ADVERTISEMENT

ಕೂಲಿ ಕೆಲಸ ಮಾಡಿ ತೋಟ ಕಟ್ಟಿದ ರೈತ: 35 ಎಕರೆ ಜಮೀನಿನಲ್ಲಿ ವಿವಿಧ ಬೆಳೆಗಳು

ತಿಮ್ಮಯ್ಯ .ಜೆ ಪರಶುರಾಂಪುರ
Published 24 ನವೆಂಬರ್ 2021, 4:34 IST
Last Updated 24 ನವೆಂಬರ್ 2021, 4:34 IST
ಬಾಳೆ ಬೆಳೆಯೊಂದಿಗೆ ರೈತ ರಾಜಣ್ಣ.
ಬಾಳೆ ಬೆಳೆಯೊಂದಿಗೆ ರೈತ ರಾಜಣ್ಣ.   

ಪರಶುರಾಂಪುರ: ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ತಮ್ಮ 35 ಎಕರೆ ಜಮೀನಿನಲ್ಲಿ ಅಡಿಕೆ, ತೆಂಗು, ಬಾಳೆ, ದಾಳಿಂಬೆ, ಮಾವು, ಹುಣಸೆ ಹೀಗೆ ವಿವಿಧ ಬೆಳೆಗಳನ್ನು ಬೆಳೆದು ಕೈತುಂಬಾ ಹಣ ಗಳಿಸಿ ಇತರರಿಗೆ ಮಾದರಿಯಾಗಿದ್ದಾರೆ ರೈತ ರಾಜಣ್ಣ ಎಂ.

ಹೋಬಳಿಯ ಗೋಸಿಕೆರೆ(ಕರೆತಿಪ್ಪೆ) ಗ್ರಾಮದ ರೈತ ರಾಜಣ್ಣ ಕಾಲೇಜು ಶಿಕ್ಷಣ ಮುಗಿದ ಕೂಡಲೇ ಮನೆಯ ಜವಾಬ್ದಾರಿ ಹೊತ್ತು ಕೂಲಿ ಕೆಲಸಕ್ಕೆ ಹೋಗಲು ನಿರ್ಧರಿಸಿದರು. ಪಕ್ಕದ ಊರಿನ ನಂಜುಂಡಪ್ಪ ಎಂಬುವವರ ತೋಟಕ್ಕೆ ದಿನಕ್ಕೆ ₹25 ರಂತೆ ಕೂಲಿ ಕೆಲಸ ಮಾಡುತ್ತಿದ್ದ ರಾಜಣ್ಣನ ಮನಸ್ಸಿನಲ್ಲಿ ತೋಟ ಕಟ್ಟಬೇಕು ಎಂಬ ಛಲ ಚಿಗುರೊಡೆದು ಇಂದು ವರ್ಷಕ್ಕೆ ₹25 ಲಕ್ಷ ಆದಾಯ ಪಡೆಯುವ ತೋಟ ಮಾಡಿದ್ದಾರೆ.

‘ಕೂಲಿ ಮಾಡಿ ಕೂಡಿಟ್ಟ ಹಣದ ಜೊತೆಗೆ ನಮ್ಮ ಚಿಕ್ಕಪ್ಪನ ಹತ್ತಿರ ಸ್ವಲ್ಪ ಸಾಲ ಮಾಡಿ 2011ರಲ್ಲಿ ಕೊಳವೆ ಬಾವಿ ಕೊರೆಯಿಸಿದೆ. ಅಂದಿನಿಂದ ಅರಂಭಗೊಂಡ ಕೃಷಿ ಕಾಯಕದಲ್ಲಿ ಇಂದು 7 ಕೊಳವೆಬಾವಿಗಳನ್ನು ಕೊರೆಸಿದ್ದಾರೆ. 10 ಎಕರೆಯಲ್ಲಿ ಅಡಿಕೆ, 5 ಎಕರೆಯಲ್ಲಿ ದಾಳಿಂಬೆ, ಎರಡೂವರೆ ಎಕರೆ ಬಾಳೆ ಮತ್ತು ಎರಡೂವರೆ ಎಕರೆ ಮಾವು ತೆಂಗು ಬೆಳೆಸಿದ್ದಾರೆ. ವರ್ಷಕ್ಕೆ ಅಡಿಕೆಯಿಂದ ₹ 20 ಲಕ್ಷ, ಬಾಳೆಯಿಂದ ₹ 3 ಲಕ್ಷ, ದಾಳಿಂಬೆಯಿಂದ ₹ 2 ಲಕ್ಷ, ಹೀಗೆ ₹ 25 ಲಕ್ಷ ಹಣ ಗಳಿಸಿದ್ದಾರೆ‘ ರಾಜಣ್ಣ.

ADVERTISEMENT

‘ಕೃಷಿಯಲ್ಲಿ ಇವೆಲ್ಲಾವನ್ನು ಒಂದೇ ಬಾರಿಯಾಗಿ ಮಾಡಲು ಸಾಧ್ಯವಿಲ್ಲ. ಹಂತ-ಹಂತವಾಗಿ ಮಾಡಿ ಕೃಷಿಯಲ್ಲಿ ಖುಷಿಯಿಂದ ಕೆಲಸ ಮಾಡಿ ಪ್ರಗತಿ ಕಾಣಬೇಕು. ನಮ್ಮ ತಮ್ಮ ಶಿವಣ್ಣ ಮತ್ತು ನಮ್ಮ ತಂದೆಯವರಾದ ಮುದ್ದಣ್ಣ ಅವರ ಸಹಕಾರದಿಂದ ನಾನು ಇಂದು ಈ ಸಾಧನೆ ಮಾಡಲು ಸಾಧ್ಯವಾಯಿತು. ಜೊತೆಗೆ ನನ್ನ ಪತ್ನಿಯೂ ಸಹಕರಿಸಿದಳು’ ಎಂದು ನೆನಪಿಸಿಕೊಳ್ಳುತ್ತಾರೆ ರಾಜಣ್ಣ.

ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿ ಅಕ್ಕಪಕ್ಕದ ಹಳ್ಳಿಗಳಲ್ಲಿ ಜನಪ್ರಿಯರಾದ ರಾಜಣ್ಣ ಅವರು ಊರಿನ ಕೆಲ ಮುಖಂಡರ ಒತ್ತಾಯಕ್ಕೆ ಮಣಿದು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗ್ರಾಮ ಪಂಚಾಯಿತಿ ಸದಸ್ಯರೂ ಆಗಿದ್ದಾರೆ.

‘ಕೃಷಿಯ ಜೊತೆಗೆ ಜನ ಸೇವಯನ್ನು ಮಾಡಿಕೊಂಡು ಹೋಗುತ್ತೇನೆ. ಕೈಲಾದಷ್ಟು ಜನರಿಗೆ ಪಂಚಾಯಿತಿಯಲ್ಲಿ ಸಿಗುವ ಸೌಲಭ್ಯವನ್ನು ತಲುಪಿಸುವ ಕೆಲಸ ಮಾಡುತ್ತೇನೆ’ ಎನ್ನುತ್ತಾರೆ ರಾಜಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.