ಹೊಸದುರ್ಗ: ‘ತಾಲ್ಲೂಕಿನ ಬೆಲಗೂರು ಹಾಗೂ ಮತ್ತೋಡು ಗ್ರಾಮಗಳಲ್ಲಿ ಸಾವಿರಕ್ಕೂ ಅಧಿಕ ಪಡಿತರ ಕಾರ್ಡ್ ಇವೆ. ಈ ಭಾಗದಲ್ಲಿ ಹೆಚ್ಚುವರಿ ನ್ಯಾಯಾಬೆಲೆ ಅಂಗಡಿ ಆರಂಭಿಸಬೇಕು’ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ನಡೆದ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆಎಸ್‌ಆರ್‌ಟಿಸಿ ಬಸ್‍ಗಳನ್ನು ಸಮಯಕ್ಕೆ ಸರಿಯಾಗಿ ಎಲ್ಲಾ ಕಡೆಯೂ ಓಡಿಸಬೇಕು. ಹೊಸದುರ್ಗದಿಂದ ಹಲವರು ಉತ್ತಮ ಆಸ್ಪತ್ರೆಗಳಿವೆ ಎಂಬ ಕಾರಣಕ್ಕೆ ಪಕ್ಕದ ಜಿಲ್ಲೆಗೆ ಚಿಕಿತ್ಸೆ ಪಡೆಯಲು ಹೋಗುತ್ತಾರೆ. ಆದಾಯ ಕಡಿಮೆಯಿದೆ ಎಂದು ಬೆಳಗಿನ ಸಮಯ ಪ್ರಮುಖ ಮಾರ್ಗದಲ್ಲಿ ಬಸ್ ಸಂಚಾರ ನಿಲ್ಲಿಸುವುದು ತಪ್ಪು. ಸರ್ಕಾರ ಮಹಿಳೆಯರಿಗೆ ಉಚಿತ ಸೇವೆ ನೀಡುತ್ತಿರಬಹುದು. ಆದರೆ ನಿಗಮಕ್ಕೆ ಹಣ ಪಾವತಿ ಮಾಡುತ್ತಿದ್ದು, ಶುಕ್ರವಾರದಿಂದಲೇ ಬೆಳಿಗ್ಗೆ 9, 10ರ ಸಮಯದಲ್ಲಿ ಬಸ್ ಸಂಚಾರ ಆರಂಭಿಸಬೇಕು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರಿಗೆ ಸೂಚಿಸಿದರು.
‘ಸಂಜೆ ಸಮಯದಲ್ಲಿ ಹಿರಿಯೂರಿನಿಂದ ಹೊಸದುರ್ಗಕ್ಕೆ ಬರಲು ಯಾವುದೇ ಬಸ್‍ಗಳ ವ್ಯವಸ್ಥೆ ಇಲ್ಲ. ಸಂಜೆ 7, 8ಕ್ಕೆ ಹಿರಿಯೂರಿನಿಂದ ಹೊಸದುರ್ಗ ಮಾರ್ಗವಾಗಿ ಎರಡು ಬಸ್‍ಗಳನ್ನು ಓಡಿಸಬೇಕು. ಮತ್ತೋಡು, ಗುಡ್ಡದ ನೇರಲಕೆರೆ ಮಾರ್ಗವಾಗಿ ವಿದ್ಯಾರ್ಥಿಗಳ ಅನುಕೂಲಕ್ಕೆ ಹೆಚ್ಚುವರಿ ಬಸ್‍ಗಳ ಸೌಲಭ್ಯ ಕಲ್ಪಿಸಬೇಕು. ಸಾರ್ವಜನಿಕ ಸ್ಥಳಗಳು, ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಗ್ಯಾರಂಟಿ ಯೋಜನೆಗಳ ಒಟ್ಟು ಫಲಾನುಭವಿಗಳ ಅಂಕಿ ಅಂಶಗಳ ಮಾಹಿತಿ ಫಲಕ ಅಳವಡಿಸಿಬೇಕು’ ಎಂದು ಹೇಳಿದರು.
‘ಕುರುಬರಹಳ್ಳಿ, ಗೊರವಿಗೊಂಡನಹಳ್ಳಿ ನ್ಯಾಯಬೆಲೆ ಅಂಗಡಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ತಾಲ್ಲೂಕಿನಲ್ಲಿ ಕುಟುಂಬಗಳ ಸಂಖ್ಯೆಗಿಂತ ಹೆಚ್ಚು ಪಡಿತರ ಕಾರ್ಡ್‍ಗಳಿವೆ. ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್‍ನಲ್ಲಿ ಗುರುತು ದಾಖಲಾಗುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಈ ಬಗ್ಗೆ ಪರಿಶೀಲನೆ ನಡೆಸಿ’ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಪ್ರಭಾಕರ್ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಸುನೀಲ್‍ಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಶ್ರೀನಿವಾಸ್ ಮೂರ್ತಿ, ಸದಸ್ಯರಾದ ಗುರುಮೂರ್ತಿ, ಮೂರ್ತಪ್ಪ, ರಾಜೇಂದ್ರ ಪ್ರಸಾದ್, ಪ್ರಭಾಕರ್, ಸಣ್ಣಕಿಟ್ಟದಹಳ್ಳಿ ಶ್ರೀನಿವಾಸ್, ನವಾಜ್ ಹಾಗೂ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.