ADVERTISEMENT

ಒಬ್ಬ ಅಭ್ಯರ್ಥಿ ಪರೀಕ್ಷೆಗೆ 12 ಸಿಬ್ಬಂದಿ

ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 23 ಮೇ 2022, 2:58 IST
Last Updated 23 ಮೇ 2022, 2:58 IST
ಚಿತ್ರದುರ್ಗದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಪರೀಕ್ಷೆ ಬರೆದು ಹೊರಗೆ ಬಂದ ಅಭ್ಯರ್ಥಿ.
ಚಿತ್ರದುರ್ಗದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಪರೀಕ್ಷೆ ಬರೆದು ಹೊರಗೆ ಬಂದ ಅಭ್ಯರ್ಥಿ.   

ಚಿತ್ರದುರ್ಗ: ಪದವೀಧರ ಪ್ರಾಥಮಿಕ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಒಬ್ಬ ಅಭ್ಯರ್ಥಿ ಮಾತ್ರ ಹಾಜರಾಗಿದ್ದು, 12 ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದಾರೆ.

ಭಾನುವಾರ ಬೆಳಿಗ್ಗೆ ಗಣಿತ, ಇಂಗ್ಲಿಷ್‌, ಸಮಾಜ ವಿಜ್ಞಾನ ಹಾಗೂ ಮಧ್ಯಾಹ್ನ ಭಾಷಾಕೌಶಲ ವಿಷಯದ ಪರೀಕ್ಷೆ ನಡೆಯಿತು. ಸಮಾಜ ವಿಜ್ಞಾನ ವಿಭಾಗದಲ್ಲಿ ಈ ಕೇಂದ್ರದಲ್ಲಿ ಸೋಮಶೇಖರ್‌ ಎಂಬ ಅಭ್ಯರ್ಥಿ ಮಾತ್ರ ಪರೀಕ್ಷೆ ಬರೆದರು.

ಪರೀಕ್ಷೆಗೆ ಜಿಲ್ಲೆಯಲ್ಲಿ ಎಂಟು ಕೇಂದ್ರಗಳನ್ನು ತೆರೆಯಲಾಗಿತ್ತು. ಪ್ರತಿ ಕೇಂದ್ರಕ್ಕೆ 200ಕ್ಕೂ ಅಧಿಕ ಅಭ್ಯರ್ಥಿಗಳನ್ನು ನಿಯೋಜಿಸಲಾಗಿತ್ತು. ನಾಲ್ವರು ಅಭ್ಯರ್ಥಿಗಳಿಗೆ ಮಾತ್ರ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಈ ಪೈಕಿ ಮೂವರು ಪರೀಕ್ಷೆಗೆ ಗೈರಾಗಿದ್ದರಿಂದ ಒಬ್ಬ ವಿದ್ಯಾರ್ಥಿ ಮಾತ್ರ ಪರೀಕ್ಷೆ ಬರೆಯಬೇಕಾಯಿತು.

ADVERTISEMENT

ಬೆಳಿಗ್ಗೆ ನಡೆದ ಪರೀಕ್ಷೆಗೆ 1,166 ಜನರು ಹಾಜರಿದ್ದರು, 552 ಗೈರು ಹಾಜರಾಗಿದ್ದರು. ಮಧ್ಯಾಹ್ನದ ಭಾಷಾ ಕೌಶಲ ವಿಷಯದ ಪರೀಕ್ಷೆಗೆ ನೋಂದಣಿಯಾಗಿದ್ದ 1,718ರಲ್ಲಿ ಅಭ್ಯರ್ಥಿಗಳಲ್ಲಿ 1164 ಹಾಜರಾಗಿದ್ದು, 554 ಗೈರಾಗಿದ್ದರು. ಎಲ್ಲ ಕೇಂದ್ರಗಳಲ್ಲಿ ಪರೀಕ್ಷೆ ಸುಗಮವಾಗಿ ನಡೆಯಿತು.

‘ಶಿಕ್ಷಕರ ಸ್ಪರ್ಧಾತ್ಮಕ ಪರೀಕ್ಷೆ ಸುಗಮವಾಗಿ ನಡೆದಿದೆ. ಯಾವುದೇ ಲೋಪ ಉಂಟಾಗದಂತೆ ಜಿಲ್ಲಾಡಳಿತ ಎಚ್ಚರವಹಿಸಿ ಪರೀಕ್ಷೆ ನಡೆಸಲಾಗಿದೆ’ ಎಂದು ಡಿಡಿಪಿಐ ಕೆ.ರವಿಶಂಕರ್‌ ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.