
ಚಿತ್ರದುರ್ಗ: ‘ರಾಜ್ಯದಲ್ಲಿ ಒಳಮೀಸಲಾತಿ ಅನುಷ್ಠಾನಗೊಂಡಿದ್ದರೂ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳದ ಕಾರಣ ಉದ್ಯೋಗಾಕಾಂಕ್ಷಿಗಳು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಶೀಘ್ರ ನೇಮಕಾತಿ ಆರಂಭಗೊಳ್ಳದಿದ್ದರೆ ಅವರ ಬದುಕು ಸಂಕಷ್ಟಮಯವಾಗಲಿದೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಆತಂಕ ವ್ಯಕ್ತಪಡಿಸಿದರು.
‘ಶಿಕ್ಷಣದಲ್ಲಿ ಒಳಮೀಸಲಾತಿ ಅನುಷ್ಠಾನಗೊಂಡಿದ್ದು, ವಿದ್ಯಾರ್ಥಿಗಳಿಗೆ ನ್ಯಾಯ ಸಿಕ್ಕಿದೆ. ಆದರೆ, ಉದ್ಯೋಗದಲ್ಲಿ ಇಲ್ಲಿಯವರೆಗೂ ಒಳಮೀಸಲಾತಿ ಅನ್ವಯವಾಗಿಲ್ಲ. 24,000 ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಈಗಾಗಲೇ ಅನುಮೋದನೆ ನೀಡಿದೆ. ಆದಷ್ಟು ಬೇಗ ನೇಮಕಾತಿ ಆರಂಭಗೊಂಡರೆ ಹಲವು ವರ್ಷಗಳಿಂದ ಕಾಯುತ್ತಿರುವ ಉದ್ಯೋಗಾಕಾಂಕ್ಷಿಗಳ ಬದುಕು ಹಸನಾಗುತ್ತದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಹಲವು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಯುವಜನರು ಶುಲ್ಕ ಭರಿಸಲಾಗದೇ ಪರಿತಪಿಸುತ್ತಿದ್ದಾರೆ. ನೇಮಕಾತಿ ಪ್ರಕ್ರಿಯೆಗಾಗಿ ಅವರು ಕಾಯುತ್ತಿದ್ದಾರೆ. ಒಳ ಮೀಸಲಾತಿ ನಿಗದಿ ವಿರುದ್ಧ ಅಲೆಮಾರಿ ಸಮುದಾಯದವರು ಹೈಕೋರ್ಟ್‌ನಲ್ಲಿ ನಿಷೇಧಾಜ್ಞೆ ತಂದಿದ್ದಾರೆ. ಇದರಿಂದ ನೇಮಕಾತಿ ಮತ್ತಷ್ಟು ತಡವಾಗುತ್ತಿದೆ. ಅಲೆಮಾರಿ ಸಮುದಾಯಗಳ ಮನವೊಲಿಸುವ ಪ್ರಯತ್ನ ನಡೆದಿದ್ದು, ಅವರು ವಾಪಸ್ ಪಡೆಯುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.
‘ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಇದ್ದರೂ ನೇಮಕಾತಿ ಪ್ರಕ್ರಿಯೆ ಆರಂಭಿಸಬಹುದು. ಫಲಿತಾಂಶ ಪ್ರಕಟಣೆ, ನೇಮಕಾತಿ ಆದೇಶ ನೀಡುವುದನ್ನು ತಡೆ ಹಿಡಿದು ಪ್ರಕ್ರಿಯೆ ಆರಂಭಿಸಲು ಯಾವುದೇ ಅಡ್ಡಿ ಇಲ್ಲ ಎಂದು ನ್ಯಾಯಾಲಯವೇ ಅಭಿಪ್ರಾಯಪಟ್ಟಿದೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಆದಷ್ಟು ಶೀಘ್ರ ಪ್ರಕ್ರಿಯೆ ಆರಂಭಿಸಬೇಕು. ಹಲವು ವರ್ಷಗಳಿಂದ ಕಾಯುತ್ತಿರುವ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು’ ಎಂದು ಹೇಳಿದರು.
‘ಮೀಸಲಾತಿ ಪ್ರಮಾಣವನ್ನು 56ಕ್ಕೆ ಹೆಚ್ಚಳ ಮಾಡಿರುವುದಕ್ಕೂ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಇದೆ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವುದು ನ್ಯಾಯಯುತವಾದುದು. ಮೀಸಲಾತಿ ಪ್ರಮಾಣ ಹೆಚ್ಚಳವಾಗದಿದ್ದರೆ ಎಸ್‌ಸಿ ಸಮುದಾಯ ಶೇ 2ರಷ್ಟು, ಎಸ್‌ಟಿ ಸಮುದಾಯ ಶೇ 4ರಷ್ಟು ಮೀಸಲಾತಿ ಕಳೆದುಕೊಳ್ಳಲಿವೆ. ಇದರಿಂದ ಎರಡೂ ಸಮುದಾಯಗಳಲ್ಲಿ ಆತಂಕ ಮನೆ ಮಾಡಿದೆ’ ಎಂದರು.
‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ 15ರಿಂದ ಶೇ 17ಕ್ಕೆ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಏರಿಸಿತ್ತು. ಇದರಿಂದ ಒಟ್ಟು ಮೀಸಲಾತಿ ಪ್ರಮಾಣ ಶೇ 56ಕ್ಕೆ ಏರಿಕೆಯಾಗಿತ್ತು. ಈಗ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವ ಕಾರಣ ಹೊಸ ಮೀಸಲಾತಿ ಜಾರಿಯಾಗಿಲ್ಲ. ಹೊಸ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಈಗಾಗಲೇ ಹಲವು ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಳವಾಗಿದ್ದು, ಅದನ್ನು ಅನುಷ್ಠಾನ ಮಾಡಲಾಗಿದೆ. ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಜಾರಿಗೊಳ್ಳಬೇಕು. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಇಚ್ಛಾಶಕ್ತಿ ಪ್ರಕಟಿಸಬೇಕು. ಬ್ರಿಟಿಷರ ಕಾಲದಲ್ಲಿ ನಿಗದಿಯಾಗಿದ್ದ ಮೀಸಲಾತಿ ಪ್ರಮಾಣವೇ ಮುಂದುವರಿಯುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಳವಾಗಬೇಕು’ ಎಂದರು.
ಕಾನೂನು ಬೆಂಬಲ ಬೇಕು
‘ಒಳಮೀಸಲಾತಿ ಮಸೂದೆಯನ್ನು ರಾಜ್ಯಪಾಲರು ವಾಪಸ್ ಕಳುಹಿಸಿರುವುದು ಸರಿಯಲ್ಲ. ಅವರು ಒಪ್ಪಿಗೆ ಸೂಚಿಸದಿದ್ದರೂ ಈಗಾಗಲೇ ಅನುಷ್ಠಾನಗೊಂಡಿರುವ ಕಾರಣ ಯಾವುದೇ ತೊಂದರೆ ಇಲ್ಲ. ಒಳಮೀಸಲಾತಿ ಅನುಷ್ಠಾನಕ್ಕೆ ಕಾನೂನಿನ ಬೆಂಬಲ ಬೇಕು ಎಂಬುದು ನಮ್ಮ ಕೋರಿಕೆ’ ಎಂದು ಆಂಜನೇಯ ಹೇಳಿದರು.
‘ಆರ್ಥಿಕ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್) ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಮಸೂದೆ ಸಂಬಂಧ ಚರ್ಚೆಗಳೇ ನಡೆಯಲಿಲ್ಲ. ಕೇವಲ 48 ಗಂಟೆಗಳಲ್ಲಿ ಮಸೂದೆ ಕಾನೂನಿನ ರೂಪ ಪಡೆದು ಜಾರಿಯಾಯಿತು. ಆದರೆ ಒಳ ಮೀಸಲಾತಿ ಹೋರಾಟ ದಶಕಗಳಿಂದ ನಡೆಯುತ್ತಿದ್ದರೂ ಇಲ್ಲಿಯವರೆಗೂ ಕಾನೂನು ರೂಪ ಪಡೆಯದಿರುವುದು ದುರದೃಷ್ಟಕರ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.