ADVERTISEMENT

ಸಿರಿಧಾನ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಪ್ರಸ್ತಾವ

ಎಸ್‌.ಸುರೇಶ್‌
Published 10 ಜನವರಿ 2018, 9:05 IST
Last Updated 10 ಜನವರಿ 2018, 9:05 IST
ಹೊಸದುರ್ಗ ತಾಲ್ಲೂಕಿನ ಗ್ರಾಮವೊಂದರ ಹೊಲದಲ್ಲಿ ಬೆಳೆದಿದ್ದ ನವಣೆ ಬೆಳೆ.
ಹೊಸದುರ್ಗ ತಾಲ್ಲೂಕಿನ ಗ್ರಾಮವೊಂದರ ಹೊಲದಲ್ಲಿ ಬೆಳೆದಿದ್ದ ನವಣೆ ಬೆಳೆ.   

ಹೊಸದುರ್ಗ: ರಾಜ್ಯದಲ್ಲಿಯೇ ಅತ್ಯಧಿಕ ಸಿರಿಧಾನ್ಯ ಬೆಳೆಯುತ್ತಿರುವ ತಾಲ್ಲೂಕಿನಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕ ಸ್ಥಾಪಿಸುವಂತೆ ತಾಲ್ಲೂಕು ಕೃಷಿ ಇಲಾಖೆ ₹ 5 ಕೋಟಿ ವೆಚ್ಚದ ಪ್ರಸ್ತಾವ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ತಾಲ್ಲೂಕಿನಲ್ಲಿ 36,958 ಹೆಕ್ಟೇರ್‌ ಪ್ರದೇಶದಲ್ಲಿ ಸಿರಿಧಾನ್ಯ ಬಿತ್ತನೆ ಗುರಿಯಿದ್ದು, ಈ ಬಾರಿ 31,459.8 ಹೆಕ್ಟೇರ್‌ ಬಿತ್ತನೆಯಾಗಿದೆ. 2017–18ನೇ ಸಾಲಿನ ಕೃಷಿ ಪ್ರೇರಣಾ ಯೋಜನೆಯಡಿ ಸಿರಿಧಾನ್ಯ ಬೆಳೆಗಳಾದ ಸಾವೆ, ನವಣೆ, ಊದಲು, ಬರಗು, ಸಜ್ಜೆ, ಕೊರಲೆ ಬೆಳೆಗೆ ಪ್ರತಿ ಎಕರೆಗೆ ₹ 1 ಸಾವಿರ ಹಾಗೂ ರಾಗಿ ಬೆಳೆ ನಡುವೆ ಅಕ್ಕಡಿ ಬೆಳೆಯಾಗಿ ದ್ವಿದಳ ಧಾನ್ಯ ಬೆಳೆ ಬೆಳೆದರೆ ಪ್ರತಿ ಎಕರೆಗೆ ₹ 600 ಸಹಾಯಧನವನ್ನು ರೈತರಿಗೆ ನೀಡಲಾಗುತ್ತದೆ.


ಈ ಬಾರಿ ಸೆಪ್ಟಂಬರ್‌ನಲ್ಲಿ ಉತ್ತಮ ಮಳೆ ಆಗಿದ್ದರಿಂದ ತಾಲ್ಲೂಕಿನಲ್ಲಿ 5,000 ಹೆಕ್ಟೇರ್‌ನಷ್ಟು ಸಿರಿಧಾನ್ಯ ಬಿತ್ತನೆ ಪ್ರದೇಶ ಹೆಚ್ಚಾಗಿದೆ. ರಾಗಿ 23,960.54, ಸಾವೆ 6,363.87, ನವಣೆ 1,018.02 , ಕೊರಲೆ 19.13, ಉದಲು 4.86, ಸಜ್ಜೆ 1.62, ಬರಗು 4.15, ಜೋಳ 87.59 ಬಿತ್ತನೆಯಾಗಿದ್ದು ಶೇ 85.1ರಷ್ಟು ಸಾಧನೆಯಾಗಿದೆ ಎಂದು ತಾಲ್ಲೂಕು ಕೃಷಿ ಇಲಾಖೆ ತಿಳಿಸಿದೆ.

ADVERTISEMENT

ಈಗಾಗಲೇ ಸರ್ಕಾರ ₹ 66 ಲಕ್ಷದ ಸಹಾಯಧನದ ಚೆಕ್‌ ಅನ್ನು ಇಲಾಖೆಗೆ ಕಳಿಹಿಸಿದ್ದು, ಜನವರಿ ಅಂತ್ಯದೊಳಗೆ ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ಸಹಾಯಧನವನ್ನು ಜಮಾ ಮಾಡಲಾಗುತ್ತದೆ.

ಈ ಬಾರಿ ಸಿರಿಧಾನ್ಯ ಬೆಳೆಗೆ ಸಹಾಯಧನ ವಿತರಿಸಲು ಕಸಬಾ ಹೋಬಳಿಯ 11, ಮತ್ತೋಡು 16, ಶ್ರೀರಾಂಪುರ 21 ಹಾಗೂ ಮಾಡದಕೆರೆ 7 ಸೇರಿದಂತೆ ತಾಲ್ಲೂಕಿನ ಒಟ್ಟು 55 ಹಳ್ಳಿಗಳನ್ನು ಗುಚ್ಛ ಗ್ರಾಮಗಳಾಗಿ ಆಯ್ಕೆ ಮಾಡಲಾಯಿತು. ಈ ಗ್ರಾಮಗಳಲ್ಲಿ ಸಿರಿಧಾನ್ಯ ಬೆಳೆದಿರುವ ಬಗ್ಗೆ ಅಗತ್ಯ ಮಾಹಿತಿಯನ್ನು ಕೃಷಿ ಇಲಾಖೆಗೆ ನೀಡಿದ ರೈತರಿಗೆ ಸಹಾಯಧನ ವಿತರಣೆಗೆ ಶಿಫಾರಸು ಮಾಡಲಾಗಿದೆ. ಸಹಾಯಧನ ನೀಡುವ ಬಗ್ಗೆ  ಪ್ರಚಾರ ನಡೆಸಲಾಗಿತ್ತು.

ಬಿತ್ತನೆಯಾಗಿದ್ದ ರಾಗಿ ಬೆಳೆ ತೆನೆ ಒಡೆಯುವ ಸಮಯದಲ್ಲಿ ಸಮೃದ್ಧವಾಗಿ ಮಳೆ ಬಂದಿದ್ದರಿಂದ ಉತ್ತಮ ಫಸಲು ಸಿಕ್ಕಿತ್ತು. ಉತ್ತಮ ಬೆಳೆ ನಿರೀಕ್ಷೆಯಲ್ಲಿ ರೈತರಿದ್ದರು. ಪ್ರತಿ ಎಕರೆಗೆ 10 ಕ್ವಿಂಟಲ್‌ಗೂ ಅಧಿಕ ಇಳುವರಿಯ ರಾಗಿ ಆಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ರಾಗಿ ಕಾಳುಗಟ್ಟುವ ಸಮಯದಲ್ಲಿ ಮಳೆ ಕೈಕೊಟ್ಟಿದ್ದರಿಂದ ಇಳುವರಿ ಕುಸಿತವಾಗಿದ್ದು, ಪ್ರತಿ ಎಕರೆಗೆ ಕೇವಲ 6ರಿಂದ 7 ಕ್ವಿಂಟಲ್‌ ಆಗಬಹುದು ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎ.ಸಿ.ಮಂಜು ‘ಪ್ರಜಾವಾಣಿ’ಗೆ ವಿವರಿಸಿದರು.

* * 

ತಾಲ್ಲೂಕಿನ ಯಾವುದೇ ಭಾಗದಲ್ಲಿ 3 ಎಕರೆ ಜಾಗ ಕೊಡಬೇಕೆಂದು ತಹಶೀಲ್ದಾರ್‌ಗೆ ಮನವಿ ಮಾಡಲಾಗಿದೆ. ಈ ಘಟಕ ಸ್ಥಾಪನೆಯಿಂದ ಸಿರಿಧಾನ್ಯ ಬೆಳೆಗಾರರಿಗೆ ಹೆಚ್ಚು ಅನುಕೂಲ ಆಗಲಿದೆ.
ಎ.ಸಿ.ಮಂಜು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.