ADVERTISEMENT

ಕೆಟ್ಟು ನಿಂತಿದ್ದ ಟೆಂಪೊಗೆ ಲಾರಿ ಡಿಕ್ಕಿ: ಮೂವರು ವಿದ್ಯಾರ್ಥಿಗಳು ಸಾವು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 14:27 IST
Last Updated 22 ಏಪ್ರಿಲ್ 2019, 14:27 IST
   

ಚಿತ್ರದುರ್ಗ: ಇಲ್ಲಿನ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಟೆಂಪೊಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ಬೆಂಗಳೂರಿನ ಬಸವನಗುಡಿಯ ವಿಜಯಾ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀನಿಧಿ (21), ಹರ್ಷಗೌಡ (20) ಹಾಗೂ ಕಾರ್ತಿಕ್‌ (21) ಮೃತಪಟ್ಟಿವರು. ಗಂಭೀರವಾಗಿ ಗಾಯಗೊಂಡಿದ್ದ ಭರತ್‌, ಕಿರಣ್‌ ಹಾಗೂ ಹರ್ಷ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಅಪಘಾತಕ್ಕೆ ಕಾರಣನಾದ ಲಾರಿ ಚಾಲಕನನ್ನು ಸಂಚಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ವಿಜಯಾ ಕಾಲೇಜಿನ 13 ವಿದ್ಯಾರ್ಥಿಗಳು ಏ.19ರಂದು ಮಲೆನಾಡು ಹಾಗೂ ಕರಾವಳಿ ಭಾಗಕ್ಕೆ ಪ್ರವಾಸಕ್ಕೆ ತೆರಳಿದ್ದರು. ಭಾನುವಾರ ರಾತ್ರಿ ಗೋಕರ್ಣ ವೀಕ್ಷಿಸಿ ಬೆಂಗಳೂರಿಗೆ ಮರಳುವ ಮಾರ್ಗ ಮಧ್ಯೆ ಅಪಘಾತ ಸಂಭವಿಸಿದೆ.

‘ಸೋಮವಾರ ನಸುಕಿನ 3 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿಯ ಜೆಎಂಇಟಿ ಕಾಲೇಜು ಸಮೀಪ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಟೆಂಪೊ ಟ್ರಾವಲರ್‌ ಟೈರು ಸ್ಫೋಟಗೊಂಡಿದೆ. ಟೈರು ಬದಲಾವಣೆ ಮಾಡಲು ಹೆದ್ದಾರಿ ಬದಿಯಲ್ಲಿ ವಾಹನ ನಿಲುಗಡೆ ಮಾಡಲಾಗಿತ್ತು. ಹೀಗಾಗಿ, ಕೆಲ ವಿದ್ಯಾರ್ಥಿಗಳು ವಾಹನದ ಮುಂಭಾಗದ ರಸ್ತೆಯ ಮೇಲೆ ಕುಳಿತುಕೊಂಡಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ದಾವಣಗೆರೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಸರಕು ತುಂಬಿದ ಲಾರಿಯೊಂದು ಟೆಂಪೊಗೆ ಏಕಾಏಕಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಟೆಂಪೊ ಪಲ್ಟಿಯಾಗಿ ಹೆದ್ದಾರಿಯ ಮೇಲೆ ಕುಳಿತುಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ಬಿದ್ದು, ತಡೆಗೋಡೆಗೆ ಅಪ್ಪಳಿಸಿದೆ. ರಸ್ತೆಯಲ್ಲಿ ಕುಳಿತುಕೊಂಡಿದ್ದವರಲ್ಲಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ವಿವರಿಸಿದ್ದಾರೆ.

ಅಪಘಾತ ಸಂಭವಿಸಿದ ಸ್ಥಳದಲ್ಲಿ ವಿದ್ಯುತ್‌ ದೀಪಗಳಿಲ್ಲ. ಇಲ್ಲಿಂದ ಸರ್ವಿಸ್‌ ರಸ್ತೆ ಅನತಿ ದೂರದಲ್ಲಿದೆ. ಕೆಟ್ಟು ನಿಂತಿದ್ದ ಟೆಂಪೊವನ್ನು ಸರ್ವಿಸ್‌ ರಸ್ತೆಗೆ ತಂದಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ. ಅಲ್ಲದೇ, ನಿಲುಗಡೆ ಆಗಿದ್ದ ಟೆಂಪೊ ಪಾರ್ಕಿಂಗ್‌ ದೀಪವನ್ನು ಹಾಕಿರಲಿಲ್ಲ. ಅರ್ಧ ಗಂಟೆಗೂ ಹೆಚ್ಚು ಹೊತ್ತು ವಾಹನ ನಿಂತಿದ್ದರೂ ಹೆದ್ದಾರಿ ಗಸ್ತು ವಾಹನದ ಗಮನಕ್ಕೆ ಬಂದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.