ADVERTISEMENT

ಧರ್ಮಪುರ: ಒಂದೇ ಕೊಠಡಿಯಲ್ಲಿ ಅಂಗನವಾಡಿ, ಗ್ರಂಥಾಲಯ, ಬಿಸಿಯೂಟ ಕೇಂದ್ರ

ಮೂರು ಇಲಾಖೆಗಳ ಕಾರ್ಯಭಾರದ ಒತ್ತಡದಲ್ಲಿ ಧರ್ಮಪುರದ ಪಿ.ಡಿ.ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2023, 6:29 IST
Last Updated 14 ಡಿಸೆಂಬರ್ 2023, 6:29 IST
ಪಿ.ಡಿ.ಕೋಟೆಯಲ್ಲಿನ ಸಾರ್ವಜನಿಕ ಗ್ರಂಥಾಲಯ
ಪಿ.ಡಿ.ಕೋಟೆಯಲ್ಲಿನ ಸಾರ್ವಜನಿಕ ಗ್ರಂಥಾಲಯ   

ಧರ್ಮಪುರ: ಅದು ಹೆಸರಿಗೆ ಶಾಲಾ ಕೊಠಡಿ. ಆದರೆ ಅದು ಏಕಕಾಲಕ್ಕೆ ಮೂರು ಮೂರು ಇಲಾಖೆಗಳ ಕಾರ್ಯಭಾರವನ್ನು ನಿರ್ವಹಿಸುತ್ತಿದೆ. ಒಂದೇ ಕೋಣೆಯು ಗ್ರಂಥಾಲಯ, ಅಂಗನವಾಡಿ ಹಾಗೂ ಬಿಸಿಯೂಟ ತಯಾರಿಕೆ ಕೇಂದ್ರವಾಗಿ ಬಳಕೆಯಾಗುತ್ತಿದೆ.

ಪುಸ್ತಕ, ಪತ್ರಿಕೆಗಳನ್ನು ಓದುವವರು ಕುರ್ಚಿಯ ಮೇಲೆ ಕುಳಿತಿದ್ದರೆ, ಅಂಗನವಾಡಿ ಮಕ್ಕಳು ನೆಲದ ಮೇಲೆ ಕಲಿಯುತ್ತಾರೆ. ಅಡುಗೆ ಕೆಲಸದವರು ಅದೇ ಕೋಣೆಯಲ್ಲಿ ಊಟ ತಯಾರು ಮಾಡುತ್ತಿರುತ್ತಾರೆ. ಈ ಎಲ್ಲವೂ ಏಕಕಾಲದ ಕಸರತ್ತುಗಳು. ಇದು ಧರ್ಮಪುರ ಸಮೀಪದ ಪಿ.ಡಿ.ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿತ್ಯವೂ ನಡೆಯುವ ವಿದ್ಯಮಾನ.

ಈ ಶಾಲೆಯಲ್ಲಿ ಏಳು ಕೊಠಡಿಗಳಿವೆ. ಆದರೆ ಸುಸ್ಥಿತಿಯಲ್ಲಿರುವುದು ನಾಲ್ಕು ಮಾತ್ರ. ಉಳಿದ ಮೂರು ದುರಸ್ತಿಗೆ ಕಾದು ಕುಳಿತಿದ್ದು, ಯಾವಾಗ ಬೇಕಾದರೂ ಬೀಳುವ ಸ್ಥಿತಿಯಲ್ಲಿವೆ. ಶಾಲೆಯಲ್ಲಿ ಓದುತ್ತಿರುವ 32 ಬಾಲಕರು ಹಾಗೂ 22 ಬಾಲಕಿಯರಿಗೆ ಉಳಿದ ನಾಲ್ಕು ಕೋಣೆಗಳೇ ಆಸರೆ. ಆದರೆ, ಈ ಪೈಕಿ ಒಂದು ಕೋಣೆಯು ಗ್ರಂಥಾಲಯ, ಅಂಗನವಾಡಿ ಹಾಗೂ ಬಿಸಿಯೂಟ ತಯಾರಿಕೆಗೆ ಬಳಕೆಗೆ ನೀಡಲಾಗಿದೆ.  

ADVERTISEMENT

ಗ್ರಾಮದ ಎರಡು ಅಂಗನವಾಡಿ ಕೇಂದ್ರಗಳು ಇದೇ ಸರ್ಕಾರಿ ಶಾಲೆಯ ಮೈದಾನದಲ್ಲಿವೆ. ಈ ಪೈಕಿ 2ನೇ ಅಂಗನವಾಡಿ ಕೇಂದ್ರದ ಕೊಠಡಿಯ ಗೋಡೆ ಬಿರುಕು ಬಿಟ್ಟಿದ್ದು, ಬೀಳುವ ಹಂತದಲ್ಲಿದೆ. ಈ ಕಾರಣಕ್ಕೆ ಕಳೆದ 15 ವರ್ಷಗಳಿಂದಲೂ ಈ ಕಟ್ಟಡಕ್ಕೆ ಬೀಗ ಹಾಕಲಾಗಿದೆ. ಹೀಗಾಗಿ, ಸರ್ಕಾರಿ ಶಾಲೆಯ ಒಂದು ಕೊಠಡಿಯಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ. ವಿಪರ್ಯಾಸ ಏನೆಂದರೆ, ಅಂಗನವಾಡಿ ಉದ್ದೇಶಕ್ಕೆ ನೀಡಲಾದ ಇದೇ ಕೊಠಡಿಯಲ್ಲಿ 15 ವರ್ಷಗಳಿಂದ ಸಾರ್ವಜನಿಕ ಗ್ರಂಥಾಲಯವೂ ನಡೆಯುತ್ತಿದೆ.

ಅಂಗನವಾಡಿ ಮತ್ತು ಗ್ರಂಥಾಲಯ ಇರುವ ಕೊಠಡಿಯಲ್ಲೇ ಮಕ್ಕಳಿಗೆ ಬಿಸಿಯೂಟ ತಯಾರಿಯೂ ನಡೆಯುತ್ತಿದೆ. ಒಂದು ಕಡೆ ಗ್ರಂಥಾಲಯದ ಪುಸ್ತಕಗಳನ್ನು ಜೋಡಿಸಲಾಗಿದೆ. ಅಂಗನವಾಡಿ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಪ್ರತ್ಯೇಕ ಕೊಠಡಿ ಇಲ್ಲದಿರುವುದರಿಂದ ಇದೇ ಕೊಠಡಿಯ ಒಂದು ಬದಿಯಲ್ಲಿ ಅಡುಗೆ ತಯಾರಿ ಮಾಡಲಾಗುತ್ತದೆ. ಬಿಸಿಯೂಟ ತಯಾರಿಗೆ ಬೇಕಾದ ದಿನಸಿ ಸಾಮಾಗ್ರಿಗಳು, ಗ್ಯಾಸ್ ಸಿಲಿಂಡರ್, ಸ್ಟವ್ ಇರಿಸಲಾಗಿದೆ. ಅಡುಗೆ ಸಿದ್ಧಪಡಿಸುವ ವೇಳೆ ಸ್ವಲ್ಪ ವ್ಯತ್ಯಾಸವಾದರೂ, ಮಕ್ಕಳಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. 

ಸಾರ್ವಜನಿಕ ಗ್ರಂಥಾಲಯಕ್ಕೆ ಬೆಳಿಗ್ಗೆ ಪತ್ರಿಕೆ ಓದಲು ಬರುವವರಿಗೆ ಅನನುಕೂಲವಾಗುತ್ತಿದೆ ಓದುಗರು ದೂರಿದ್ದಾರೆ. ಅಂಗನವಾಡಿ ಮಕ್ಕಳು ಅದೇ ಕೊಠಡಿಯಲ್ಲಿ ಇರುವುದರಿಂದ ಪ್ರಶಾಂತ ಸ್ಥಿತಿಯಲ್ಲಿ ಓದುವ ವಾತಾವರಣ ಇಲ್ಲದಂತಾಗಿದೆ. ಬಹಳಷ್ಟು ಓದುಗರು ಈ ಕಾರಣಕ್ಕೆ ಗ್ರಂಥಾಲಯದ ಒಳಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ಓದುಗರೊಬ್ಬರು ಹೇಳಿದ್ದಾರೆ.

ಪಿ.ಡಿ.ಕೋಟೆಯಲ್ಲಿ ಸಾರ್ವಜನಿಕ ಗ್ರಂಥಾಲಯ ಕೊಠಡಿಯಲ್ಲೇ ನಡೆಯುತ್ತಿರುವ ಅಂಗನವಾಡಿ ಕೇಂದ್ರ
ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು 15 ವರ್ಷಗಳಿಂದ ಬಾಗಿಲು ಮುಚ್ಚಿದೆ
ಅಂಗನವಾಡಿ ಕೊಠಡಿಯ ಒಳಗೆ ಇರಿಸಿರುವ ಬಿಸಿಯೂಟ ತಯಾರಿ ಸಾಮಗ್ರಿ
ಲತಾ
ಇಲ್ಲಿನ ಸಾರ್ವಜನಿಕ ಗ್ರಂಥಾಲಯವನ್ನು ಡಿಜಿಟಲ್ ಗ್ರಂಥಾಲಯವಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವವಿದೆ. ಆದರೆ ಅದೇ ಕೊಠಡಿಯಲ್ಲಿ ಅಂಗನವಾಡಿ ಕೇಂದ್ರ ಕಾರ್ಯ ನಿರ್ವಹಿಸುತ್ತಿರುವುದರಿಂದ ಈ ಕೆಲಸಕ್ಕೆ  ಹಿನ್ನಡೆಯಾಗಿದೆ
ಆರ್.ಕೆಂಚಮ್ಮ ಗ್ರಂಥಾಲಯ ಮೇಲ್ವಿಚಾರಕಿ 
ಒಂದೇ ಕೊಠಡಿಯಲ್ಲಿ ಅಂಗನವಾಡಿ ಮತ್ತು ಗ್ರಂಥಾಲಯ ಹಾಗೂ ಬಿಸಿಯೂಟ ತಯಾರಿ ನಡೆಯುವುದರಿಂದ ಇಲ್ಲಿ ಕಲಿಯುತ್ತಿರುವ 18 ಮಕ್ಕಳ ಪೋಷಕರು ಆತಂಕದಲ್ಲಿದ್ದಾರೆ. ಪ್ರತ್ಯೇಕ ಕೊಠಡಿ ನಿರ್ಮಾಣವಾಗಬೇಕು. ಅಂಗನವಾಡಿ ಕೇಂದ್ರ ದುರಸ್ಥಿಯಾಗಬೇಕು
ಲತಾ ಪಾಲಕರು
ಶಾಲೆಯ ಮೂರು ಕೊಠಡಿಗಳು ತಕ್ಷಣವೇ ದುರಸ್ಥಿಯಾಗಬೇಕು. ಶಾಲೆಗೆ ತಡೆಗೋಡೆ ನಿರ್ಮಾಣವಾಗಬೇಕು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಯಗಳು ನಿರ್ಮಾಣವಾಗಬೇಕು. ಸಾರ್ವಜನಿಕ ಗ್ರಂಥಾಲಯಕ್ಕೆ ಬೇರೆಡೆ ಕೊಠಡಿ ನಿರ್ಮಿಸಬೇಕು.
ಅಂಗನವಾಡಿ ದುರಸ್ಥಿ ಮಾಡಬೇಕು ಶಾಹಿಸ್ತ ಆಜ್ಮಿ ಎಸ್‌ಡಿಎಂಸಿ ಅಧ್ಯಕ್ಷೆ 

ಶೌಚಾಲಯ ಮರೀಚಿಕೆ

ಶಾಲಾ ಆವರಣದಲ್ಲಿ ಮೂರು ಶೌಚಾಲಯಗಳಿವೆ. ಅದರಲ್ಲಿ ಎರಡು ಶೌಚಾಲಯಗಳ ಬಾಗಿಲಿಗೆ ಬೀಗ ಹಾಕಿ ಹತ್ತು ವರ್ಷಗಳೇ ಕಳೆದಿವೆ. ಮತ್ತೊಂದು ಶೌಚಾಲಯ ಅಂಗವಿಕಲರಿಗೆ ಮೀಸಲಾಗಿದ್ದು ಅಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಆದರೆ ಶೌಚಾಲಯ ಅಗತ್ಯ ಇರುವವರಿಗೆ ಬಳಕೆಯಾಗುತ್ತಿಲ್ಲ. ಗ್ರಾಮದ ಮಧ್ಯ ಭಾಗಲದಲ್ಲೇ ಶಾಲೆ ಇದ್ದು ಇದಕ್ಕೆ ತಡೆಗೋಡೆ ಇಲ್ಲ. ಹೀಗಾಗಿ ಊರಿನ ನಾಗರಿಕರು ಶಾಲೆಯ ಶೌಚಾಲಯವನ್ನು ಬಳಸುತ್ತಿದ್ದಾರೆ ಎಂಬ ಆರೋಪಗಳಿವೆ. ಈ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಬಯಲು ಬಹಿರ್ದೆಸೆಯೇ ಆಸರೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.