ADVERTISEMENT

ಸುಗಮ ಪ್ರಚಾರಕ್ಕೆ ನೆರವಾದ ‘ಸುವಿಧಾ’

ಅಭ್ಯರ್ಥಿಗಳು ತಂತ್ರಾಂಶದಿಂದ ಅನುಮತಿ ಪಡೆದ ಒಟ್ಟು ವಾಹನಗಳು 67 * ರದ್ದಾಗಿದ್ದು, 12 ವಾಹನ

ಕೆ.ಎಸ್.ಪ್ರಣವಕುಮಾರ್
Published 10 ಏಪ್ರಿಲ್ 2019, 17:02 IST
Last Updated 10 ಏಪ್ರಿಲ್ 2019, 17:02 IST
ವಿನೋತ್ ಪ್ರಿಯಾ, ಜಿಲ್ಲಾಧಿಕಾರಿ.
ವಿನೋತ್ ಪ್ರಿಯಾ, ಜಿಲ್ಲಾಧಿಕಾರಿ.   

ಚಿತ್ರದುರ್ಗ: ಚುನಾವಣಾ ಪ್ರಚಾರಕ್ಕೆ ಅನುಮತಿ ಪಡೆಯಲು ‘ಸುವಿಧಾ’ ಎಂಬ ಏಕಗವಾಕ್ಷಿ ವ್ಯವಸ್ಥೆಯನ್ನು ರೂಪಿಸಿರುವುದು ರಾಜಕೀಯ ಪಕ್ಷ, ಅಭ್ಯರ್ಥಿ ಹಾಗೂ ಚುನಾವಣಾ ಸಿಬ್ಬಂದಿಯ ಸಮಯ ಉಳಿಸಿದೆ. ಪೊಲೀಸ್‌ ಇಲಾಖೆ, ಜಿಲ್ಲಾಧಿಕಾರಿ ಕಚೇರಿಗೆ ಅಭ್ಯರ್ಥಿಗಳು ಅಥವಾ ಬೆಂಬಲಿಗರು ಅಲೆಯುವುದು ತಪ್ಪಿದೆ.

ಪಾರದರ್ಶಕತೆಯಿಂದ ಚುನಾವಣೆ ನಡೆಸುವ ದೃಷ್ಟಿಯಿಂದ ತಂತ್ರಜ್ಞಾನದ ಮೊರೆ ಹೋಗಿರುವ ಚುನಾವಣಾ ಆಯೋಗ ಸಾಕಷ್ಟು ಬದಲಾವಣೆ ತಂದಿದೆ. ಅದರಲ್ಲಿ ‘ಸುವಿಧಾ’ ಸುಗಮ ಪ್ರಚಾರಕ್ಕೆ ಅಭ್ಯರ್ಥಿಗಳಿಗೆ ನೆರವಾಗುತ್ತಿದೆ. ಚುನಾವಣಾ ಸಿಬ್ಬಂದಿಯ ಮೇಲಿನ ಹೊರೆಯೂ ಕಡಿಮೆಯಾಗಿದೆ.

ಈ ಮೊದಲು ವಾಹನಗಳಿಗೆ ಅನುಮತಿ ಪಡೆಯಲು ಅಭ್ಯರ್ಥಿಗೆ ಸಾಕಷ್ಟು ಸಮಯ ವ್ಯರ್ಥವಾಗುತ್ತಿತ್ತು. ಆದರೀಗ ಆನ್‌ಲೈನ್ ಮೂಲಕ ಅಭ್ಯರ್ಥಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಲು ಸುಲಭ ಮಾರ್ಗವನ್ನು ಆಯೋಗವೇ ಕಲ್ಪಿಸಿಕೊಟ್ಟಿದೆ.

ADVERTISEMENT

ಅಭ್ಯರ್ಥಿಗಳು ಬಳಸುವ ವಾಹನಗಳ ಅನುಮತಿಗೆ ‘ಸುವಿಧಾ’ ಜಾಲತಾಣ (https://suvidha.eci.gov.in) ಸಂಪರ್ಕಿಸಿದರೆ ಸಾಕು. ಬಳಕೆ ಮಾಡಿಕೊಳ್ಳುವ ವಾಹನ, ನೋಂದಣಿ ಸಂಖ್ಯೆ, ಇತರೆ ಮಾಹಿತಿಗಳ ಸಮೇತ ಅಭ್ಯರ್ಥಿ ಅನುಮತಿ ಪಡೆಯಲು ಆಯೋಗ ಅವಕಾಶ ಮಾಡಿಕೊಟ್ಟಿದೆ.

ಪಕ್ಷದ ತಾತ್ಕಾಲಿಕ ಕಚೇರಿ, ಸಾರ್ವಜನಿಕ ಸಭೆ, ಧ್ವನಿವರ್ಧಕ, ರೋಡ್‌ ಷೋ, ರ್‍ಯಾಲಿ ಮತ್ತು ಬ್ಯಾರಿಕೇಡ್‌ಗಳಿಗೆ ಸಂಬಂಧಿಸಿದಂತೆ ಸಹಾಯಕ ಚುನಾವಣಾಧಿಕಾರಿಅನುಮತಿ ಕಡ್ಡಾಯವಾಗಿದೆ. ಈ ಎಲ್ಲಕ್ಕೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿಅನುಮತಿ ಪಡೆದುಕೊಳ್ಳುವುದು ಸುಲಭವಾಗಿದೆ.

‘ಸುವಿಧಾ’ ತಂತ್ರಾಂಶದ ಮೂಲಕ ಅನುಮತಿ ಪಡೆದ ಅಭ್ಯರ್ಥಿಗಳ ಪೈಕಿ ಬಿಜೆಪಿ ಅಭ್ಯರ್ಥಿ ಮುಂದಿದ್ದಾರೆ. ಬಿಜೆಪಿಯ ಎ. ನಾರಾಯಣಸ್ವಾಮಿ ಈವರೆಗೆ 27 ವಾಹನಗಳಿಗೆ ಅನುಮತಿ ಪಡೆದಿದ್ದಾರೆ.ಅದರಲ್ಲಿ ಏಪ್ರಿಲ್ 9ಕ್ಕೆ 12ವಾಹನಗಳಿಗೆ ಪಡೆಯಲಾಗಿದ್ದ ಅವಧಿ ಪೂರ್ಣಗೊಂಡಿದೆ.ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕಾಗಿ ಜನರನ್ನು ಸೆಳೆಯಲು ಈ ವಾಹನಗಳನ್ನು ಬಳಸಿಕೊಂಡಿರುವ ಸಾಧ್ಯತೆ ಇವೆ. ಉಳಿದ 15 ವಾಹನ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಮೈತ್ರಿ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ 17 ವಾಹನಗಳಿಗೆ ಅನುಮತಿ ಪಡೆದಿದ್ದಾರೆ. ಅದರಲ್ಲಿ ಪ್ರಚಾರಕ್ಕಾಗಿ 13 ಇನ್ನೋವಾ ಕಾರುಗಳಿವೆ. ಕಣದಲ್ಲಿರುವ ಒಟ್ಟು 19 ಅಭ್ಯರ್ಥಿಗಳ ಪೈಕಿ 8 ಅಭ್ಯರ್ಥಿಗಳು ವಾಹನಗಳಿಗೆ ಅನುಮತಿ ಪಡೆದು ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ.ಅರ್ಜಿ ಸಲ್ಲಿಸಿ ಈಗಾಗಲೇ ಅನುಮತಿ ಪಡೆದು ನೇರ ಹಣಾಹಣಿ ಎದುರಿಸುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ವಾಹನಗಳು ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದು, ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದೆ.

ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಭ್ಯರ್ಥಿ ಸಿ.ಯು. ಮಹಂತೇಶ್ 5 ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ವೈ. ಕುಮಾರ್ 7, ಎಲ್. ರಂಗಪ್ಪ 5, ವೈ. ಅರುಣಾಚಲಂ 3, ಎಲ್. ವೇಣುಗೋಪಾಲ್ 2, ಎಂ.ಕೆ. ಲೋಕೇಶ್ 1 ವಾಹನಕ್ಕೆ ಅನುಮತಿ ಪಡೆದಿದಿದ್ದಾರೆ. ಕೆಲವರು ವಾರ, ದಿನಗಳ ಲೆಕ್ಕದಲ್ಲಿ ಅನುಮತಿ ಪಡೆದಿದ್ದಾರೆ. ಏ.16ರವರೆಗೂ ಅಭ್ಯರ್ಥಿಗಳ ಪ್ರಚಾರಕ್ಕೆ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.