ADVERTISEMENT

₹ 89.06 ಲಕ್ಷ ಉಳಿತಾಯ ಬಜೆಟ್‌ ಮಂಡನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 9:37 IST
Last Updated 2 ಫೆಬ್ರುವರಿ 2018, 9:37 IST

ಹೊಸದುರ್ಗ: ಪಟ್ಟಣದ ನಾಗರಿಕರಿಗೆ ಸಮರ್ಪಕ ಮೂಲಸೌಕರ್ಯ ಪೂರೈಕೆಯ ಭರವಸೆ ಜತೆಗೆ, ₹ 89.06 ಲಕ್ಷ ಉಳಿತಾಯದ ಬಜೆಟ್‌ ಅನ್ನು ಪುರಸಭೆ ಅಧ್ಯಕ್ಷ ಕೆ.ಸ್ವಾಮಿ ಬುಧವಾರ ಮಂಡಿಸಿದರು.

ಪ್ರಾರಂಭಿಕ ಶಿಲ್ಕು ₹ 4.82 ಕೋಟಿ ಇದ್ದು, ಸ್ವಯಂ ಘೋಷಿತ ಆಸ್ತಿ ತೆರಿಗೆ ಮತ್ತು ದಂಡ ವಸೂಲಾತಿ ₹ 1.60 ಕೋಟಿ, ನೀರಿನ ಸಂಪರ್ಕ ಮತ್ತು ದಂಡ ವಸೂಲಾತಿ ಶುಲ್ಕ ₹ 40 ಲಕ್ಷ, ವಾಣಿಜ್ಯ ಮಳಿಗೆಗಳ ಬಾಡಿಗೆ ಮತ್ತು ಉದ್ಯಮ ಪರವಾನಿಗೆ ಶುಲ್ಕ ₹ 26 ಲಕ್ಷ, ಎನ್‌ಒಸಿ ಪರವಾನಗಿ, ಘನತ್ಯಾಜ್ಯ ವಸ್ತು ನಿರ್ವಹಣೆ, ಕಟ್ಟಡ ಪರವಾನಗಿ, ಜಾಹೀರಾತು ಮತ್ತು ನೆಲಬಾಡಿಗೆ ಶುಲ್ಕ ₹ 18 ಲಕ್ಷ, ಸಾರ್ವಜನಿಕ ಉದ್ದೇಶದ ನಿವೇಶನ ವಿಲೇವಾರಿಯಿಂದ ಬರುವ ಆದಾಯ ₹ 40 ಲಕ್ಷ ಬರಲಿದೆ. ಇನ್ನಿತರ ಮೂಲಗಳಿಂದ ಒಟ್ಟು ₹ 3.18 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದರು.

ಸರ್ಕಾರದ ಅನುದಾನ: ಎಸ್‌ಎಫ್‌ಸಿ ಯೋಜನೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಅನುದಾನ ₹ 10.22 ಕೋಟಿ, 14ನೇ ಹಣಕಾಸು ಯೋಜನೆ ಅನುದಾನ ₹ 1.57 ಕೋಟಿ, ನಗರೋತ್ಥಾನ ಅನುದಾನ ₹ 7.50 ಕೋಟಿ, ಸ್ಥಳೀಯ ಶಾಸಕ ಹಾಗೂ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನ ₹ 1 ಕೋಟಿ, ಘನತ್ಯಾಜ್ಯ ನಿರ್ವಹಣೆ ಅನುದಾನ ₹ 1.53 ಕೋಟಿ ಒಳಗೊಂಡಂತೆ ಒಟ್ಟು ₹ 22 ಕೋಟಿಗೂ ಅಧಿಕ ಅನುದಾನ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಪುರಸಭೆಗೆ 2018–19ನೇ ಸಾಲಿನಲ್ಲಿ ಒಟ್ಟು ₹ 59.94 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದು ಹೇಳಿದರು. ರಂಗಮಂದಿರಕ್ಕೆ ₹ 2 ಕೋಟಿ: ಕೊಳವೆ ಬಾವಿ ಕೊರೆಯಿಸಿ ಪಂಪ್‌ಸೆಟ್‌ ಅಳವಡಿಸುವುದಕ್ಕೆ ₹ 60 ಲಕ್ಷ, ಪೈಪ್‌ಲೈನ್‌ಗೆ ₹ 25 ಲಕ್ಷ, ಕಿರು ನೀರು ಸರಬರಾಜು ಯೋಜನೆಗೆ ₹ 5 ಲಕ್ಷ, ನೀರು ಸರಬರಾಜು ವಿತರಣೆ ಯಂತ್ರೋಪಕರಣಗಳ ಖರೀದಿಗೆ ₹ 20 ಲಕ್ಷ, ಮೋಟರ್‌ ಪಂಪ್‌ಸೆಟ್‌ ದುರಸ್ತಿಗೆ ₹ 10 ಲಕ್ಷ, ಹೊರಗುತ್ತಿಗೆ ನೀರು ಸರಬರಾಜು ಸಹಾಯಕರ ವೇತನ ₹ 20 ಲಕ್ಷ, ಘನತ್ಯಾಜ್ಯ ನಿರ್ವಹಣೆಗೆ ₹ 26.32 ಕೋಟಿ, ಬೀದಿ ದೀಪ ಅಳವಡಿಕೆ ಮತ್ತು ನಿರ್ವಹಣೆಗೆ ₹ 45 ಲಕ್ಷ, ರಸ್ತೆ, ಸೇತುವೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ₹ 14.30 ಕೋಟಿ, ಉದ್ಯಾನವನ ಅಭಿವೃದ್ಧಿಗೆ ₹ 1 ಕೋಟಿ, ಸುಸಜ್ಜಿತ ರಂಗಮಂದಿರ ₹ 2 ಕೋಟಿ, ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ₹ 1.16 ಕೋಟಿ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಒಟ್ಟು ₹ 59.05 ಕೋಟಿ ಖರ್ಚು ಆಗಲಿದ್ದು, ₹ 89.06 ಲಕ್ಷ ಉಳಿತಾಯ ಆಗಲಿದೆ ಎಂದು ತಿಳಿಸಿದರು.

ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಇನ್ನಷ್ಟು ಗಮನ ನೀಡಬೇಕು. ತ್ಯಾಜ್ಯ ವಿಲೇವಾರಿ ಸರಿಯಾಗಿ ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಪುರಸಭಾ ಉಪಾಧ್ಯಕ್ಷೆ ಸವಿತಾ ರಮೇಶ್‌, ಮುಖ್ಯಾಧಿಕಾರಿ ಎಚ್‌.ಮಹಾಂತೇಶ್‌, ಸದಸ್ಯರು ಹಾಗೂ ನೌಕರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.