ಚಿತ್ರದುರ್ಗ: ‘ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ಕತ್ತಲಲ್ಲಿದ್ದ ಮಾದಿಗ ಸಮುದಾಯಕ್ಕೆ, ಐಸಿಯುನಲ್ಲಿದ್ದ ಸಮುದಾಯಗಳಿಗೆ ಬದುಕುವ ಭರವಸೆ ಸಿಕ್ಕಿದೆ. ಕರ್ನಾಟಕ ಸರ್ಕಾರ ಒಳಮೀಸಲಾತಿ ಜಾರಿಗೆ ಮಂದಾಗಿದ್ದ ನಡೆಗೆ ಸುಪ್ರೀಂ ಕೋರ್ಟ್ ಅಸ್ತು ಎಂದಿದೆ. ಆ ಮೂಲಕ ಮೀಸಲಾತಿ ವರ್ಗೀಕರಣ ಸಂವಿಧಾನಾತ್ಮಕ ನಿರ್ಧಾರ ಎಂಬ ಸಂದೇಶವನ್ನು ನ್ಯಾಯಾಲಯ ನೀಡಿದೆ’ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಚ್. ಆಂಜನೇಯ ತಿಳಿಸಿದ್ದಾರೆ.
‘ಶೇ 6ರಷ್ಟು ಜನಸಂಖ್ಯೆ ಹೊಂದಿರುವ ಮಾದಿಗ ಸಮುದಾಯ ಶೇ 1ರಷ್ಟು ಮೀಸಲಾತಿ ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಹಲವು ವರದಿಗಳು ಉಲ್ಲೇಖಿಸಿವೆ. ರಾಜ್ಯ ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿ ಕಲ್ಪಿಸಲು ಕ್ರಮ ವಹಿಸಬೇಕು. ಮುಖ್ಯವಾಗಿ ಕರ್ನಾಟಕ ಲೋಕಸೇವಾ ಆಯೋಗ ಸೇರಿ ವಿವಿಧ ಇಲಾಖೆ ಆರಂಭಿಸಿರುವ ಉದ್ಯೋಗ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಿ ಒಳ ಮೀಸಲಾತಿ ವರ್ಗೀಕರಣ ಮಾಡಿದ ಬಳಿಕ ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
‘ಮೀಸಲಾತಿ ವರ್ಗೀಕರಣವನ್ನು ಕೋರ್ಟ್ ಒಪ್ಪುವುದಿಲ್ಲ ಎನ್ನುತ್ತಿದ್ದ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಸುಪ್ರೀಂ ಕೋರ್ಟ್ ಉತ್ತರ ನೀಡಿದೆ. ತೀರ್ಪನ್ನು ತುರ್ತಾಗಿ ಅನುಷ್ಠಾನಕ್ಕೆ ತರುವ ಮೂಲಕ ಕರ್ನಾಟಕ ಸರ್ಕಾರ ರಾಷ್ಟ್ರಕ್ಕೆ ಮಾದರಿಯಾಗಬೇಕು. ದಶಕಗಳಿಂದ ಮಾದಿಗ ಸಮುದಾಯಕ್ಕೆ ಆಗಿದ್ದ ಅನ್ಯಾಯವನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಹೋರಾಟಕ್ಕೆ ಗೆಲುವು: ಮಾದಾರ ಶ್ರೀ
‘ಒಳ ಮೀಸಲಾತಿ ಕುರಿತ ಸುಪ್ರೀಂ ಕೋರ್ಟ್‌ನ ಏಳು ಸದಸ್ಯರ ಸಂವಿಧಾನ ಪೀಠ ನೀಡಿರುವ ತೀರ್ಪು ಐತಿಹಾಸಿಕವಾದುದು. ಇದರಿಂದ ಸುದೀರ್ಘ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ’ ಎಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದ್ದಾರೆ.
‘ಈ ತೀರ್ಪು ಕಳೆದ ಮೂರು ದಶಕಗಳ ಸುದೀರ್ಘ ಹೋರಾಟಕ್ಕೆ ಸಿಕ್ಕ ಪ್ರತಿಫಲವಾಗಿದೆ. ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಜನಸಂಖ್ಯಾವಾರು ನ್ಯಾಯಯುತವಾಗಿ ಹಂಚಿಕೆ ಆಗಬೇಕು. ಈ ವರ್ಗೀಕರಣದ ಅಧಿಕಾರ ರಾಜ್ಯಗಳಿಗೆ ಇರಬೇಕು ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ಪೀಠ ಪ್ರತಿಪಾದಿಸಿತ್ತು. ಈ ಅಂಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಮೀಸಲಾತಿಯ ನ್ಯಾಯಯುತ ಹಂಚಿಕೆಯ ಮೂಲಕ ಎಲ್ಲ 101 ಪರಿಶಿಷ್ಟ ಜಾತಿಗಳಿಗೆ ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ಈ ತೀರ್ಪು ನೆರವಾಗಲಿದೆ’ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.