ADVERTISEMENT

ದೇವಾಲಯದ ಅಭಿವೃದ್ಧಿಗೆ ಸಹಕಾರದ ಭರವಸೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 8:50 IST
Last Updated 2 ಜನವರಿ 2018, 8:50 IST

ನಾಯಕನಹಟ್ಟಿ: ಮಧ್ಯ ಕರ್ನಾಟಕದ ಇತಿಹಾಸ ಪ್ರಸಿದ್ಧ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಉಪ ವಿಭಾಗಾಧಿಕಾರಿ ಎ.ಬಿ.ವಿಜಯಕುಮಾರ್ ಹೇಳಿದರು. ಪಟ್ಟಣದ ಐತಿಹಾಸಿಕ ಗುರು ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿ, ದೇವರ ದರ್ಶನ ಪಡೆದು, ಮಾತನಾಡಿದರು.

ಚಿತ್ರದುರ್ಗ ಜಿಲ್ಲೆಯ ಉಪ ವಿಭಾಗಾಧಿಕಾರಿಯಾಗಿ ಶನಿವಾರ ಅಧಿಕಾರ ವಹಿಸಿಕೊಂಡ ನಂತರ ದೇವಾಲಯಕ್ಕೆ ಮೊದಲ ಭೇಟಿ ಇದು. ಮಧ್ಯ ಕರ್ನಾಟಕದಲ್ಲಿ ಈ ದೇವಾಲಯ ತುಂಬಾ ಪ್ರಸಿದ್ಧಿಯಾಗಿದೆ. ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ‘ಎ’ ಶ್ರೇಣಿಯ ದೇವಾಲಯ ಇದಾಗಿದ್ದು, ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಕೊಟ್ಟರು. ‘ಜಿಲ್ಲೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ನನ್ನ ಆದ್ಯತೆ’ ಎಂದರು.

ನಂತರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜೆ.ಪಿ.ರವಿಶಂಕರ್ ಮಾತನಾಡಿ, ‘ಮಾ.5ರಂದು ಗುರು ತಿಪ್ಪೇರುದ್ರಸ್ವಾಮಿ ದೇವರ ವಾರ್ಷಿಕ ಮಹಾ ಜಾತ್ರೆ ನಡೆಯಲಿದ್ದು, ಜಾತ್ರೆಯ ಪೂರ್ವಭಾವಿ ಸಭೆಯನ್ನು ಶೀಘ್ರದಲ್ಲೇ ಕರೆಯಲಾಗುವುದು.

ADVERTISEMENT

ಸಭೆಯಲ್ಲಿ ಜಾತ್ರೆಯ ನಡಾವಳಿಗಳನ್ನು ಚರ್ಚಿಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುವುದು. ಈಗಾಗಲೇ ಮಹಾರಥದ ದುರಸ್ತಿ ಕಾರ್ಯ ಭರದಿಂದ ಸಾಗಿದೆ. ಫೆ.20ರ ವೇಳಗೆ ರಥವು ಸಿದ್ಧವಾಗಲಿದೆ. ₹ 18.25 ಲಕ್ಷ ವೆಚ್ಚದಲ್ಲಿ ರಥದ ಐದು ಅಂತಸ್ತುಗಳ ಮರಮುಟ್ಟುಗಳನ್ನು ಬದಲಾಯಿಸಲಾಗಿದೆ’ ಎಂದು ಮಾಹಿತಿ ನೀಡಿದರು. ಇದೇ ವೇಳೆ ವ್ಯವಸ್ಥಾಪನ ಸಮಿತಿ ಸದಸ್ಯರಾದ ಎಸ್.ವಿ.ತಿಪ್ಪೇಸ್ವಾಮಿ ರೆಡ್ಡಿ, ಕೆ.ನಾಗಪ್ಪ, ಗೋವಿಂದರಾಜು, ಮುನಿಯಪ್ಪ, ಸಿಬ್ಬಂದಿ ಎಸ್.ಸತೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.