ADVERTISEMENT

ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಿ: ಶಾಸಕ ತಿಪ್ಪಾರೆಡ್ಡಿ, ಸಿಇಒ ನಡುವೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 11:36 IST
Last Updated 29 ಏಪ್ರಿಲ್ 2019, 11:36 IST
ಶಾಸಕ ತಿಪ್ಪಾರೆಡ್ಡಿ, ಸಿಇಒ ನಡುವೆ ವಾಗ್ವಾದ
ಶಾಸಕ ತಿಪ್ಪಾರೆಡ್ಡಿ, ಸಿಇಒ ನಡುವೆ ವಾಗ್ವಾದ   

ಚಿತ್ರದುರ್ಗ: ತಾಲ್ಲೂಕಿನ ಸೊಲ್ಲಾಪುರ, ಬಳೆಕಟ್ಟೆ, ಜೆ.ಎನ್.ಕೋಟೆ, ತಿಮ್ಮಯ್ಯನಹಟ್ಟಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಗ್ರಾಮಸ್ಥರೊಂದಿಗೆ ಜಿಲ್ಲಾ ಪಂಚಾಯಿತಿ ಸಿಇಒ ಅವರ ಕಚೇರಿಯ ಕೊಠಡಿಗೆ ಮುತ್ತಿಗೆ ಹಾಕಿದರು.

ಖಾಲಿ ಕೊಡಪಾನದೊಂದಿಗೆ ಬಂದಿದ್ದ ಗ್ರಾಮಸ್ಥರು ಕುಡಿಯುವ ನೀರು ಪೂರೈಸಬೇಕು. ನಿಮ್ಮಂತೆ ನಾವು ಮನುಷ್ಯರು ಎಂಬುದನ್ನು ಮರೆಯಬೇಡಿ ಎಂದು ಇದೇ ಸಂದರ್ಭದಲ್ಲಿ ಸಿಇಒ ಸತ್ಯಭಾಮ ಅವರಿಗೆ ಒತ್ತಾಯಿಸಿದರು. ಚರ್ಚೆ ಸಂದರ್ಭದಲ್ಲಿ ಶಾಸಕರು, ಸಿಇಒ ನಡುವೆ ವಾಗ್ವಾದವೂ ನಡೆಯಿತು.

‘ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕೂಡಲೇ ಕೊಳವೆಬಾವಿ ಕೊರೆಸಿ ಎಂದು ಜಿಲ್ಲೆಯ ಶಾಸಕರು ಹೇಳಿದರೂ ಅಧಿಕಾರಿಗಳು ಕೇಳುತ್ತಿಲ್ಲ. ಪಿಡಿಒ, ಇಒ ಕೇಳಿದ ನಂತರ ಅಗತ್ಯಬಿದ್ದರೆ ಕೊಳವೆಬಾವಿ ಕೊರೆಸಲು ಸಿಇಒ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದೆ. ಅಲ್ಲಿಯವರೆಗೂ ಬಡ, ಕೂಲಿ ಕಾರ್ಮಿಕ ಜನರು, ಜಾನುವಾರುಗಳು ನೀರಿಗಾಗಿ ಏನು ಮಾಡಬೇಕು’ ಎಂದು ತಿಪ್ಪಾರೆಡ್ಡಿ ಪ್ರಶ್ನಿಸಿದರು.

ADVERTISEMENT

‘ಕೊಳವೆಬಾವಿ ಕೊರೆಸಿ ಸರ್ಕಾರದಿಂದ ದುಡ್ಡು ಬಾರದೇ ಇದ್ದಲ್ಲಿ ಶಾಸಕರ ಅನುದಾನ, ಇತರೆ ಅನುದಾನದಲ್ಲಿ ಕೊಡಿಸುವ ಜವಾಬ್ದಾರಿ ಜನಪ್ರತಿನಿಧಿಗಳದ್ದಾಗಿದೆ. ಅಧಿಕಾರಿಗಳ ಬಳಿ ಪಡೆಯಿರಿ ಎಂದು ಹೇಳಲು ಆಗುವುದಿಲ್ಲ. ಕೊಳವೆಬಾವಿ ಕೊರೆಸದಿದ್ದರೂ ಪರವಾಗಿಲ್ಲ. ಕಡೇ ಪಕ್ಷ ಪಿಡಿಒಗಳಿಗೆ ಸೂಚನೆ ನೀಡಿ ಟ್ಯಾಂಕರ್‌ಗಳ ಮೂಲಕವಾದರೂ ಸರಬರಾಜು ಮಾಡಬಹುದಲ್ಲ. ಕಷ್ಟಕಾಲದಲ್ಲಿ ಆಗದಿದ್ದರೆ ಹೇಗೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈಗಾಗಲೇ ಕೆಲ ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಸಿದರೂ ನೀರು ಸಿಕ್ಕಿಲ್ಲ. ಇನ್ನೂ ಹಲವೆಡೆ ನಾಲ್ಕು ಕೊರೆಸಿ ಆರು ಲೆಕ್ಕ ತೋರಿಸುತ್ತಾರೆ ಎಂಬ ದೂರುಗಳಿವೆ ಎಂದು ಉನ್ನತ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ರೀತಿ ಆಗಿರುವುದನ್ನು ಇಲ್ಲ ಎಂದು ಹೇಳಲಿಕ್ಕೂ ಸಾಧ್ಯವಿಲ್ಲ. ಜನತೆ ಕೇಳುತ್ತಿರುವುದು ನೀರು. ಅದನ್ನು ಪೂರೈಸಲು ಪರಿಹಾರ ಕ್ರಮ ಕೈಗೊಳ್ಳಿ’ ಎಂಬ ಸಲಹೆ ಸಿಇಒಗೆ ನೀಡಿದ್ದೇನೆ ಎಂದು ತಿಳಿಸಿದರು.

‘ಪ್ರಕೃತಿ ಮುನಿಸಿನಿಂದಾಗಿ ಜಿಲ್ಲೆಯಲ್ಲಿ ಬರವಿದೆ. ಅನೇಕ ಕಡೆಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಪೂರೈಸಬೇಕಾದ್ದು, ಜನಪ್ರತಿನಿಧಿಗಳು, ಅಧಿಕಾರಿಗಳ ಕರ್ತವ್ಯ. ವಿವಿಧೆಡೆ ನೀರು ಸಿಗುತ್ತಿಲ್ಲ. ಇದರಿಂದಾಗಿ ಈಗ ಒಂದು ಟ್ಯಾಂಕರ್‌ಗೆ ಜಿಲ್ಲಾ ಪಂಚಾಯಿತಿ ನಿಗದಿ ಪಡಿಸಿರುವ ಮೊತ್ತಕ್ಕೆ ಅನೇಕರೂ ಬರುತ್ತಿಲ್ಲ. ಸ್ವಲ್ಪ ಹೆಚ್ಚಾದರೂ ಸರಿಯೇ ಅದಕ್ಕೆ ಒಪ್ಪಿಗೆ ನೀಡಿ ಜನತೆಗೆ ನೀರು ಒದಗಿಸಲು ಮುಂದಾಗಬೇಕು. ಈ ಬಗ್ಗೆ ಅಧಿಕಾರಿಗಳು ಯೋಚಿಸಿ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

‘ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಂಡೇನಹಳ್ಳಿಗೆ ನೆರೆಯ ಆಂಧ್ರದಿಂದ ನೀರು ತರಲಾಗುತ್ತಿದೆ. ಚಳ್ಳಕೆರೆ ತಾಲ್ಲೂಕಿನ ಹಾಯ್ಕಲ್‌ನಲ್ಲಿ ನೀರಿನ ಸಮಸ್ಯೆ ಇದೆ. ಪರಶುರಾಮಪುರದಲ್ಲೂ ನೀರಿಗೆ ಹಾಹಾಕಾರ ಉಂಟಾಗಿದೆ. ಆದ್ದರಿಂದ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಕನಿಷ್ಟ ಐದಾರು ಟ್ಯಾಂಕರ್‌ ನೀರು ಪೂರೈಸಬೇಕು’ ಎಂದ ಅವರು, ‘ಎಷ್ಟು ಟ್ಯಾಂಕರ್‌ ಪೂರೈಸಲಾಗಿದೆ ಎಂಬುದನ್ನು ತಿಳಿಯಲು, ಅವ್ಯವಹಾರ ತಡೆಯಲು ಜಿಪಿಎಸ್ ಅಳವಡಿಸಲಾಗುತ್ತಿದೆ. ಹೀಗಿದ್ದರೂ ಕೆಲವೆಡೆ ಪೂರೈಸಲು ಏಕೆ ಮುಂದಾಗುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಜೆ.ಎನ್.ಕೋಟೆಯಲ್ಲಿ ನಾಲ್ಕು ವರ್ಷಗಳಿಂದ ನೀರಿನ ಸಮಸ್ಯೆ ಇದೆ. ಸೊಲ್ಲಾಪುರ ಗ್ರಾಮದವರು 15ದಿನಗಳಿಂದಲೂ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮೊದಲು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪೂರೈಕೆಗೆ ಕ್ರಮ ಕೈಗೊಳ್ಳಿ. ಕುಡಿಯುವ ನೀರು ಪೂರೈಕೆ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಪ್ರತಿ ಗ್ರಾಮ ಪಂಚಾಯಿತಿಗೂ ಅಧಿಕಾರಿಗಳನ್ನು ನೇಮಕ ಮಾಡಿ’ ಎಂದು ಇದೇ ಸಂದರ್ಭದಲ್ಲಿ ತಾಕೀತು ಮಾಡಿದರು.

‘ಚಾರ್ಜ್ ಮಾಡುತ್ತಿದ್ದೆ; ಮನೆಯಲ್ಲೂ ಕೆಲಸ ಮಾಡಿದ್ದೇನೆ‘

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಸತ್ಯಭಾಮ ನಡುವೆ ಮಾತಿನ ವಾಗ್ವಾದ ಹೀಗಿತ್ತು...

* ಜಿ.ಎಚ್‌.ತಿಪ್ಪಾರೆಡ್ಡಿ, ಶಾಸಕ. ನೀತಿ ಸಂಹಿತೆ ಇಲ್ಲದಿದ್ದರೆ, ಚಾರ್ಜ್‌ ಮಾಡುತ್ತಿದ್ದೆ.

* ಸಿ.ಸತ್ಯಭಾಮ, ಸಿಇಒ. ನನ್ನ ಮೇಲೆ ಹೇಗೆ ಚಾರ್ಜ್ ಮಾಡುತ್ತೀರಾ. ನನ್ನ ಕರ್ತವ್ಯ ಸರಿಯಾಗಿಯೇ ಮಾಡುತ್ತಿದ್ದೇನೆ.

* ತಿಪ್ಪಾರೆಡ್ಡಿ. ತುರ್ತು ಸಂದರ್ಭದಲ್ಲಿ ಕೇಂದ್ರ ಬಿಡುವಂತಿಲ್ಲ. ಕಚೇರಿಯಲ್ಲೂ ನೀವು ಇರಲಿಲ್ಲ ಎಂಬ ಮಾಹಿತಿ ಇದೆ.

* ಸತ್ಯಭಾಮ. ನಾನೂ ಇರಲಿಲ್ಲ ಎಂದು ಹೇಗೆ ಹೇಳುತ್ತೀರಾ. ಭಾನುವಾರ ರಜೆಯಾದರೂ ಮನೆಯಲ್ಲಿಯೇ ಇದ್ದು, ಎರಡು ಬಾಕ್ಸ್‌ಗಳ ಕಚೇರಿಯ ಫೈಲ್ ಕ್ಲಿಯರ್ ಮಾಡಿದ್ದೇನೆ. ಜಿಲ್ಲಾ ಪಂಚಾಯಿತಿಯಲ್ಲಿ ನೂರಾರು ಕೆಲಸ ಕಾರ್ಯಗಳಿರುತ್ತವೆ. ಹೀಗಿರುವಾಗ ನನ್ನ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ.

* ತಿಪ್ಪಾರೆಡ್ಡಿ. ಆಕ್ರೋಶದಿಂದ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ರುಜು ಹಾಕಿರಬಹುದು. ನೀವು ಊರಿನಲ್ಲಿ ಇರಲಿಲ್ಲ ಎಂಬುದನ್ನು ನಿಮ್ಮ ಕಚೇರಿಯಿಂದಲೇ ತಿಳಿದುಕೊಂಡಿದ್ದೇನೆ.

* ಸತ್ಯಭಾಮ. ಒಂದು ನಿಮಿಷ ಸರ್. ಒಂದು ನಿಮಿಷ. ಮಾತನಾಡಲು ಅವಕಾಶ ಕೊಡಿ. ಕರ್ತವ್ಯದ ನಿಮಿತ್ತ ಹೋಗಿದ್ದೆ. ಶನಿವಾರ ಬಹುಮುಖ್ಯವಾದ ಸಭೆ ಇತ್ತು. ಸಿಆರ್ ಇದ್ದರೂ ಭಾನುವಾರ ಕೆಲಸ ಮಾಡಿದ್ದೇನೆ.

* ತಿಪ್ಪಾರೆಡ್ಡಿ. ಹಾಗೆ ಹೇಳಿ ಮತ್ತೆ. ಊರಲ್ಲಿ ಇದ್ದೆ ಅಂಥ ಹೇಳುತ್ತಿದ್ದಿರಲ್ಲ.

* ಸತ್ಯಭಾಮ. ಸೋಮವಾರ ಬೆಳಿಗ್ಗೆ 10.30ರಿಂದಲೇ ಕಚೇರಿಯಲ್ಲಿ ಇದ್ದೆನೆ. ನಡೀರಪ್ಪ ಹೋಗೋಣ. ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ.

* ತಿಪ್ಪಾರೆಡ್ಡಿ. ಆರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. 25 ವರ್ಷಗಳಲ್ಲಿ ಎಂದಿಗೂ ಜನರನ್ನು ಕರೆದುಕೊಂಡು ಈ ರೀತಿ ಜಿಲ್ಲಾ ಪಂಚಾಯಿತಿ ಕಚೇರಿ ಬಳಿಗೆ ಬಂದಿರಲಿಲ್ಲ. ವೈಯಕ್ತಿಕ ಹಿತಾಸಕ್ತಿಯಿಂದ ಯಾರೂ ಇಲ್ಲಿಗೆ ಬಂದಿಲ್ಲ. ಸಾರ್ವಜನಿಕರ ಸಮಸ್ಯೆ ಪರಿಹರಿಸುವಂತೆ ಚರ್ಚಿಸಲು ಬಂದಿದ್ದೇವೆ. ಹಿರಿಯ ರಾಜಕಾರಣಿಯಾಗಿ ರಾಜಕೀಯದಲ್ಲಿ ಅನುಭವ ಹೊಂದಿದ್ದೇನೆ. ನಾನೂ ಅಧಿಕಾರಿಗಳನ್ನು ಅಗೌರವದಿಂದ ನಡೆಸಿಕೊಂಡಿಲ್ಲ.

* ಸತ್ಯಭಾಮ. ಜನರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿಯೇ ಕೆಲಸ ಮಾಡುತ್ತಿದ್ದೇನೆ. ಗ್ರಾಮೀಣ ಪ್ರದೇಶಗಳ ಸಮಸ್ಯೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬಗೆಹರಿಸಿದ್ದರೆ, ನನ್ನ ಕೊಠಡಿಯವರೆಗೂ ಜನ ಬರುವ ಅಗತ್ಯವೇ ಇರುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.