ADVERTISEMENT

14 ಸಾವಿರ ಹೆಕ್ಟೇರ್ ಈರುಳ್ಳಿ ಬಿತ್ತನೆ

ಕಳೆ ತೆಗೆಸುವಲ್ಲಿ ರೈತರು ತಲ್ಲೀನ, ಉತ್ತಮ ಬೆಳೆ–ಬೆಲೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 6:47 IST
Last Updated 16 ಜೂನ್ 2018, 6:47 IST
14 ಸಾವಿರ ಹೆಕ್ಟೇರ್ ಈರುಳ್ಳಿ ಬಿತ್ತನೆ
14 ಸಾವಿರ ಹೆಕ್ಟೇರ್ ಈರುಳ್ಳಿ ಬಿತ್ತನೆ   

ಚಿತ್ರದುರ್ಗ: ಜಿಲ್ಲೆಯಲ್ಲಿ ವಾಡಿಕೆಗೂ ಹೆಚ್ಚು ಪೂರ್ವ ಮುಂಗಾರು ಮಳೆ ಸುರಿದಿದ್ದರಿಂದ ಈರುಳ್ಳಿ ಬಿತ್ತನ ಬಹುತೇಕ ಪೂರ್ಣಗೊಂಡಿದೆ. ಕುಡಿಯೊಡೆದು ಬೆಳೆಯುತ್ತಿರುವ ಈರುಳ್ಳಿ ಬೆಳೆಯಲ್ಲಿರುವ ಕಳೆ ಕಿತ್ತು ಜಮೀನು ಹಸನು ಮಾಡುವಲ್ಲಿ ರೈತರು ತೊಡಗಿಕೊಂಡಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ಕಲ್ಲಹಳ್ಳಿ, ದೊಡ್ಡ ಸಿದ್ದವ್ವನಹಟ್ಟಿ, ಲಿಂಗಾವರಟ್ಟಿ, ಕಾಸರವಟ್ಟಿ ಸೇರಿ ಬಹುತೇಕ ಗ್ರಾಮಗಳಲ್ಲಿ ಈರುಳ್ಳಿ ಕುಡಿಯೊಡೆದು ಬೆಳೆದಿದೆ. ನೀರಾವರಿ ಸೌಲಭ್ಯ ಹೊಂದಿರುವ ಜಮೀನುಗಳಲ್ಲಿ ಮಾತ್ರ ಬೆಳೆ ನೆಲಬಿಟ್ಟು ಮೇಲೆದ್ದಿದೆ. ಮಳೆಯಾಶ್ರಿತ ಭೂಮಿಯಲ್ಲಿ ಈಗಷ್ಟೇ ಕುಡಿಯೊಡೆದಿದೆ.

ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 18 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯುವ ಗುರಿಯನ್ನು ತೋಟಗಾರಿಕಾ ಇಲಾಖೆ ಹೊಂದಿದೆ. ಈ ಪೈಕಿ ಶೇ 80ರಷ್ಟು ಭೂಮಿಯಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಮಾತ್ರ ಬಿತ್ತನೆಗೆ ರೈತರು ಕಾಯುತ್ತಿದ್ದಾರೆ. ಒಂದು ವಾರದಲ್ಲಿ ನಿರೀಕ್ಷಿತ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ADVERTISEMENT

‘ಆರು ಎಕರೆ ಜಮೀನು ಗುತ್ತಿಗೆ ಪಡೆದು ಈರುಳ್ಳಿ ಹಾಕಿದ್ದೇನೆ. ಎರಡು ಕೊಳವೆಬಾವಿ ಸೌಲಭ್ಯವಿದೆ. ಮಳೆ ನೀರು ಸಂಗ್ರಹಕ್ಕೆ ಕೃಷಿ ಹೊಂಡವೂ ಇದೆ. ತಿಂಗಳ ಹಿಂದೆ ಬಿತ್ತನೆ ಮಾಡಿದ್ದು, ಕಳೆ ಕಿತ್ತು ಭೂಮಿಯನ್ನು ಹಸನ ಮಾಡುತ್ತಿದ್ದೇವೆ’ ಎನ್ನುತ್ತಾರೆ ಹೊಸಕಲ್ಲಹಳ್ಳಿಯ ರೈತ ತಿಮ್ಮಪ್ಪ.

ಮೂವರು ಮಹಿಳೆಯರು ಮೂರು ದಿನಗಳಿಂದ ಕಳೆ ಕೀಳುವ ಕಾಯಕದಲ್ಲಿ ನಿರತರಾಗಿದ್ದಾರೆ. ವಾರದಿಂದ ಮಳೆ ಬೀಳದ ಪರಿಣಾಮ ಕೊಳವೆಬಾವಿಯ ನೀರನ್ನು ಜಮೀನಿಗೆ ಬಿಡಲಾಗಿದೆ. ತುಂತುರು ನೀರಾವರಿ ವ್ಯವಸ್ಥೆ ಮಾಡಿಕೊಂಡಿರುವ ರೈತರು ಬೆಳೆಯನ್ನು ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಜೋಡಿಚಿಕ್ಕನಹಳ್ಳಿ ಸೇರಿ ಹಲವೆಡೆ ಜಮೀನುಗಳಲ್ಲಿ ತುಂತುರು ನೀರಾವರಿಯ ಪೈಪುಗಳು ಕಾಣಿಸುತ್ತಿವೆ.

‘ಮೂರು ವರ್ಷದಿಂದ ಸತತವಾಗಿ ಈರುಳ್ಳಿ ಬೆಳೆಯುತ್ತಿದ್ದೇನೆ. ಆದರೆ, ನಿರೀಕ್ಷಿತ ಲಾಭ ಸಿಗುತ್ತಿಲ್ಲ. ಒಮ್ಮೊಮ್ಮೆ ಜಮೀನಿಗೆ ಹಾಕಿದ ಬಂಡವಾಳ ಕೂಡ ಸಿಗುವುದಿಲ್ಲ. ಮಳೆ ಉತ್ತಮವಾಗಿ ಸುರಿದಿದೆ. ಮಾರುಕಟ್ಟೆಯಲ್ಲಿ ತಕ್ಕ ಬೆಲೆ ಸಿಕ್ಕದರೆ ಜಮೀನಿನಂತೆ ಬದುಕು ಹಸನಾಗುತ್ತದೆ’ ಎಂಬುದು ತಿಮ್ಮಪ್ಪ ಅವರ ಆಶಯ.

ಈ ಜಮೀನಿನ ಸಮೀಪದಲ್ಲಿ ಮತ್ತೊಬ್ಬರು ಹಾಕಿದ ಈರುಳ್ಳಿ ಗೆಡ್ಡೆಯಾಗಿದೆ. ನೀರಾವರಿ ಸೌಲಭ್ಯ ಹೊಂದಿರುವ ಸುಮಾರು ಹತ್ತು ಎಕರೆ ಜಮೀನಿನಲ್ಲಿ ಈರುಳ್ಳಿ ನಳನಳಿಸುತ್ತಿದೆ. ಎರಡನೇ ಹಂತದ ಕಳೆ ತೆಗೆಯುವಲ್ಲಿ ರೈತ ಮಹಿಳೆಯರು ಶುಕ್ರವಾರ ತಲ್ಲೀನರಾಗಿದ್ದರು. ಚಳ್ಳಕೆರೆ, ಚಿತ್ರದುರ್ಗ ಹಾಗೂ ಹಿರಿಯೂರು ತಾಲ್ಲೂಕಿನಲ್ಲಿ ಈರುಳ್ಳಿ ಪ್ರಮುಖ ಬೆಳೆ. ಚಳ್ಳಕೆರೆ ತಾಲ್ಲೂಕಿನಲ್ಲಿ 5,704 ಹೆಕ್ಟೇರ್ ಪ್ರದೇಶದಲ್ಲಿ ರೈತರು ಈರುಳ್ಳಿ ಬಿತ್ತನೆ ಮಾಡಿದ್ದಾರೆ.

ಈರುಳ್ಳಿ ಬೆಳೆಯಲು ಎರಡು ಕೊಳವೆ ಬಾವಿ ಕೊರೆಸಿದ್ದೇನೆ. ಬಿತ್ತನೆ ಮಾಡಿದ ಕೆಲ ದಿನಗಳಲ್ಲಿ ಆಲಿಕಲ್ಲು ಸಹಿತ ಸುರಿದ ಮಳೆಗೆ ಬೆಳೆ ಹಾಳಾಯಿತು
ತಿಮ್ಮಪ್ಪ, ರೈತ, ಹೊಸ ಕಲ್ಲಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.