ADVERTISEMENT

ಚಿತ್ರದುರ್ಗ: ಮದ್ಯ ಮಾರಾಟ ನಿಷೇಧಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 4:09 IST
Last Updated 26 ನವೆಂಬರ್ 2022, 4:09 IST
ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಎದುರು ಶುಕ್ರವಾರ ಜಮಾಯಿಸಿದ ಮಹಿಳೆಯರು ಮದ್ಯ ಮಾರಾಟ ನಿಷೇಧಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಮನವಿ ಸಲ್ಲಿಸಿದರು.
ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಎದುರು ಶುಕ್ರವಾರ ಜಮಾಯಿಸಿದ ಮಹಿಳೆಯರು ಮದ್ಯ ಮಾರಾಟ ನಿಷೇಧಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಮನವಿ ಸಲ್ಲಿಸಿದರು.   

ಚಿತ್ರದುರ್ಗ: ಮದ್ಯ ಮಾರಾಟ ನಿಷೇಧಿಸುವಂತೆ ಕೋರಿ ಹೊಸದುರ್ಗ ತಾಲ್ಲೂಕಿನ ಶಿರನಕಟ್ಟೆ ಕೋಡಿಹಳ್ಳಿಹಟ್ಟಿಯ ಮಹಿಳೆಯರು ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಎದುರು ಜಮಾಯಿಸಿದ ಗ್ರಾಮದ ಮಹಿಳೆಯರು ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್‌.ಜೆ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮದ ಬಹುತೇಕರು ಹಿಂದುಳಿದ ಜನಾಂಗಕ್ಕೆ ಸೇರಿದವರು. ಕೃಷಿ ಕೂಲಿ ಕಾರ್ಮಿಕರಾಗಿ ಬದುಕು ಕಟ್ಟಿಕೊಂಡಿದ್ದೇವೆ. ಗ್ರಾಮದಲ್ಲಿ ಮದ್ಯ ಲಭ್ಯವಾಗುತ್ತಿದ್ದು, ಪುರುಷರು ಮದ್ಯ ವ್ಯಸನಿಗಳಾಗುತ್ತಿದ್ದಾರೆ. ವಿದ್ಯಾರ್ಥಿಗಳು, ಯುವಕರು ಮದ್ಯ ಸೇವಿಸುತ್ತಿದ್ದಾರೆ. ಇದು ಮಹಿಳೆಯರಲ್ಲಿ ಆತಂಕ ಮೂಡಿಸಿದೆ ಎಂದರು.

ADVERTISEMENT

ಪುರುಷರು ಮದ್ಯ ಸೇವಿಸಿ ಅಲೆದಾಡುತ್ತಿದ್ದಾರೆ. ಕೃಷಿ ಕೆಲಸಕ್ಕೆ ಬರಲು ನಿರಾಕರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲೆ–ಕಾಲೇಜುಗಳಿಗೆ ತೆರಳುತ್ತಿಲ್ಲ. ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂಬ ನೋವು ಕಾಡುತ್ತಿದೆ. ಮದ್ಯ ಮಾರಾಟ ನಿಷೇಧಕ್ಕೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.

ಆರ್ಥಿಕ ಹಾಗೂ ರಾಜಕೀಯವಾಗಿ ಪ್ರಬಲರಾಗಿರುವವರು ಎಲ್ಲೆಂದರಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಗ್ರಾಮದ ನಾಲ್ಕೈದು ಸ್ಥಳದಲ್ಲಿ ಮದ್ಯ ಸಿಗುತ್ತಿದೆ. ಮದ್ಯ ಸೇವನೆಯಿಂದ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿವೆ. ಅಧಿಕಾರಿಗಳು ಗ್ರಾಮದ ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮ ಕೈಗೊಳ್ಳಬೇಕು ಎಂದು ಕೋರಿಕೊಂಡರು.

ಗ್ರಾಮದ ಮಹಿಳೆಯರಾದ ಲಕ್ಷ್ಮಿದೇವಿ, ಪ್ರಭಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.