ADVERTISEMENT

ಕಲ್ಯಾಣವೆಂದರೆ ವ್ಯಕ್ತಿ, ಕುಟುಂಬದ ಉದ್ಧಾರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 9:50 IST
Last Updated 6 ಫೆಬ್ರುವರಿ 2018, 9:50 IST

ಚಿತ್ರದುರ್ಗ: ಕಲ್ಯಾಣ ಎಂದರೆ ವ್ಯಕ್ತಿ, ಕುಟುಂಬ ಹಾಗೂ ಸಮಾಜದ ಉದ್ಧಾರ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು. ಇಲ್ಲಿನ ಬಸವಕೇಂದ್ರ ಮುರುಘಾಮಠದಲ್ಲಿ ಸೋಮವಾರ ಎಸ್‍ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಷನ್‍ನಿಂದ ಹಮ್ಮಿಕೊಂಡಿದ್ದ 28 ನೇ ವರ್ಷದ 2ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವಿವಾಹ ಎಂಬುದು ಮಾನವ ಜೀವನದಲ್ಲಿ ಅವಿಸ್ಮರಣೀಯ ಸಂದರ್ಭ. ಹಣದ ಆಡಂಬರ ತೋರಿಸಲಿಕ್ಕಾಗಿ ಕೆಲವರು ಅದ್ದೂರಿಯಾಗಿ ಮದುವೆ ಮಾಡಲು ಮುಂದಾಗುತ್ತಾರೆ. ಈ ಮೂಲಕ ಅಮೂಲ್ಯವಾದ ಸಂಪತ್ತನ್ನು ವ್ಯರ್ಥ ಮಾಡಲಾಗುತ್ತಿದೆ. ಆದರೆ, ನಿರಾಡಂಬರವಾದ ಮದುವೆ ನೋಡಬೇಕೆಂದರೆ ಶ್ರೀಮಠಕ್ಕೆ ಬರಬೇಕು. ಇಲ್ಲಿ ನಡೆಯುವುದನ್ನು ನಾವು ಕಲ್ಯಾಣ ಮಹೋತ್ಸವ ಎಂದು ಕರೆಯುತ್ತೇವೆ’ ಎಂದರು.

ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ವಿರಕ್ತಮಠದ ಶಿವಯೋಗಿ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿ, ‘ಇದೊಂದು ರಚನಾತ್ಮಕ, ಕ್ರಿಯಾತ್ಮಕವಾಗಿರುವ ಸಮಾರಂಭ. ಇದು ಸದಾ ವಿನೂತನ’ ಎಂದು ಅಭಿಪ್ರಾಯಪಟ್ಟರು. ಮನುಷ್ಯನ ಜೀವನದಲ್ಲಿ ಎಡರು ತೊಡರು ಸಹಜ. ಜೀವನವನ್ನು ಸಮನಾಗಿ ಸ್ವೀಕರಿಸಬೇಕು. ಮಣ್ಣಿನ ಬೆಲೆ ದುಡಿಯುವವರಿಗೆ ತಿಳಿದಿದೆ. ಬಡವನಿಗೆ ಹಣದ ಬೆಲೆ ಗೊತ್ತಿದೆ. ಹಾಗಾಗಿ ನಾವು ಸರಳವಾಗಿ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ADVERTISEMENT

ಸಾಮೂಹಿಕ ಕಲ್ಯಾಣ ಸಮಾಜಕ್ಕೆ ಮಾರ್ಗದರ್ಶನ ಕೊಡುವ ಕಾರ್ಯಕ್ರಮವಾಗಿದೆ. ಪತಿ- ಪತ್ನಿ ಬದುಕು ಅತ್ಯಂತ ಸುಂದರವಾಗಿರಬೇಕು. ಇಬ್ಬರ ಮಧ್ಯೆ ಯಾವುದೇ ಮಾತು ಬಂದರೂ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಬದುಕನ್ನು ಮುನ್ನಡೆಸಬೇಕು. ಅದೇ ನಿಜವಾದ ಜೀವನ ಎಂದರು.

ಕಾರ್ಯಕ್ರಮದ ದಾಸೋಹಿಗಳಾದ ಎಲ್.ಯು.ಸತೀಶ್, ಕಾಂಗ್ರೆಸ್ ಮುಖಂಡ ಸೇತೂರಾಂ, ಕೆ.ಮಧುಪ್ರಸಾದ್, ಗಾಯತ್ರಿ ಶಿವರಾಂ, ಪೈಲ್ವಾನ್ ತಿಪ್ಪೇಸ್ವಾಮಿ, ಜಿ.ಸಿ.ಮಲ್ಲಿಕಾರ್ಜುನಯ್ಯ ಇದ್ದರು.

ಜಮುರಾ ಕಲಾಲೋಕದ ಕಲಾವಿದರು ವಚನ ಪ್ರಾರ್ಥಿಸಿದರು. ಪ್ರೊ. ಸಿ.ಎಂ.ಚಂದ್ರಪ್ಪ ಸ್ವಾಗತಿಸಿದರು. ಜ್ಞಾನಮೂರ್ತಿ ನಿರೂಪಿಸಿದರು. ಪ್ರೊ.ಸಿ.ವಿ. ಸಾಲಿಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.