ADVERTISEMENT

ಗಮನ ಸೆಳೆದ ಅಮೃತ್‌ ಮಹಲ್‌ ತಳಿ ಪ್ರದರ್ಶನ

ಹೊಸದುರ್ಗ ತಾಲ್ಲೂಕಿನ ದೇವಪುರ ಗ್ರಾಮದಲ್ಲಿ ಜಾನುವಾರು ಸಂಭ್ರಮ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 1:28 IST
Last Updated 19 ಜನವರಿ 2021, 1:28 IST
ಹೊಸದುರ್ಗ ತಾಲ್ಲೂಕಿನ ದೇವಪುರ ಗ್ರಾಮದಲ್ಲಿ ಸೋಮವಾರ ನಡೆದ ಅಮೃತ್ ಮಹಲ್ ತಳಿ ಪ್ರದರ್ಶನದಲ್ಲಿ ಭಾಗವಹಿಸಿದ್ದ ಜನ, ಜಾನುವಾರು.
ಹೊಸದುರ್ಗ ತಾಲ್ಲೂಕಿನ ದೇವಪುರ ಗ್ರಾಮದಲ್ಲಿ ಸೋಮವಾರ ನಡೆದ ಅಮೃತ್ ಮಹಲ್ ತಳಿ ಪ್ರದರ್ಶನದಲ್ಲಿ ಭಾಗವಹಿಸಿದ್ದ ಜನ, ಜಾನುವಾರು.   

ಹೊಸದುರ್ಗ: ತಾಲ್ಲೂಕಿನ ದೇವಪುರ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಅಮೃತ್‌ ಮಹಲ್‌ ತಳಿ ಪ್ರದರ್ಶನ ಗಮನ ಎಲ್ಲರ ಸೆಳೆಯಿತು.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ 2020–21ನೇ ಸಾಲಿನ ಜಿಲ್ಲಾ ಪಂಚಾಯಿತಿ ವಿಸ್ತರಣಾ ಘಟಕ ಬಲಪಡಿಸುವಿಕೆ ಕಾರ್ಯಕ್ರಮದಡಿ ಈ ಪ್ರದರ್ಶನ ಆಯೋಜಿಸಲಾಗಿದೆ.

ಬೆಳಿಗ್ಗೆ 8 ಗಂಟೆ ಆಗುತ್ತಿದ್ದಂತೆ ದೇವಪುರ ಸೇರಿ ಸುತ್ತಮುತ್ತಲ ಗ್ರಾಮಗಳ ಕೆಲವು ರೈತರು ಹೋರಿ, ಎತ್ತು, ಹಸು, ಕರುಗಳ ಸ್ನಾನ ಮಾಡಿಸಿದರು. ನಂತರ ಅವುಗಳ ಕೊಂಬಿಗೆ ಕೋಡಣಸು, ಕಾಲು ಹಾಗೂ ಕೊರಳಿಗೆ ಗೆಜ್ಜೆಹಾರ, ಮೈಮೇಲೆ ಜೂಲ (ಅಲಂಕಾರದ ಬಟ್ಟೆ) ಹಾಕಿ ನವವಧುವಿನಂತೆ ಸಿಂಗರಿಸಿದರು.

ADVERTISEMENT

ಬಳಿಕ ದೇವಪುರ ಗ್ರಾಮದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಆವರಣಕ್ಕೆ ಕರೆದುಕೊಂಡು ಬಂದಾಗ ಜಾನುವಾರುಗಳ ಗೆಜ್ಜೆಯ ಸದ್ದು ಮೊಳಗಿತು. ಬಸವ ಜಯಂತಿಯ ಸಂಭ್ರಮದ ಮಾದರಿಯಲ್ಲಿ ಹಬ್ಬದ ಸಡಗರ ಕಳೆಗಟ್ಟಿತ್ತು. ಪ್ರದರ್ಶನದಲ್ಲಿ 154 ಎತ್ತುಗಳು, 172 ಹಸುಗಳು ಹಾಗೂ 50 ಕರುಗಳು ಭಾಗವಹಿಸಿದ್ದವು.

ಪ್ರದರ್ಶನಕ್ಕೆ ಚಾಲನೆ ನೀಡಿದ ಶಾಸಕ ಗೂಳಿಹಟ್ಟಿ ಡಿ.ಶೇಖರ್‌, ‘ಈ ಭಾಗದಲ್ಲಿ ಇಷ್ಟೊಂದು ಅಮೃತ್‌ ಮಹಲ್‌ ತಳಿಯ ಜಾನುವಾರು ಇರುವುದು ಸಂತಸ ತಂದಿದೆ. ಇದು ಗಟ್ಟಿ ತಳಿಯಾಗಿದ್ದು ರೈತರು ಹೆಚ್ಚು, ಹೆಚ್ಚು ಸಾಕಬೇಕು. ಈ ಗ್ರಾಮದಲ್ಲಿ ಅಮೃತ್‌ ಮಹಲ್‌ ಹಸುಗಳ ಹಾಲು ಖರೀದಿ ಕೇಂದ್ರ ತೆರೆಯಿರಿ’ ಎಂದು ಪಶು ಪಾಲನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಉಪನ್ಯಾಸ ನೀಡಿದ ಹಾಸನ ಪಶು ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ನವೀನ್‌ಕುಮಾರ್‌, ‘ಅಮೃತ್‌ ಮಹಲ್‌ ತಳಿಯು ಶ್ರಮದಾಯಕ ಜೀವಿಯಾಗಿದೆ. ರಾಜ್ಯದ ಹೆಮ್ಮೆಯ ತಳಿಗಳಲ್ಲಿ ಒಂದಾಗಿದ್ದು, ಸಣ್ಣ ಮತ್ತು ಅತಿಸಣ್ಣ ರೈತರ ನೆಚ್ಚಿನ ದನವಾಗಿದೆ. ಮೈಸೂರಿನ ಅರಸರು ಈ ತಳಿಯ ಪಾಲನೆ, ಪೋಷಣೆಗೆ ಹೆಚ್ಚು ಒತ್ತು ಕೊಟ್ಟಿದ್ದರು. ವೇಗದ ನಡಿಗೆಯ ತಳಿಯೂ ಇದಾಗಿದೆ. ಈ ತಳಿಯ ಹಸುವಿನ ಹಾಲು ಪೌಷ್ಟಿಕಾಂಶಗಳಿಂದ ಕೂಡಿದ್ದು ಅಮೃತಕ್ಕೆ ಸಮಾನವಾಗಿದೆ’ ಎಂದು ಅಮೃತ್‌ ಮಹಲ್‌ ತಳಿಯ ವಿಶೇಷತೆ ಬಗ್ಗೆ ವಿವರಿಸಿದರು.

ಜಿಲ್ಲಾ ಪಶು ಇಲಾಖೆ ಉಪನಿರ್ದೇಶಕ ಡಾ.ಕೃಷ್ಣಪ್ಪ, ತಾಲ್ಲೂಕು ಸಹಾಯಕ ನಿರ್ದೇಶಕ ಡಾ.ಕಿರಣ್‌, ತಾಲ್ಲೂಕು ಪಂಚಾಯಿತಿ ಸದಸ್ಯೆ ಯಶೋಧಮ್ಮ, ಹನುಮಂತಪ್ಪ, ರಂಗಪ್ಪ, ತಿಪ್ಪೇಶ್‌, ಡಿ.ಮಲ್ಲೇಶ್‌, ಗ್ರಾಮ ಪಂಚಾಯಿತಿ ನೂತನ ಸದಸ್ಯರು ಇದ್ದರು.

ಬಹುಮಾನ ವಿತರಣೆ
ಅಮೃತ್‌ ಮಹಲ್‌ ತಳಿಯ ಅತ್ಯುತ್ತಮ ಹೋರಿ, ಎತ್ತು, ಹಸು ಹಾಗೂ ಕರುಗಳ ಮಾಲೀಕರಿಗೆ ಸ್ಟೀಲ್‌ ಕೊಳಗ, ಹಾಲಿನ ಕ್ಯಾನ್‌, ಸ್ಟೀಲ್‌ ಬಕೆಟ್‌, ಸ್ಟೀಲ್‌ ಬೇಸೆನ್‌ ಬಹುಮಾನವಾಗಿ ನೀಡಲಾಯಿತು.

ಹೋರಿ ವಿಭಾಗ: ಪ್ರಥಮ ಸ್ಥಾನ ದೇವಪುರ ಭೋವಿಹಟ್ಟಿ ಅಜ್ಜಮ್ಮ ಮಂಜಪ್ಪ, ದ್ವಿತೀಯ ದೇವಪುರ ದಾಸಪ್ಪ, ತೃತೀಯ ನಾಗತೀಹಳ್ಳಿ ಪರಮೇಶ್ವರಪ್ಪ ಪಡೆದುಕೊಂಡರು.

ಎತ್ತು ವಿಭಾಗ: ಪ್ರಥಮ ಸ್ಥಾನ ಹೊನ್ನೇನಹಳ್ಳಿ ತಿಪ್ಪೇಶ್‌, ದ್ವಿತೀಯ ದೇವಪುರ ಮುದ್ದುರಾಜು, ತೃತೀಯ ಬಹುಮಾನ ದೇವಪುರ ತಿಮ್ಮಪ್ಪ ಪಡೆದುಕೊಂಡರು.

ಹಸು ವಿಭಾಗ: ಪ್ರಥಮ ಸ್ಥಾನ ದೇವಪುರ ಹನುಮಂತಪ್ಪ, ದ್ವಿತೀಯ ದೇವಪುರ ಭೋವಿಹಟ್ಟಿ ಶಶಿಕಲಾ, ತೃತೀಯ ದೇವಪುರ ರುದ್ರಪ್ಪ ಅವರಿಗೆ ನೀಡಲಾಯಿತು.

ಕರು ವಿಭಾಗ: ಪ್ರಥಮ ಸ್ಥಾನ ಕೋಡಿಹಳ್ಳಿ ಸಂದೀಪ್‌, ದ್ವಿತೀಯ ಹೊನ್ನೇನಹಳ್ಳಿ ಹನುಮಂತಪ್ಪ, ತೃತೀಯ ಸ್ಥಾನ ನಾಗತೀಹಳ್ಳಿ ಶಂಕರಪ್ಪ ಅವರು ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.