ADVERTISEMENT

ಚಿತ್ರದುರ್ಗ: ಮಹಾಗಣಪನ ವಿಸರ್ಜನೆಗೆ ಕೋಟೆನಾಡು ಸಜ್ಜು

ವಿದ್ಯುತ್‌ ದೀಪಾಲಂಕಾರದಿಂದ ಜಗಮಗಿಸುತ್ತಿರುವ ಪಾಳೆಗಾರರ ನಾಡು * ಪ್ರಮುಖ ವೃತ್ತಗಳೆಲ್ಲ ಕೇಸರಿಮಯ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 16:38 IST
Last Updated 1 ಅಕ್ಟೋಬರ್ 2021, 16:38 IST
ಚಿತ್ರದುರ್ಗದ ಹಿಂದೂ ಮಹಾಗಣಪತಿ ಮೂರ್ತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಅಲಂಕೃತಗೊಂಡಿರುವ ಮದಕರಿನಾಯಕ ವೃತ್ತ. ಪ್ರಜಾವಾಣಿ ಚಿತ್ರ: ಭವಾನಿ ಮಂಜು.
ಚಿತ್ರದುರ್ಗದ ಹಿಂದೂ ಮಹಾಗಣಪತಿ ಮೂರ್ತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಅಲಂಕೃತಗೊಂಡಿರುವ ಮದಕರಿನಾಯಕ ವೃತ್ತ. ಪ್ರಜಾವಾಣಿ ಚಿತ್ರ: ಭವಾನಿ ಮಂಜು.   

ಚಿತ್ರದುರ್ಗ: ಇಲ್ಲಿಯ ಪ್ರಮುಖ ವೃತ್ತಗಳೆಲ್ಲ ಕೇಸರಿಮಯವಾಗಿವೆ. ಸಂಜೆ ಆಗುತ್ತಿದ್ದಂತೆ ಜಗಮಗಿಸುವ ವಿದ್ಯುದ್ದೀಪಗಳು ದಾರಿಹೋಕರನ್ನು ಆಕರ್ಷಿಸುತ್ತಿವೆ. ಕಣ್ಣು ಹಾಯಿಸಿದಷ್ಟು ದೂರದವರೆಗೂ ಮಿನುಗುವ ದೀಪಗಳು ಕಂಗೊಳಿಸುತ್ತಿವೆ.

ಕೋಟೆನಗರಿಯ ‘ಹಿಂದೂ ಮಹಾಗಣಪತಿ ವಿಸರ್ಜನೆ’ ಅ. 2ರಂದು ನಡೆಯಲಿದೆ. ಅದರ ಅಂಗವಾಗಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದಿಂದ ಸಕಲ ಸಿದ್ಧತೆಗಳು ಜೋರಾಗಿ ನಡೆದಿದ್ದು, ನಗರ ಸಂಭ್ರಮದಿಂದ ಸಜ್ಜಾಗುತ್ತಿದೆ.

ಮದಕರಿನಾಯಕ ವೃತ್ತವನ್ನು ರಾಜ ವೈಭವದ ಮಾದರಿಯಲ್ಲೇ ಅಲಂಕರಿಸಲಾಗಿದ್ದು, ನಾಯಕರು ಕುದುರೆ ಏರಿ ಬರುತ್ತಿದ್ದಾರೆ ಎಂಬಂತೆ ಭಾಸವಾಗುತ್ತದೆ. ಕೆಳಭಾಗವನ್ನು ಕಮಲದ ಹೂವಿನ ಮಾದರಿಯಲ್ಲಿ ನಿರ್ಮಿಸಲಾಗಿದೆ. ಅಲ್ಲದೇ, ವಿದ್ಯುದೀಪಗಳಿಂದಲೂ ವರ್ಣರಂಜಿತವಾಗಿ ಸಿಂಗಾರಗೊಳಿಸಲಾಗಿದೆ. ಸಂಜೆಯ ವೇಳೆ ಕೆಲವರು ಫೋಟೊಗಳನ್ನು ಕ್ಲಿಕ್ಕಿಸಿಕೊಂಡರೆ, ಮತ್ತೆ ಕೆಲವರು ಸೆಲ್ಫಿಗೆ ಮುಗಿಬೀಳುತ್ತಿದ್ದಾರೆ.

ADVERTISEMENT

ಇಲ್ಲಿನ ಅನೇಕ ಆಟೊಗಳ ಮೇಲೆ ಈಗಾಗಲೇ ಕೇಸರಿ ಧ್ವಜಗಳು ಹಾರಾಡುತ್ತಿವೆ. ಹಿಂಭಾಗದಲ್ಲಿ 2ರಂದು ವಿಸರ್ಜನೆ ಮಹೋತ್ಸವ ಎಂಬ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ನೂರಾರು ಯುವಕ-ಯುವತಿಯರು ಸ್ವಯಂ ಪ್ರೇರಿತರಾಗಿ ವಿವಿಧ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿದ್ಯುದೀಪಗಳ ಸಿಂಗಾರ:ಹಿಂದೂ ಮಹಾಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿರುವ ಜೈನಧಾಮದ ಬಿ.ಡಿ. ರಸ್ತೆಯಿಂದ ಗಾಂಧಿ ವೃತ್ತದವರೆಗೂ ಅಲ್ಲಲ್ಲಿ ವರ್ಣರಂಜಿತ ವಿದ್ಯುತ್ ದೀಪಗಳ ಅಲಂಕಾರದೊಂದಿಗೆ ನಗರ ಕಂಗೊಳಿಸುತ್ತಿದೆ. ಹಿಂದಿನ ವರ್ಷಕ್ಕಿಂತಲೂ ಈ ಬಾರಿ ವಿದ್ಯುದೀಪಾಲಂಕಾರಕ್ಕೆ ಒತ್ತು ನೀಡಲಾಗಿದೆ.

ಅದ್ದೂರಿ ಬೀಳ್ಕೊಡುಗಾಗಿ ಸಿದ್ಧತೆ: 20 ದಿನಗಳ ಹಿಂದೆ ಪುರ ಪ್ರವೇಶಿಸಿದ ಮಹಾಗಣಪನನ್ನು ಸಂಭ್ರಮದೊಂದಿಗೆ ಬೀಳ್ಕೊಡಲು ಭಕ್ತರು ಸಜ್ಜಾಗುತ್ತಿದ್ದಾರೆ. ಹಿಂದಿನ ವರ್ಷದಂತೆ ಸ್ವಾತಂತ್ರ್ಯ ಮತ್ತು ವೀರ ಯೋಧರ ಸ್ತಬ್ಧ ಚಿತ್ರಗಳು, ನಾಲ್ಕೈದು ಜನಪದ ಕಲಾತಂಡಗಳೊಂದಿಗೆ ಕಳುಹಿಸಿಕೊಡಲು ಸಿದ್ಧತೆ ಭರದಿಂದ ಸಾಗಿದೆ.

ಆಯೋಜಕರು ಈ ಬಾರಿಯೂ ವಿಸರ್ಜನಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲೆಯ ವಿವಿಧ ಮಠಾಧೀಶರನ್ನು ಆಹ್ವಾನಿಸಿದ್ದಾರೆ. ಅನೇಕ ಸಂಸ್ಥೆಗಳು ಸ್ವಇಚ್ಛೆಯಿಂದ ತಮ್ಮ ವ್ಯಾಪ್ತಿಯಲ್ಲಿ ವಿದ್ಯುದೀಪಾಲಂಕಾರ ಮಾಡಿಕೊಳ್ಳುತ್ತಿದ್ದಾರೆ. ವ್ಯಾಪಾರಸ್ಥರೂ ಇದಕ್ಕೆ ಹೊರತಾಗಿಲ್ಲ. ಮುಖ್ಯ ರಸ್ತೆ ಮಾರ್ಗಗಳಲ್ಲಿನ ಅಂಗಡಿಗಳ ಮುಂಭಾಗದಲ್ಲೂ ಈ ದೃಶ್ಯ ಕಂಡು ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.