ADVERTISEMENT

ಸಂಭ್ರಮದ ಕ್ಷಣಗಳಿಗಾಗಿ ಭಕ್ತರ ಕಾತರ

ಡಿ.ಶ್ರೀನಿವಾಸ
Published 8 ಜನವರಿ 2018, 9:10 IST
Last Updated 8 ಜನವರಿ 2018, 9:10 IST
ಜಗಳೂರಿನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವದ ಮಂಟಪ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಜಗಳೂರಿನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವದ ಮಂಟಪ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.   

ಜಗಳೂರು: ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಪರಿವರ್ತನೆಯ ನಿಟ್ಟಿನಲ್ಲಿ ನಾಡಿನ ಬಹುಮುಖ್ಯ ವೇದಿಕೆಗಳಲ್ಲಿ ಒಂದಾಗಿರುವ ‘ತರಳಬಾಳು ಹುಣ್ಣಿಮೆ ಮಹೋತ್ಸವ’ಕ್ಕೆ ಪಟ್ಟಣದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.

25 ವರ್ಷಗಳ ನಂತರ ಮೊದಲ ಬಾರಿಗೆ ಜಗಳೂರಿನಲ್ಲಿ (ಇದೇ ಡಿಸೆಂಬರ್‌ 23ರಿಂದ 31ರವರೆಗೆ) ಹುಣ್ಣಿಮೆ ಮಹೋತ್ಸವ ನಡೆಯಲಿದೆ. ಎರಡು ವರ್ಷಗಳ ಹಿಂದೆಯೇ ಇಲ್ಲಿ ಹುಣ್ಣಿಮೆ ಜರುಗಬೇಕಿತ್ತು. ಆದರೆ ಸತತ ಎರಡು ವರ್ಷಗಳ ಬರಗಾಲದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದ ಕಾರಣ ಮುಂದೂಡಲಾಗಿತ್ತು.

ಬರಪೀಡಿತ ತಾಲ್ಲೂಕಿನ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಿದ ನಂತರವಷ್ಟೇ ಹುಣ್ಣಿಮೆ ಆಚರಣೆ ಎಂದು ಸಿರಿಗೆರೆ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಘೋಷಿಸಿದ್ದರು. ನಂತರ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಮೇಲೆ ನಿರಂತರ ಒತ್ತಡ ತಂದ ಹಿನ್ನೆಲೆಯಲ್ಲಿ ತಾಲ್ಲೂಕಿನ ತುಪ್ಪದಹಳ್ಳಿ, ಹಾಲೇಕಲ್ಲು, ಬಿಳಿಚೋಡು ಕೆರೆ ಸೇರಿದಂತೆ ಜಿಲ್ಲೆಯ 22 ಕೆರೆಗಳಿಗೆ ಗಳಿಗೆ ನೀರು ಹರಿದುಬರುತ್ತಿದೆ. ಅಲ್ಲದೆ ಈ ಬಾರಿಯ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು, ರೈತರ ಮುಖದಲ್ಲಿ ಒಂದಿಷ್ಟು ನೆಮ್ಮದಿಯ ಭಾವ ಮೂಡಿದೆ.

ADVERTISEMENT

ಪ್ರಥಮ ಹುಣ್ಣಿಮೆ ಜಗಳೂರಿನಲ್ಲಿ: ಸ್ವಾತಂತ್ರ್ಯ ಪೂರ್ವ ಕಾಲಘಟ್ಟದಿಂದಲೂ ಶುದ್ಧ ಮಾಘ ಭರತ ಹುಣ್ಣಿಮೆಯಂದು ತರಳಬಾಳು ಮಹೋತ್ಸವವನ್ನು ಸಿರಿಗೆರೆಯ ಕೇಂದ್ರ ಸ್ಥಾನದಲ್ಲಿ ಆಚರಿಸಲಾಗುತ್ತಿತ್ತು. ಭಕ್ತರ ಒತ್ತಾಸೆ ಮೇರೆಗೆ ಮೊದಲ ಬಾರಿಗೆ 1950ರಲ್ಲಿ ಜಗಳೂರಿನಲ್ಲಿ ಅದ್ದೂರಿಯಾಗಿ ಹುಣ್ಣಿಮೆ ಆಚರಿಸಲಾಗಿತ್ತು. ನಂತರ ರಾಜ್ಯದ ವಿವಿಧೆಡೆ ಪ್ರತಿವರ್ಷ ನಿರಂತರವಾಗಿ ಮಹೋತ್ಸವ ಜರುಗುತ್ತಿದೆ. 43 ವರ್ಷಗಳ ನಂತರ 1993ರಲ್ಲಿ ಎರಡನೇ ಬಾರಿ ಜಗಳೂರಿನಲ್ಲಿ ಹುಣ್ಣಿಮೆ ಉತ್ಸವ ನಡೆದಿತ್ತು. ಇದೀಗ ಐತಿಹಾಸಿಕ ಹುಣ್ಣಿಮೆ ಆಚರಣೆಗೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಮಹೋತ್ಸವದ ಯಶಸ್ಸಿಗೆ ಸ್ವಾಗತ ಸಮಿತಿ, ಜನಪ್ರತಿನಿಧಿಗಳು, ಮುಖಂಡರು ತೆರೆಮರೆಯಲ್ಲಿ ಶ್ರಮಿಸುತ್ತಿದ್ದಾರೆ.

ತರಳಬಾಳು ಮಠದ 21ನೇ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಚಿಂತನೆಯ ಫಲವಾಗಿ ಹಲವು ದಶಕಗಳಿಂದ ನಡೆಯುತ್ತಿರುವ ಮಹೋತ್ಸವ ಇಂದು ನಾಡಿನ ಪ್ರಮುಖ ಉತ್ಸವಗಳಲ್ಲಿ ಒಂದಾಗಿ ರೂಪುಗೊಂಡಿದೆ. ನಾಡಿನ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ, ನೆಲ, ಜಲ, ಭಾಷೆ ವಿಷಯದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹುಣ್ಣಿಮೆ ತನ್ನದೇ ಮಹತ್ವ ಪಡೆದಿದೆ.

ವಿಶಿಷ್ಟ ಮಂಟಪ: ತರಳಬಾಳು ಪರಂಪರೆಯನ್ನು ಸಾರುವ ವಿಶಿಷ್ಟ ಶೈಲಿಯ ಮಂಟಪವನ್ನು ದಾವಣಗೆರೆ ರಸ್ತೆಯಲ್ಲಿ 20 ಎಕರೆ ಜಾಗದ ನಡುವೆ ನಿರ್ಮಿಸಲಾಗುತ್ತಿದೆ. ತಿಪಟೂರಿನ ಶಂಕರ್‌ ಮತ್ತು ಸಾಗರದ ಮಧು ಏಜೆನ್ಸಿಗೆ ಮಂಟಪ ನಿರ್ಮಾಣ ಕಾರ್ಯ ವಹಿಸಲಾಗಿದೆ. ಹಗಲೂ ರಾತ್ರಿ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಶೀಘ್ರದಲ್ಲೇ ಸುಂದರವಾದ, ಮೈಸೂರು ಅರಮನೆಯನ್ನು ಹೋಲುವ ಶ್ವೇತ ಮಂಟಪ ತಲೆಎತ್ತಲಿದೆ ಎನ್ನುತ್ತಾರೆ ಸ್ವಾಗತ ಸಮಿತಿ ಕಾರ್ಯದರ್ಶಿ ಜಿ.ಎಸ್‌. ಸುಭಾಷ್‌ ಚಂದ್ರ ಬೋಸ್‌.

ರಾಜ್ಯದ ವಿವಿಧ ಮೂಲೆಗಳಿಂದ ಪ್ರತಿ ದಿನ ಲಕ್ಷಾಂತರ ಭಕ್ತರ ಮಹಾಪೂರವೇ ಹರಿದುಬರುವ ಮಹೋತ್ಸವಕ್ಕೆ ತೊಂದರೆಯಾಗದಂತೆ ವಾಹನ ನಿಲುಗಡೆ ಮತ್ತು ಹೋಟೆಲ್‌, ಅಂಗಡಿಗಳ ವಹಿವಾಟಿಗಾಗಿ 50 ಎಕರೆ ಪ್ರದೇಶವನ್ನು ಸಜ್ಜುಗೊಳಿಸಲಾಗಿದೆ. ದಾವಣಗೆರೆ ಭಾಗದಿಂದ ಬರುವ ಭಕ್ತರಿಗಾಗಿ ಕೋರ್ಟ್‌ ಭಾಗದಲ್ಲಿ ಹಾಗೂ ಚಿತ್ರದುರ್ಗ, ಕೊಟ್ಟೂರು, ಕೂಡ್ಲಿಗಿ ಭಾಗದ ಭಕ್ತರ ವಾಹನಗಳಿಗಾಗಿ ಎಪಿಎಂಸಿ ಪ್ರದೇಶದಲ್ಲಿ ವಿಶಾಲವಾದ ಸ್ಥಳ ಸಿದ್ಧಗೊಳಿಸಲಾಗಿದೆ.

ಒಂಬತ್ತು ದಿನಗಳ ಕಾಲ ಈ ಭಾಗದ ಜನರಿಗೆ ಹುಣ್ಣಿಮೆಯು ಹಬ್ಬದ ಸಂಭ್ರಮ ತರಲಿದೆ. ಪ್ರತಿದಿನ 1ಲಕ್ಷಕ್ಕೂ ಹೆಚ್ಚು ಜನರು ಸೇರಲಿದ್ದಾರೆ. ಸಮಾರೋಪದ ದಿನದಂದು ಸ್ವಾಮೀಜಿ ಅವರ ಪೀಠಾರೋಹಣ ಕಾರ್ಯಕ್ರಮ ಇರುತ್ತದೆ. ಅಂದು 3 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಎಲ್ಲಾ ಜಾತಿ, ಧರ್ಮದವರು ಒಗ್ಗೂಡಿ ಆಚರಿಸುತ್ತಿರುವ ಹುಣ್ಣಿಮೆ ಹಬ್ಬದ ಕ್ಷಣಗಳಿಗಾಗಿ ತಾಲ್ಲೂಕಿನ ಸರ್ವರೂ ಕಾತರದಿಂದ ಕಾಯುತ್ತಿದ್ದಾರೆ

* * 

ತರಳಬಾಳು ಹುಣ್ಣಿಮೆ ಉತ್ಸವ ಮಾತ್ರವೇ ಅಲ್ಲ. ಕನ್ನಡ ಭಾಷೆ, ಸಾಹಿತ್ಯ,ಸಂಸ್ಕೃತಿ, ನೆಲ, ಜಲ, ಗಡಿ ವಿಷಯಗಳ ಬಗ್ಗೆ ಚಿಂತನ– ಮಂಥನ ಇಲ್ಲಿ ನಡೆಯಲಿದೆ. ನೀರಾವರಿ ಯೋಜನೆಗಳ ಬಗ್ಗೆ ಇಲ್ಲಿ ಮುಖ್ಯವಾದ ತೀರ್ಮಾನಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ.
ಜಿ.ಎಸ್‌. ಸುಭಾಷ್‌ ಚಂದ್ರ ಬೋಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.