ADVERTISEMENT

1ರಿಂದ ಸಾಮಾಜಿಕ, ಆರ್ಥಿಕ, ಜಾತಿ ಗಣತಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 9:45 IST
Last Updated 15 ಅಕ್ಟೋಬರ್ 2011, 9:45 IST

ಚಿತ್ರದುರ್ಗ: ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ಕಾರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ಸಮೀಕ್ಷೆ ಕಾರ್ಯಕೈಗೊಳ್ಳುವ ಬಗ್ಗೆ ಗಣತಿದಾರರಿಗೆ ತರಬೇತಿ ನೀಡುವ ಕುರಿತು ಪೂರ್ವಸಿದ್ದತಾ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ಕಾರ್ಯ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಎರಡು ಹಂತದಲ್ಲಿ ಗಣತಿ ಸಮೀಕ್ಷೆ ನಡೆಯುತ್ತಿದೆ. ಮೊದಲ ಹಂತದ ಸಮೀಕ್ಷೆ ಕಾರ್ಯದಲ್ಲಿ ಚಿತ್ರದುರ್ಗ ಜಿಲ್ಲೆ ಸೇರಿದೆ. ಜಿಲ್ಲೆಯಲ್ಲಿ ಗಣತಿ ಸಮೀಕ್ಷೆ ಕಾರ್ಯವು ಸಮರ್ಪಕವಾಗಿ ಮತ್ತು ಯಶಸ್ವಿಯಾಗಿ ಕೈಗೊಳ್ಳಬೇಕು ಎಂದು ಸೂಚಿಸಿದರು.

ಗಣತಿ ಕಾರ್ಯವನ್ನು ವ್ಯವಸ್ಥಿತವಾಗಿ ಹಾಗೂ ಸಮರ್ಪಕವಾಗಿ ನಡೆಸಲು ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಗಣತಿ ಕಾರ್ಯ ಯಶಸ್ವಿಯಾಗಿ ನಡೆಯುವ ಬಗ್ಗೆ ಉಸ್ತುವಾರಿ ನೋಡಿಕೊಳ್ಳುವುದು ಸಮಿತಿಯ ಹೊಣೆಯಾಗಿದ್ದು, ಗಣತಿ ಸಮೀಕ್ಷೆ ಕಾರ್ಯವು ಪರಿಣಾಮಕಾರಿಯಾಗಿ ನಡೆಯುವಂತೆ ಎಲ್ಲಾ ಅಧಿಕಾರಿಗಳು ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಗಣತಿದಾರರು ಮತ್ತು ದತ್ತಾಂಶ ನಮೂದಕರು (ಡಾಟಾ ಎಂಟ್ರಿ ಆಪರೇಟರ್) ಕುಟುಂಬ ಸಮೀಕ್ಷೆ (ಹೌಸ್‌ಲಿಸ್ಟ್) ಮಾಡುವಲ್ಲಿ ಹಾಗೂ ಮಾಹಿತಿ ಸಂಗ್ರಹಿಸುವಲ್ಲಿ ಒಂದು ತಂಡವಾಗಿ ಕಾರ್ಯನಿರ್ವಹಿಸಿ ನಿಖರವಾದ ಮಾಹಿತಿ ಕ್ರೋಢೀಕರಿಸಲು ತಿಳಿಸಿದರು.

ಗಣತಿ ಕಾರ್ಯಕ್ಕೆ ನಿಯೋಜನೆಯಾದವರು ಕಡ್ಡಾಯವಾಗಿ ತರಬೇತಿಯಲ್ಲಿ ಭಾಗವಹಿಸುವ ಹಾಗೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ನ.1ರಿಂದ ಗಣತಿ ಕಾರ್ಯ ಪ್ರಾರಂಭವಾಗಲಿದೆ. ಅ.31ರ ಒಳಗೆ ಗಣತಿದಾರರಿಗೆ, ತರಬೇತಿದಾರರ ತರಬೇತಿದಾರರು (ಮಾಸ್ಟರ್ ಟ್ರೈನರ್) ಹಾಗೂ ಮೇಲ್ವಿಚಾರಕರಿಗೆ ಸೂಕ್ತವಾದ ತರಬೇತಿ ನೀಡುವ ಕಾರ್ಯವನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಗಣತಿದಾರರ ಪಟ್ಟಿಯನ್ನು ಎಲ್ಲಾ ತಹಶೀಲ್ದಾರರು ಶನಿವಾರದ ಒಳಗೆ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಪಿ.ಚಂದ್ರಪ್ಪ ಅವರು  2011ರ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ಸಮೀಕ್ಷೆ ಕಾರ್ಯದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಗಣತಿ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕಾಗಿದ್ದು, ಡಿಸೆಂಬರ್ ಅಂತ್ಯದೊಳಗಾಗಿ ಗಣತಿ ವರದಿ ಸಿದ್ಧಪಡಿಸಬೇಕಾಗಿದೆ ಎಂದು ತಿಳಿಸಿದರು.

ಸಮೀಕ್ಷೆ ಕಾರ್ಯ ಕೈಗೊಳ್ಳಲು ಜಿಲ್ಲೆಯಲ್ಲಿ 3629 ಬ್ಲಾಕ್‌ಗಳನ್ನು ರಚಿಸಲಾಗಿದ್ದು, 907 ಗಣತಿದಾರರು ಹಾಗೂ 160 ಮೇಲ್ವಿಚಾರಕರನ್ನು ಗಣತಿ ಕಾರ್ಯಕ್ಕೆ ನಿಯೋಜನೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅ. 20 ಮತ್ತು 21ರಂದು ಮಾಸ್ಟರ್ ಟ್ರೈನರ್‌ಗಳಿಗೆ ತರಬೇತಿ ಹಾಗೂ ಅ. 28, 29, 30ರಂದು ಗಣತಿದಾರರಿಗೆ ತರಬೇತಿ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎ.ಎಸ್. ನಿರ್ವಾಣಪ್ಪ, ಜಿಲ್ಲಾಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ಮುಖ್ಯಾಧಿಕಾರಿಗಳು, ನಗರಸಭೆ ಆಯುಕ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.