈಮ್ಸ್’ನಿಂದ ಜೀವನ ಏರಿಳಿತ ದರ್ಶನ

ಆವಿಷ್ಕಾರ ಫಿಲಂ ಸೊಸೈಟಿ ಚಿತ್ರೋತ್ಸವದಲ್ಲಿ ಲೇಖಕ ನವೀನ್ ಕುಮಾರ್

​ಪ್ರಜಾವಾಣಿ ವಾರ್ತೆ
Published 22 ಜೂನ್ 2015, 8:27 IST
Last Updated 22 ಜೂನ್ 2015, 8:27 IST
ಚಿತ್ರದುರ್ಗದ ಐಎಂಎ ಸಭಾಂಗಣದಲ್ಲಿ ಭಾನುವಾರ ಆವಿಷ್ಕಾರ ಫಿಲಂ ಸೊಸೈಟಿ ಆಯೋಜಿಸಿದ್ದ ವಾರ್ಷಿಕ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ‘ಮಾಡರ್ನ್ ಟೈಮ್ಸ್’ ಸಿನಿಮಾ ಸಂವಾದದಲ್ಲಿ ಆವಿಷ್ಕಾರದ ವಿಜಯ್ ಕುಮಾರ್ ಮಾತನಾಡಿದರು.
ಚಿತ್ರದುರ್ಗದ ಐಎಂಎ ಸಭಾಂಗಣದಲ್ಲಿ ಭಾನುವಾರ ಆವಿಷ್ಕಾರ ಫಿಲಂ ಸೊಸೈಟಿ ಆಯೋಜಿಸಿದ್ದ ವಾರ್ಷಿಕ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ‘ಮಾಡರ್ನ್ ಟೈಮ್ಸ್’ ಸಿನಿಮಾ ಸಂವಾದದಲ್ಲಿ ಆವಿಷ್ಕಾರದ ವಿಜಯ್ ಕುಮಾರ್ ಮಾತನಾಡಿದರು.   

ಚಿತ್ರದುರ್ಗ: ‘ಜೀವನದ ಏರಿಳಿತಗಳನ್ನು ನಟನೆ, ಹಾಸ್ಯದ ಮೂಲಕ ಅಭಿವ್ಯಕ್ತಪಡಿಸಿದ ಶ್ರೇಷ್ಠ ಕಲಾವಿದ ಚಾರ್ಲಿ ಚಾಪ್ಲಿನ್, ಪ್ರೀತಿ, ಅನುಭೂತಿ, ಮಾನವೀಯತೆಗಳನ್ನು ತಮ್ಮ ಚಿತ್ರಗಳಲ್ಲಿ ನವಿರಾಗಿ ಚಿತ್ರಿಸಿದ್ದಾರೆ ಎಂದು ಲೇಖಕ ಎಚ್.ಎಸ್.ನವೀನ್‌ಕುಮಾರ್ ಅಭಿಪ್ರಾಯಪಟ್ಟರು.

ನಗರದ ಐ.ಎಂ.ಎ ಸಭಾಂಗಣದಲ್ಲಿ ಭಾನುವಾರ ಆವಿಷ್ಕಾರ ಫಿಲ್ಮ್ ಸೊಸೈಟಿ ಆಯೋಜಿಸಿದ್ದ ವಾರ್ಷಿಕ ಚಲನ ಚಿತ್ರೋತ್ಸವದಲ್ಲಿ ಚಾರ್ಲಿ ಚಾಪ್ಲಿನ್ ಅವರ ‘ಮಾಡರ್ನ್‌ ಟೈಮ್ಸ್’ ಸಿನಿಮಾ ಪ್ರದರ್ಶನದ ನಂತರದ ಸಂವಾದದಲ್ಲಿ ಅವರು ಮಾತನಾಡಿದರು. ‘ಪ್ರಸ್ತುತ ಸಿನಿಮಾಗಳಲ್ಲಿ  ಹಾಸ್ಯ ಮೌಲ್ಯ ಕಳೆದುಕೊಂಡಿದೆ. ಅರ್ಥಗಳಿಗಿಂತ ಅನರ್ಥಗಳು, ದ್ವಂದ್ವಾರ್ಥಗಳೇ ಹೆಚ್ಚಾ ಗಿವೆ. ಆದರೆ ಚಾರ್ಲಿ ಚಾಪ್ಲಿನ್ ತಮ್ಮ ಸಿನಿಮಾಗಳಲ್ಲಿ ಜೀವನದ ಸಂದೇಶವನ್ನು, ಬದುಕನ್ನು ನೋಡುವ ಗುಣಧರ್ಮ ವನ್ನು, ಹಸಿವು, ನಿರುದ್ಯೋಗ, ಶೋಷಣೆಗಳ ಭೀಕರತೆಗಳನ್ನು ನವಿರಾದ ಹಾಸ್ಯದೊಂದಿಗೆ ಪರಿಣಾಮಕಾರಿಯಾಗಿ ತೋರಿಸಿದ್ದಾರೆ’ ಎಂದು ಹೇಳಿದರು.

ಉಪನ್ಯಾಸಕಿ  ಚಂದ್ರಿಕಾ ಮಾತನಾಡಿ,  ‘ಆರ್ಥಿಕ ಕುಸಿತದ ಹಿನ್ನೆಲೆ ಯಲ್ಲಿ ಕಾರ್ಮಿಕರ ಬದುಕಿನ ಶೋಚ ನೀಯ ಸ್ಥಿತಿಯನ್ನು ಚಾರ್ಲಿ ಚಾಪ್ಲಿನ್ ಮನಮುಟ್ಟುವಂತೆ ನಿರೂಪಿಸಿದ್ದಾರೆ’ ಎಂದರು. ‘ಯಾಂತ್ರಿಕ ಜೀವನದ ತೊಳಲಾಟ, ನೋವು-ನಲಿವುಗಳನ್ನು ಮತ್ತು ಸಾರ್ವ ಕಾಲಿಕ ಮಾನವೀಯ ಮೌಲ್ಯಗಳನ್ನು ಹಾಸ್ಯದೊಂದಿಗೆ ಪರಿಣಾಮಕಾರಿಯಾಗಿ ಈ ಸಿನಿಮಾದಲ್ಲಿ ಚಿತ್ರಿಸಿದ್ದಾರೆ’ ಎಂದು ವಿವರಿಸಿದರು.

‘ಮಾಡರ್ನ್ ಟೈಮ್ಸ್’ ಸಿನಿಮಾದ ಕಥಾನಾಯಕ  ಒಬ್ಬ ಅಲೆಮಾರಿ ಯಾದರೂ ಒಬ್ಬ ಆದರ್ಶಪ್ರಾಯ ಶ್ರೀಸಾಮಾನ್ಯನನ್ನು ಪ್ರತಿನಿಧಿಸುತ್ತಾನೆ. ತನ್ಮೂಲಕ ಹಸಿವು, ನಿರುದ್ಯೋಗ, ಬಡತನಗಳನ್ನು ವಿಡಂಬನಾತ್ಮಕವಾಗಿ ಪ್ರೇಕ್ಷಕನ ಮನ ಮುಟ್ಟಿಸುತ್ತಾನೆ. ಪ್ರಪಂಚದ ಎಲ್ಲ ಜನರಿಗೂ ಅರ್ಥ ವಾಗುವ ಭಾಷೆ ಮೂಕ ಭಾಷೆ, ಹಾಗಾಗಿ ಅವರು ತಮ್ಮ ಬಹುತೇಕ ಸಿನಿಮಾಗಳನ್ನು ಮೂಕಿ ಚಿತ್ರಗಳಾಗಿ ನಿರ್ಮಿಸಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆವಿಷ್ಕಾರದ  ವಿಜಯ್‌ ಕುಮಾರ್,  ‘ಚಾರ್ಲಿ ಚಾಪ್ಲಿನ್ ಈ ಸಿನಿಮಾದಲ್ಲಿ ಆಶಾವಾದವನ್ನು ಎತ್ತಿ ಹಿಡಿದಿದ್ದಾರೆ. ಎಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ಕಥಾನಾಯಕ ತನ್ನ ಆಶಾವಾದವನ್ನು ಬಿಟ್ಟುಕೊಡುವುದಿಲ್ಲ. ತನ್ನ ದುರ್ಗತಿಗೆ ಮರುಗದೆ ಬದುಕನ್ನು ಸವಾಲಾಗಿ ಸ್ವೀಕರಿಸುತ್ತಾನೆ. ಯಾಂತ್ರೀಕೃತ ಮನುಷ್ಯನ ಜೀವನದಲ್ಲಿ ಕಲೆ, ಸಾಹಿತ್ಯ, ಸಂಭ್ರಮಗಳಿಗೆ ಅವಕಾಶವೇ ಇಲ್ಲದಾಗಿ ಬದುಕಿಗಾಗಿ ದುಡಿಮೆ, ದುಡಿಮೆಗಾಗಿ ಬದುಕು ಎಂಬ ಪರಿಸ್ಥಿತಿಗೆ ಸಿಲುಕಿದ್ದಾನೆ. ಇಂಥ ಹಲವು ಕಲಾತ್ಮಕ ಸಿನಿಮಾಗಳನ್ನು ಜನರ ಬಳಿಗೆ ಕೊಂಡೊಯ್ಯುವ ಪ್ರಯತ್ನ ಆವಿಷ್ಕಾರ ಫಿಲ್ಮ್ ಸೊಸೈಟಿಯಿಂದ ಮಾಡಲಾಗುತ್ತಿದೆ’ ಎಂದರು.

ಆವಿಷ್ಕಾರ ಫಿಲಂ ಸೊಸೈಟಿ ಜಿಲ್ಲಾ ಸಂಚಾಲಕ ವೇಣುಗೋಪಾಲ್, ಸದಸ್ಯರಾದ ವಿನಯ್, ಗುರುಪ್ರಸಾದ್, ರವಿಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.