ADVERTISEMENT

ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಪ್ರಗತಿಗೆ ಸಹಕರಿಸಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 8:58 IST
Last Updated 6 ಜನವರಿ 2018, 8:58 IST

ಚಿತ್ರದುರ್ಗ:  ಜೀವನ ಶೈಲಿ ಮೇಲೆ ದೇಶದ ಪ್ರಗತಿ ಅವಲಂಬಿತವಾಗಿದೆ.  ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸರಳವಾಗಿ ಬದುಕುವುದನ್ನು ರೂಢಿಸಿಕೊಳ್ಳಬೇಕು ಎಂದು ಕೃಷಿತಜ್ಞ ಎಲ್. ನಾರಾಯಣ ರೆಡ್ಡಿ ಅಭಿಪ್ರಾಯಪಟ್ಟರು.

ಮುರುಘಾಮಠ ಮತ್ತು ಎಸ್ ಜೆ ಎಂ ಶಾಂತಿ ಮತ್ತು ಪ್ರಗತಿ ಫೌಂಡೇಷನ್‌ ಸಹಯೋಗದಲ್ಲಿ ಮುರುಘಾಮಠದಲ್ಲಿ ಶುಕ್ರವಾರ ನಡೆದ 28ನೇ ವರ್ಷದ ಮೊದಲ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ವಧು ವರರನ್ನು ಉದ್ದೇಶಿಸಿ ಮಾತನಾಡಿದರು.

ಹಬ್ಬ, ಜಾತ್ರೆ, ದೇವರ ಉತ್ಸವಕ್ಕಾಗಿ ಮಾಡುವ ದುಂದುವೆಚ್ಚವನ್ನು ಕಡಿಮೆ ಮಾಡಬೇಕು. ಮಕ್ಕಳಿಗೆ ಉತ್ತಮ ಭವಿಷ್ಯ, ಬದುಕು ಕಟ್ಟಿಕೊಳ್ಳುವಂತಹ ವಾತಾವರಣ ನಿರ್ಮಿಸಿಕೊಡಬೇಕು. ರೈತರು ಸಾವಯವ ಕೃಷಿಯ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಸರಳ ಜೀವನಕ್ಕೆ ಶ್ರೀಮಠವೇ ಮಾದರಿಯಾಗಿದೆ. ಶ್ರೀಮಠ ಸರಳ ವಿವಾಹದ ಮೂಲಕ ಉತ್ತಮ ಸಂದೇಶ ನೀಡುತ್ತಿದೆ. ಅನವಶ್ಯಕ ಆಚಾರಗಳನ್ನು ಕೈಬಿಟ್ಟು, ಸರಳವಾಗಿ ಜೀವನ ನಡೆಸಬೇಕು ಎಂದು ಶ್ಲಾಘಿಸಿದರು.

ನೇತೃತ್ವವಹಿಸಿದ್ದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ‘ಕಾಯಕ ನಂಬಿ ಜೀವನ ನಡೆಸುವವರೇ ಆದರ್ಶ ವ್ಯಕ್ತಿಗಳಾಗುತ್ತಾರೆ. ಅಂಥವರ ಸಾಲಿಗೆ   ಎಲ್. ನಾರಾಯಣ ರೆಡ್ಡಿ ಅವರು ಸೇರುತ್ತಾರೆ’ ಎಂದು ಬಣ್ಣಿಸಿದರು.

ನಾರಾಯಣರೆಡ್ಡಿ ಅವರಂಥ ರೈತರಿಗೆ ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ ಎಂದರೆ ಅದಕ್ಕೆ ಕಾರಣ ಅವರು ಕಾಯಕ ನಂಬಿ ಬದುಕುತ್ತಿದ್ದಾರೆ. ದುಡಿಮೆ ನಂಬಿ ಬದುಕಿದ ವ್ಯಕ್ತಿ ಎಂದೂ ಕೆಡುವುದಿಲ್ಲ ಎಂದು ಪ್ರತಿಪಾದಿಸಿದರು.

ಯಾವ ಜ್ಯೋತಿಷಿಯೂ ರಾಗಿ ಜೋಳ ಸೃಷ್ಟಿಸಲು ಸಾಧ್ಯವಿಲ್ಲ. ರೈತ ದುಡಿಮೆ ಮಾಡಿ ಬೆವರುಹರಿಸಿದಿದ್ದರೆ, ಆ ಬೆಳೆಯೂ ಬೆಳೆಯುವುದಿಲ್ಲ. ಕಾಂಚಾಣ ಕನಕವನ್ನು ತರುವ ಶಕ್ತಿ ದುಡಿಮೆಗೆ ಇದೆ. ಫಲವನ್ನು ಕೊಡುವ ಶಕ್ತಿ ಭೂಮಿಗಿದೆ ಎಂದು ವಿಶ್ಲೇಷಿಸಿದರು.

8 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ದಾಸೋಹಿಗಳಾದ ಅಶ್ವತ್ಥಲಕ್ಷಿ ಮತ್ತು ಎಸ್.ಎ. ಸುಬ್ರಮಣ್ಯಶೆಟ್ಟಿ ಮತ್ತು ಮಕ್ಕಳು ವಧುವರರಿಗೆ ಬಟ್ಟೆಗಳನ್ನು ವಿತರಿಸಿದರು.   ವೀರಶೈವ ಸಮಾಜದ ಅಧ್ಯಕ್ಷ ಎನ್.ಜಯಣ್ಣ, ಕಾರ‍್ಯದರ್ಶಿ ಪಟೇಲ್ ಶಿವಕುಮಾರ್, ಪೈಲ್ವಾನ್ ತಿಪ್ಪೇಸ್ವಾಮಿ, ಎ.ಜೆ. ಪರಮಶಿವಯ್ಯ, ಎಂ.ಜಿ.ದೊರೆಸ್ವಾಮಿ ಇದ್ದರು.

ಜಮುರಾ ಕಲಾಲೋಕದ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ವಚನ ಕಮ್ಮಟ ನಿರ್ದೇಶಕ ಸಿ.ಎಂ. ಚಂದ್ರಪ್ಪ ಸ್ವಾಗತಿಸಿದರು. ಪ್ರದೀಪ್‌ಕುಮಾರ್ ನಿರೂಪಿಸಿದರು. ಪ್ರೊ.ಸಿ.ವಿ. ಸಾಲಿಮಠ ವಿವಾಹ ಕಾರ‍್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.