ADVERTISEMENT

ರೋಸ್ಟರ್‌ನಂತೆ ಸದಸ್ಯರ ಗೈರು: ಸಭೆ ಮತ್ತೆ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 8:40 IST
Last Updated 3 ಫೆಬ್ರುವರಿ 2018, 8:40 IST
ಚಿತ್ರದುರ್ಗದಲ್ಲಿ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯನ್ನು ಕೋರಂ ಕೊರತೆ ಹಿನ್ನೆಲೆಯಲ್ಲಿ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮುಂದೂಡಿದರು.
ಚಿತ್ರದುರ್ಗದಲ್ಲಿ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯನ್ನು ಕೋರಂ ಕೊರತೆ ಹಿನ್ನೆಲೆಯಲ್ಲಿ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮುಂದೂಡಿದರು.   

ಚಿತ್ರದುರ್ಗ: ರೋಸ್ಟರ್ ಪದ್ಧತಿಯಂತೆ ಗೈರಾಗುತ್ತಿರುವ ಸದಸ್ಯರು, ಸಭಾಂಗ­ಣಕ್ಕೆ ಬಂದೂ ಸಹಿ ಹಾಕದ ಕೆಲವು ಸದಸ್ಯರು, ಅಭಿವೃದ್ಧಿಯ ಚರ್ಚೆಗೆ ಅವಕಾಶ ಸಿಗುತ್ತಿಲ್ಲ ಎಂದು ಧ್ವನಿ ಏರಿಸಿ ಜಗಳಕ್ಕೆ ನಿಂತ ವಿರೋಧ ಪಕ್ಷದ ಸದಸ್ಯರು.. ಎಲ್ಲವನ್ನೂ ಕೇಳಿಸಿಕೊಂಡು, ‘ಕೋರಂ ಕೊರತೆ ಕಾರಣ ಸಭೆ ಮುಂದೂಡಲಾಗಿದೆ’ ಎಂದು ಘೋಷಿಸಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ…!

ಇವು ಶುಕ್ರವಾರ ಜಿಲ್ಲಾ ಪಂಚಾಯ್ತಿಯ ಸಾಮಾನ್ಯ ಸಭೆಯಲ್ಲಿ ನಡೆದ ಘಟನೆಗಳು. ಹಿಂದಿನ ಮೂರೂ ಸಾಮಾನ್ಯ ಸಭೆಗಳನ್ನು ಕೋರಂ ಕೊರತೆಯಿಂದ ಮುಂದೂಡಲಾಗಿತ್ತು. ಈಗ ನಾಲ್ಕನೇ ಬಾರಿಯೂ ಅದೇ ಕಾರಣಕ್ಕೆ ಸಭೆ ಬಲಿಯಾಯಿತು.

ಹಿಂದಿನ ಸಭೆಗಳಿಂದ  ಅನುಭವವಾಗಿದ್ದ ಕಾರಣವೋ ಏನೋ.. ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಸಭೆಯ ಆರಂಭದಲ್ಲೇ ಹಾಜರಿ ಪುಸ್ತಕ ಪರಿಶೀಲಿಸಿ­
ದರು. ಗೈರಾದವರ ಸಂಖ್ಯೆ ಲೆಕ್ಕ ಹಾಕುತ್ತಿದ್ದಾಗಲೇ, ವಿರೋಧ ಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ತಕರಾರು ವ್ಯಕ್ತಪಡಿಸಿದರು. ‘ಕಾಂಗ್ರೆಸ್ ಸದಸ್ಯರು ಉದ್ದೇಶಪೂರ್ವಕವಾಗಿ ಗೈರಾಗುತ್ತಿದ್ದಾರೆ.

ADVERTISEMENT

ಜನಸಾಮಾನ್ಯರ ಕಷ್ಟಗಳನ್ನು ನಿವಾರಿಸುವುದು ಅವರಿಗೆ ಬೇಕಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸದಸ್ಯರ ಆಕ್ಷೇಪಗಳ ನಡುವೆಯೂ, ಕಾನೂನು ಮತ್ತು ಆರ್‌ಡಿಪಿಆರ್ ನಿಯಮಗಳನ್ನು ಉಲ್ಲೇಖಿಸಿದ ಅಧ್ಯಕ್ಷರು, ಕೋರಂ ಕೊರತೆಯಿಂ­ದಾಗಿ ಮುಂದಿನ ಶುಕ್ರವಾರ ಕ್ಕೆ (ಫೆ.9) ಸಭೆ ಮುಂದೂಡಿರುವುದಾಗಿ ಪ್ರಕಟಿಸಿದರು.

ಸಭೆ ಮುಂದೂಡಿದ ನಂತರವೂ ವಿರೋಧಪಕ್ಷದ ಸದಸ್ಯರಾದ ಜಯಪ್ರತಿಭಾ, ಎಂ.ಬಿ.ತಿಪ್ಪೇಸ್ವಾಮಿ, ಕೆ.ಸಿ.ಮಹೇಶ್ವರಪ್ಪ, ತ್ರಿವೇಣಿ ಅಜ್ಜಪ್ಪ ಆಕ್ಷೇಪಣೆ ಮುಂದುವರಿಸಿದ್ದರು. ‘ಇಷ್ಟು ಬಾರಿ ಸಭೆ ಮುಂದೂಡುತ್ತಿದ್ದರೂ, ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಿಂತನೆ ಮಾಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಮುಂದಿನ ಸಭೆಗಳು ನಡೆಯುವ ಖಾತರಿ ಸಿಗುತ್ತಿಲ್ಲ. ಇನ್ನೇನಿದ್ದರೂ ವಿಧಾನಸಭಾ ಚುನಾವಣೆ ನಡೆದ ನಂತರ, ಯಾವ ಸರ್ಕಾರ ರಚನೆಯಾಗುತ್ತದೋ ನೋಡಬೇಕು’ ಎಂದು ಸದಸ್ಯರು ಮಾಧ್ಯಮದವರ ಬಳಿ ಹೇಳಿದರು.

ಕ್ಷೇತ್ರದಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಿವೆ. ಅಧಿಕಾರಿಗಳು ಸದಸ್ಯರ ದೂರವಾಣಿ ಕರೆಗೆ ಸ್ಪಂದಿಸುತ್ತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ಕ್ಷೇತ್ರದ ಬಗ್ಗೆ ಜನ ಏನು ತಿಳಿದುಕೊಳ್ಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ನಡುವೆ ಸಭೆ ಶುರುವಾಗದಿದ್ದರೂ ಚರ್ಚೆ ನಡೆಯುತ್ತಿರುವುದನ್ನು ಗಮನಿಸಿದ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ‘ಚರ್ಚೆ ನಿಲ್ಲಿಸಿ, ಮೊದಲು ಸಭೆ ಆರಂಭಿಸಬೇಕು. ಸಭೆ ಆರಂಭಕ್ಕೂ ಮುನ್ನ ಕೋರಂ ತೋರಿಸಬೇಕು’ ಎಂದು ಪಟ್ಟು ಹಿಡಿದರು. ವಿರೋಧ ಪಕ್ಷದ ಸದಸ್ಯರು ‘ನೀವು ಏನು ಬೇಕಾದರೂ ಮಾಡಿಕೊಳ್ಳಿ. ಆದರೆ, ನಮಗೆ ಸಭೆ ನಡೆಯಬೇಕು. ಕುಡಿಯುವ ನೀರಿನ ಚರ್ಚೆಯನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಬೇಕು’ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೃಷ್ಣಮೂರ್ತಿ, ‘ನನ್ನ ಕ್ಷೇತ್ರದಲ್ಲೂ ಕುಡಿಯುವ ನೀರಿನ ಸಮಸ್ಯೆ ಇದೆ. ನಾವು ನಮ್ಮ ಸಮಸ್ಯೆ ಪರಿಹರಿಸಿಕೊಳ್ಳುತ್ತೇವೆ.
ನಿಮ್ಮ ಕ್ಷೇತ್ರಗಳ ಸಮಸ್ಯೆಗಳಿಗೆ ಸ್ಪಂದಿಸಿ, ಕೆಲಸ ಮಾಡಿ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ‘ಆರ್‌ಡಿಪಿಆರ್ ಕಚೇರಿಗೆ ಭೇಟಿ ನೀಡಿ, ಕೋರಂ ಕೊರತೆ ಮತ್ತು ಸಭೆ ಮುಂದೂಡಿಕೆಯಾಗಿರುವ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿದ್ದೇನೆ. ಆದರೆ, 51 ಸದಸ್ಯರಲ್ಲಿ 26 ಸದಸ್ಯರ ಕೋರಂ ಬೇಕಾಗಿದೆ. ಕೋರಂ ಇಲ್ಲದಿದ್ದರೆ, ಸಭೆ ನಡೆಸುವಂತಿಲ್ಲ ಎಂದು ಮೌಖಿಕವಾಗಿ ತಿಳಿಸಿದ್ದಾರೆ. ಹಾಗಾಗಿ ಕೋರಂ ದೊರೆಯುವವರೆಗೂ ಸಭೆ ಮುಂದೂಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಒಟ್ಟಾರೆ, ನಾಲ್ಕನೇ ಬಾರಿಗೆ ಸಾಮಾನ್ಯ ಸಭೆ ಮುಂದೂಡಿದೆ. ಕಾಂಗ್ರೆಸ್ ಸದಸ್ಯರ ಪರೋಕ್ಷ ಅಸಹಕಾರ ಚಳವಳಿ ಮುಂದುವರಿದಿದೆ. ಸಭೆಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಓಂಕಾರಪ್ಪ, ಉಪಕಾರ್ಯದರ್ಶಿ ಬಸವರಾಜಪ್ಪ ಇದ್ದರು.\

* * 

ಈ ಸಭೆಯಲ್ಲಿ ಸದಸ್ಯರು ಬಂದರೂ ಸಹಿ ಹಾಕಿಲ್ಲ. ಸಭೆಯಿಂದ ಸಭೆಗೆ ಸದಸ್ಯರ ಸಂಖ್ಯೆ ಹೆಚ್ಚುತ್ತಿದೆ. ಮುಂದಿನ ಸಭೆಗೆ ಕೋರಂ ದೊರೆಯುವ ವಿಶ್ವಾಸವಿದೆ.
ಸೌಭಾಗ್ಯ ಬಸವರಾಜನ್ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.