ADVERTISEMENT

ಕೋವಿಡ್‌ ಚಿಕಿತ್ಸೆಗೆ 1,267 ಹಾಸಿಗೆ

ಜಿ.ಬಿ.ನಾಗರಾಜ್
Published 10 ಮೇ 2021, 5:05 IST
Last Updated 10 ಮೇ 2021, 5:05 IST
ಚಿತ್ರದುರ್ಗದ ಕೋವಿಡ್ ಆಸ್ಪತ್ರೆ
ಚಿತ್ರದುರ್ಗದ ಕೋವಿಡ್ ಆಸ್ಪತ್ರೆ   

ಚಿತ್ರದುರ್ಗ: ಕೊರೊನಾ ಸೋಂಕಿನ ಎರಡನೇ ಅಲೆಯನ್ನು ಎದುರಿಸಲು ಸಜ್ಜಾಗಿರುವ ಜಿಲ್ಲಾಡಳಿತ ಚಿತ್ರದುರ್ಗ ಜಿಲ್ಲೆಯಲ್ಲಿ 1,267 ಹಾಸಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ. ಜಿಲ್ಲಾ ಆಸ್ಪತ್ರೆ, ಐದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, 11 ಸಮುದಾಯ ಆರೋಗ್ಯ ಕೇಂದ್ರ ಹಾಗೂ ಐದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಾಗುತ್ತಿದೆ.

ಸೋಂಕು ಕಾಣಿಸಿಕೊಂಡ ತಕ್ಷಣ ಹಾಸಿಗೆ ಪಡೆಯಲು ಪರದಾಡುತ್ತಿದ್ದ ರೋಗಿಗಳ ಸ್ಥಿತಿ ಕಂಡು ವೈದ್ಯಕೀಯ ಸೌಲಭ್ಯವನ್ನು ಮೇಲ್ದರ್ಜೆಗೆ ಏರಿಸುವ ಪ್ರಯತ್ನ ನಡೆಯುತ್ತಿದೆ. ಆಮ್ಲಜನಕ ಪೂರೈಕೆ, ರೆಮ್‌ಡಿಸಿವಿರ್‌ ಚುಚ್ಚುಮದ್ದು ಅಗತ್ಯ ಪೂರೈಕೆಯ ಮೇಲೆ ಜಿಲ್ಲಾಡಳಿತ ನಿಗಾ ಇಟ್ಟಿದೆ. ಪ್ರತಿ ತಾಲ್ಲೂಕಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮೂರು ದಿನಗಳಿಗೊಮ್ಮೆ ಪ್ರತಿ ತಾಲ್ಲೂಕಿನ ವರದಿಯನ್ನು ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಪಡೆಯುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ 450 ಹಾಸಿಗೆಗಳಲ್ಲಿ 175 ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಮೀಸಲಿಡಲಾಗಿದೆ. ಇನ್ನೂ 200 ಹಾಸಿಗೆಗಳನ್ನು ಒದಗಿಸಲು ಸಿದ್ಧತೆ ನಡೆಯುತ್ತಿದೆ. ಆಮ್ಲಜನಕ ಪೂರೈಕೆಯ ಆಶ್ವಾಸನೆ ಸಿಕ್ಕ ಬಳಿಕ ಈ ಹಾಸಿಗೆಗಳೂ ಸಜ್ಜಾಗಲಿವೆ. ವೇದಾಂತ ಗಣಿ ಕಂಪನಿಯ ಸಹಯೋಗದಲ್ಲಿ 100 ಹಾಸಿಗೆಯ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣವೂ ಪ್ರಾರಂಭವಾಗಿದೆ.

ADVERTISEMENT

ಪಾಸಿಟಿವ್‌ ಪ್ರಮಾಣ ಶೇ 5:ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇತರ ಜಿಲ್ಲೆಗಳಿಗಿಂತ ಕಡಿಮೆ ಇದೆ. 1,644 ಸಕ್ರಿಯ ಪ್ರಕರಣಗಳಿದ್ದು, 737 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದವರು ಮನೆಯಲ್ಲೇ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಾಸರಿ ನಿತ್ಯ ಎರಡು ಸಾವಿರ ಜನರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸರಾಸರಿ ಪಾಸಿಟಿವ್‌ ಪ್ರಕರಣಗಳ ಪ್ರಮಾಣ ಶೇ 5ರಷ್ಟಿದೆ. ರಾಜ್ಯದ ಸರಾಸರಿ ಪಾಸಿಟಿವ್‌ ಪ್ರಮಾಣಕ್ಕೆ ಹೋಲಿಸಿದರೆ ಇದು ಕಡಿಮೆ. ಗುಣಮುಖರಾದವರ ಪ್ರಮಾಣ ಶೇ 99ರಷ್ಟಿದ್ದು, ಮರಣ ಪ್ರಮಾಣ ಶೇ 1ಕ್ಕೆ ಏರಿಕೆಯಾಗಿದೆ. ಏ.1ರಿಂದ ಕಾಣಿಸಿಕೊಂಡ ಕೋವಿಡ್ ಎರಡನೇ ಅಲೆಗೆ ಈವರೆಗೆ 35 ಜನರು ಮೃತಪಟ್ಟಿದ್ದಾರೆ. ಇದರಲ್ಲಿ 12 ಮಾತ್ರ ಕೋವಿಡ್ ಸಾವು ಎಂದು ಪರಿಗಣಿಸಲಾಗಿದೆ.

ಜಿಲ್ಲಾ ಆಸ್ಪತ್ರೆಯ ಎಲ್ಲ ಹಾಸಿಗೆಗಳು ಆಮ್ಲಜನಕ ಸೌಲಭ್ಯ ಹೊಂದಿವೆ. ನಿತ್ಯ ಇಲ್ಲಿಗೆ ಮೂರು ಸಾವಿರ ಲೀಟರ್‌ ವೈದ್ಯಕೀಯ ಆಮ್ಲಜನಕದ ಅಗತ್ಯವಿದೆ. ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ನಿತ್ಯ ಒಂದು ಸಾವಿರ ಲೀಟರ್‌ ವೈದ್ಯಕೀಯ ಆಮ್ಲಜನಕದ ಅಗತ್ಯವಿದೆ. ನಿತ್ಯ ಆರು ಸಾವಿರ ಲೀಟರ್‌ ಆಮ್ಲಜನಕ ಜಿಲ್ಲೆಗೆ ಪೂರೈಕೆ ಆಗುತ್ತಿದೆ. ದಾವಣಗೆರೆ, ಹರಿಹರ, ಹೊಸಪೇಟೆ, ಭದ್ರಾವತಿ ಸೇರಿ ಹಲವೆಡೆಗಳಿಂದ ಆಮ್ಲಜನಕ ಬರುತ್ತಿದೆ. ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ 35 ಜಂಬೋ ಸಿಲಿಂಡರ್‌ ದಾಸ್ತಾನು ಇಡಲಾಗಿದೆ. ತುರ್ತು ಸಂದರ್ಭದಲ್ಲಿ ಇವನ್ನು ಬಳಕೆ ಮಾಡಲಾಗುತ್ತದೆ.

ಐದು ಖಾಸಗಿ ಆಸ್ಪತ್ರೆ:ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯೂ ಸೇರಿ ಜಿಲ್ಲೆಯ ಐದು ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್‌ ಚಿಕಿತ್ಸೆಗೆ ಅನುಮತಿ ನೀಡಲಾಗಿದೆ. ಇಲ್ಲಿ 243 ಹಾಸಿಗೆಗಳು ಲಭ್ಯವಿದ್ದು, ಶೇ 50ರಷ್ಟು ಹಾಸಿಗೆಗಳನ್ನು ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸು ಮಾಡಲಾದ ರೋಗಿಗಳಿಗೆ ಮೀಸಲಿಡುವಂತೆ ಸೂಚನೆ ನೀಡಲಾಗಿದೆ. ಈವರೆಗೆ ಒಬ್ಬ ರೋಗಿಯೂ ಸರ್ಕಾರಿ ಆಸ್ಪತ್ರೆಯ ಶಿಫಾರಸಿನ ಮೇಲೆ ಇಲ್ಲಿ ದಾಖಲಾಗಿಲ್ಲ.

‘ಕರ್ನಾಟಕ ಖಾಸಗಿ ಆಸ್ಪತ್ರೆಗಳ ಕಾಯ್ದೆಯಡಿ ನೋಂದಣಿಯಾದ ಎಲ್ಲ ಆಸ್ಪತ್ರೆಗಳು ಕೋವಿಡ್‌ ಚಿಕಿತ್ಸೆಗೆ ಅರ್ಹತೆ ಪಡೆದಿವೆ. ಹಾಸಿಗೆ ಲಭ್ಯತೆ, ವೈದ್ಯಕೀಯ ಪರಿಕರಗಳ ಸ್ಥಿತಿ, ಸಿಬ್ಬಂದಿ ಸೇರಿ ಇತರ ಸೌಲಭ್ಯಗಳನ್ನು ಹೊಂದಿರಬೇಕು. ಕೋವಿಡ್ ಚಿಕಿತ್ಸೆಗೆ ಅನೇಕ ಖಾಸಗಿ ಆಸ್ಪತ್ರೆಗಳು ಮುಂದೆ ಬಂದಿದ್ದವು. ಎರಡನೇ ಅಲೆಯ ತೀವ್ರತೆಯನ್ನು ಕಂಡು 60 ವರ್ಷ ಮೇಲ್ಪಟ್ಟ ವೈದ್ಯರು ಹಿಂದೇಟು ಹಾಕಿದರು’ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌. ಫಾಲಾಕ್ಷ.

22 ಹಾಸ್ಟೆಲ್‌ನಲ್ಲಿ ಚಿಕಿತ್ಸೆಗೆ ಸಿದ್ಧತೆ:ಕಡಿಮೆ ರೋಗ ಲಕ್ಷಣ ಹೊಂದಿ ಮನೆಯಲ್ಲೇ ಪ್ರತ್ಯೇಕವಾಗಿರುವ ರೋಗಿಗಳ ಚಿಕಿತ್ಸೆಗೆ ಜಿಲ್ಲೆಯ 22 ಕಡೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ ಅಧೀನದಲ್ಲಿರುವ ಹಾಸ್ಟೆಲ್‌ ಹಾಗೂ ವಸತಿ ಶಾಲೆಗಳಲ್ಲಿ ಈ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

ಮನೆಯಲ್ಲೇ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುವವರಿಂದ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಗೊತ್ತಾಗಿದೆ. ಅನೇಕರು ಹೊರಗೆ ಸಂಚರಿಸಿ ಸೋಂಕು ಪಸರಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಬಹುತೇಕ ಮನೆಗಳಲ್ಲಿ ಸೋಂಕಿತರಿಗೆ ಪ್ರತ್ಯೇಕ ಕೊಠಡಿ, ಶೌಚಾಲಯದ ವ್ಯವಸ್ಥೆ ಇಲ್ಲ. ಹೀಗಾಗಿ, ಜಿಲ್ಲಾಡಳಿತ ಕೋವಿಡ್‌ ಆರೈಕೆ ಕೇಂದ್ರಗಳನ್ನು ತೆರೆಯುತ್ತಿದೆ.

ಆಸ್ಪತ್ರೆ ಮಾದರಿಯಲ್ಲೇ ಹಾಸಿಗೆ ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸಲಾಗುತ್ತದೆ. ಇಬ್ಬರು ವೈದ್ಯರು,ಇಬ್ಬರು ಶುಶ್ರೂಷಕಿಯರು
ಸೇರಿ ಇತರ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಸೋಂಕಿತರ ಮೇಲೆ ದಿನವಿಡೀ ನಿಗಾ ಇಡಲಾಗುತ್ತದೆ. ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದ್ದು, ಕಂಡುಬಂದರೆ ತಕ್ಷಣ ಆಮ್ಲಜನಕ ಸೌಲಭ್ಯ ಹೊಂದಿದ ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ ಅಥವಾ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ. ಸೋಂಕಿತರಿಗೆ ಊಟ, ವಸತಿ, ಚಿಕಿತ್ಸೆ ಉಚಿತವಾಗಿ ಸಿಗಲಿದೆ.

ಇತರ ರೋಗಿಗಳಿಗೂ ಚಿಕಿತ್ಸೆ:ಕೋವಿಡ್‌ ಚಿಕಿತ್ಸೆಗೆ ಗಮನ ಹರಿಸಿದ್ದರಿಂದ ಇತರ ರೋಗಿಗಳ ಚಿಕಿತ್ಸೆಗೆ ತೊಂದರೆ ಉಂಟಾಗಿದೆ. ಜಿಲ್ಲಾ ಆಸ್ಪತ್ರೆಯ ಹೊರ ರೋಗಿ ವಿಭಾಗಕ್ಕೆ ಭೇಟಿ ನೀಡುವ ರೋಗಿಗಳ ಸಂಖ್ಯೆ ಅರ್ಧದಷ್ಟು ಕುಸಿದಿದೆ. ಆದರೂ, ವೈದ್ಯಕೀಯ ಸಿಬ್ಬಂದಿಯ ಕೊರತೆಯ ಕಾರಣಕ್ಕೆ ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

‘ಕೋವಿಡ್‌ ಹೊರತಾದ ಚಿಕಿತ್ಸೆಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಹೆರಿಗೆ, ಶಸ್ತ್ರಚಿಕಿತ್ಸೆಗಳು ಎಂದಿನಂತೆ ನಡೆಯುತ್ತಿವೆ. ತುರ್ತು ಅಗತ್ಯ ಇರುವ ರೋಗಿಗಳನ್ನು ಮಾತ್ರ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ
ಡಾ.ಸಿ.ಎಲ್‌. ಫಾಲಾಕ್ಷ.

ಸಹಾಯವಾಣಿ ಸಂಖ್ಯೆ:7760022142, 7760057142

ಜಿಲ್ಲಾ ಆರೋಗ್ಯಾಧಿಕಾರಿ:94498 43044

ಜಿಲ್ಲಾ ಶಸ್ತ್ರಚಿಕಿತ್ಸಕ:9449843163

260 ಹಾಸಿಗೆ, 18 ರೋಗಿಗಳು

ಹೊಳಲ್ಕೆರೆ: ತಾಲ್ಲೂಕಿನ ವಿವಿಧೆಡೆ ಕೋವಿಡ್ ರೋಗಿಗಳಿಗೆ 260 ಹಾಸಿಗೆ ವ್ಯವಸ್ಥೆ ಮಾಡಲಾಗಿದ್ದು, 8 ರೋಗಿಗಳು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ.

‘ಹನುಮಂತದೇವರ ಕಣಿವೆಯ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯಲ್ಲಿ 60 ಹಾಸಿಗೆ, ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 60 ಹಾಸಿಗೆ, ಬೊಮ್ಮನಕಟ್ಟೆಯ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 60 ಹಾಸಿಗೆ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಹಾಸಿಗೆ, ಬಿ.ದುರ್ಗದ ಆಸ್ಪತ್ರೆಯಲ್ಲಿ 30 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಸದ್ಯ ಬಿ.ದುರ್ಗದ ಆಸ್ಪತ್ರೆಯಲ್ಲಿ 18 ರೋಗಿಗಳು ದಾಖಲಾಗಿದ್ದು, ಇನ್ನೂ 12 ಹಾಸಿಗೆ ಖಾಲಿ ಇವೆ. ಬಿ.ದುರ್ಗ ಹಾಗೂ ಪಟ್ಟಣದ ಆಸ್ಪತ್ರೆಗಳ 80 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಇದೆ’ ಎನ್ನುತ್ತಾರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜಯಸಿಂಹ.

ಆಮ್ಲಜನಕದ 40 ಲೀಟರ್‌ನ 16 ಜಂಬೋ ಸಿಲಿಂಡರ್, 10 ಲೀಟರ್‌ನ 12 ಮಿನಿ ಸಿಲಿಂಡರ್ ಲಭ್ಯ ಇವೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 3 ವೆಂಟಿಲೇಟರ್‌ಗಳಿದ್ದು, ಅರವಳಿಕೆ ಹಾಗೂ ವೆಂಟಿಲೇಟರ್‌ ಆಪರೇಟರ್ ತಂತ್ರಜ್ಞರು ಇಲ್ಲ. ಸಿಬ್ಬಂದಿ ಒದಗಿಸುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. 97 ರೋಗಿಗಳು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದಾರೆ.

9 ಕೋವಿಡ್ ಕೇರ್ ಸೆಂಟರ್

ಚಳ್ಳಕೆರೆ: ನಾಯಕನಹಟ್ಟಿಯ ಎನ್.ಮಹದೇವಪುರ, ಬಾಲೇನಹಳ್ಳಿ ಇಂದಿರಾಗಾಂಧಿ ವಸತಿಶಾಲೆ, ಪರಶುರಾಂಪುರ, ಚಳ್ಳಕೆರೆ ಮೊರಾರ್ಜಿ, ಕಿತ್ತೂರು ರಾಣಿ ಚನ್ನಮ್ಮ, ಆದರ್ಶ ಹಾಗೂ ದೇವರಾಜ ಅರಸು ವಸತಿ ವಿದ್ಯಾರ್ಥಿನಿಲಯ ಸೇರಿ ತಾಲ್ಲೂಕಿನಲ್ಲಿ ಒಟ್ಟು 9 ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ.

ಈ ಕೇಂದ್ರಗಳಲ್ಲಿ 200ಕ್ಕೂ ಹೆಚ್ಚು ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ವೈದ್ಯರು ಹಾಗೂ ಶುಶ್ರೂಷಕರು ಸೇರಿ ಇತರ ಸಿಬ್ಬಂದಿ ನಿಯೋಜನೆ ಮಾಡುವ ಮೂಲಕ ಸೋಂಕಿತರ ಚಿಕಿತ್ಸೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಚಳ್ಳಕೆರೆ ತಾಲ್ಲೂಕಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ 50 ಹಾಸಿಗೆಯ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿಗೆ ದಾಖಲಾಗುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. 20 ಜಂಬೋ, 19 ಮಧ್ಯಮ ಗಾತ್ರದ ಆಮ್ಲಜನಕ ಸಿಲಿಂಡರ್‌ಗಳಿವೆ. ಚಿತ್ರದುರ್ಗ, ಹರಿಹರ, ದಾವಣಗೆರೆಯಿಂದ ಆಮ್ಲಜನಕ ಪೂರೈಕೆ ಆಗುತ್ತಿದೆ ಎನ್ನುತ್ತಾರೆ ಆಡಳಿತಾಧಿಕಾರಿ ಡಾ.ವೆಂಕಟೇಶ್.

ನಾಯಕನಹಟ್ಟಿಯ ಸಮುದಾಯ ಆರೋಗ್ಯ ಕೇಂದ್ರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 15 ಹಾಸಿಗೆಗಳ ಸಮರ್ಪಿತ ಕೋವಿಡ್ ಆರೈಕೆ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ.

ಆರೋಗ್ಯದಲ್ಲಿ ಸ್ಥಿರತೆ ಇರುವ ಸೋಂಕಿತರಿಗೆ ಮಾತ್ರ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಮಸ್ಯೆ ಕಂಡುಬಂದ ತಕ್ಷಣ ಚಳ್ಳಕೆರೆಯ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ದಿನದ 24 ಗಂಟೆಯೂ ರೋಗಿಗಳಿಗೆ ಬಿಸಿನೀರು, ತಣ್ಣೀರಿನ ವ್ಯವಸ್ಥೆ ಇದೆ. ಸೋಂಕಿತರು ಬಟ್ಟೆ ತೊಳೆದುಕೊಳ್ಳಲು ವಾಷಿಂಗ್ ಮಷನ್, ಮನರಂಜನೆಗೆ ಟಿ.ವಿ. ವ್ಯವಸ್ಥೆ ಇದೆ ಎನ್ನುತ್ತಾರೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ವಿಕಾಸ್.

ಕೋವಿಡ್ ಪರೀಕ್ಷೆ ವಿರಳ

ಮೊಳಕಾಲ್ಮುರು: ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಾಪಿಸಿರುವ ಹೋಬಳಿ ಮಟ್ಟದ ಕೋವಿಡ್ ಕೇಂದ್ರಗಳಲ್ಲಿ ಪ್ರತಿದಿನ ಕೋವಿಡ್ ಪರೀಕ್ಷೆ ಮಾಡಲು ನೀಡುತ್ತಿರುವ ಕಿಟ್‌ಗಳು 4 ಮಾತ್ರ ಎಂದರೆ ಅಚ್ಚರಿಯಾಗಬಹುದು.

ತಾಲ್ಲೂಕಿನ ರಾಂಪುರದಲ್ಲಿ 30-40 ಹಳ್ಳಿಗಳಿಗೆ ಕೇಂದ್ರೀಕೃತವಾಗಿ ಕೋವಿಡ್ ಸೆಂಟರ್‌ ಸ್ಥಾಪಿಸಲಾಗಿದೆ. ಪ್ರಥಮ ಅಲೆ ಸಮಯದಲ್ಲಿ ಇದನ್ನು ಆರಂಭಿಸಲಾಗಿತ್ತು. ಈಗ 2ನೇ ಅಲೆ ವೇಗವಾಗಿ ಹಬ್ಬುತ್ತಿದ್ದು, ಎಲ್ಲ ಗ್ರಾಮಗಳಲ್ಲಿ ಸೋಂಕಿನ ಲಕ್ಷಣದವರು ಕಾಣಸಿಗುತ್ತಿದ್ದಾರೆ. ನಿತ್ಯ ಹತ್ತಾರು ಮಂದಿ ರೋಗ ಲಕ್ಷಣದವರು ಬರುತ್ತಾರೆ. ಆದರೆ, ಆರೋಗ್ಯ ಇಲಾಖೆ ಈ ಕೇಂದ್ರಕ್ಕೆ ನಿತ್ಯ 5 ಆರ್‌ಟಿಪಿಎಸ್ ಕಿಟ್ ನೀಡುತ್ತಿದೆ. ಇದರಲ್ಲಿ ನಾಲ್ಕು ಬಳಕೆ ಮಾಡಿ ಒಂದನ್ನು ತುರ್ತು ಪರೀಕ್ಷೆಗೆ ಮೀಸಲಿಡಬೇಕಿದೆ.

‘ಹೆಚ್ಚಿನ ಶಂಕಿತರು ಆಸ್ಪತ್ರೆಗೆ ಬಂದರೆ ತಾಲ್ಲೂಕು ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ. ಒಬ್ಬರಿಗೆ ಪರೀಕ್ಷೆ ಮಾಡಿ ಒಬ್ಬರನ್ನು ಬಿಟ್ಟರೆ ಉತ್ತರ ಕೊಡಲು ಆಗುವುದಿಲ್ಲ. ಜನಪ್ರತಿನಿಧಿಗಳಿಂದ ಫೋನ್ ಮಾಡಿಸುತ್ತಾರೆ. ಏನೂ ಮಾಡದ ಸ್ಥಿತಿಯಲ್ಲಿದ್ದೇವೆ’ ಎಂದು ಕೇಂದ್ರದ ಸಿಬ್ಬಂದಿ ಹೇಳುತ್ತಾರೆ.

ಇದರಿಂದ ತಾಲ್ಲೂಕು, ಜಿಲ್ಲಾ ಆಸ್ಪತ್ರೆಯ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಕೋವಿಡ್‌ ಕೇಂದ್ರಗಳಲ್ಲಿ ಆಮ್ಲಜನಕ ವ್ಯವಸ್ಥೆ ಕಲ್ಪಿಸಿದರೂ ಸೌಲಭ್ಯ ಸಿಗುತ್ತಿಲ್ಲ. ವಿದ್ಯುತ್ ಸಂಪರ್ಕ ನೀಡಿಲ್ಲ. ಅರಿವಳಿಕೆ ತಜ್ಞರ ಕೊರತೆಯ ಕಾರಣಕ್ಕೆ ಪೂರ್ಣ ಪ್ರಮಾಣದ ಆಮ್ಲಜನಕ ಸಹಿತ ಚಿಕಿತ್ಸೆ ಆರಂಭಿಸಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.