ADVERTISEMENT

ಲಾಕ್‌ಡೌನ್ | ಸಾಹಿತಿ, ಕಲಾವಿದರಿಗೆ ಸಿಗದ ನೆರವು

313 ಅರ್ಹರನ್ನು ಆಯ್ಕೆ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಜಿ.ಬಿ.ನಾಗರಾಜ್
Published 26 ಮೇ 2020, 19:30 IST
Last Updated 26 ಮೇ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ಲಾಕ್‌ಡೌನ್‌ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿದ ಬಡ–ನಿರ್ಗತಿಕ ಕಲಾವಿದರು ಹಾಗೂ ಸಾಹಿತಿಗಳಿಗೆ ₹ 2 ಸಾವಿರ ನೆರವು ನೀಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ವಾಸನೆ ನೀಡಿತ್ತು. ಅರ್ಜಿ ಸಲ್ಲಿಸಿ ತಿಂಗಳು ಕಳೆದರೂ ನೆರವು ಮಾತ್ರ ಸಿಕ್ಕಿಲ್ಲ.

ಚಿತ್ರದುರ್ಗ ಜಿಲ್ಲೆಯಲ್ಲಿ ಸಲ್ಲಿಕೆಯಾಗಿದ್ದ 719 ಅರ್ಜಿಗಳಲ್ಲಿ 152 ಅರ್ಜಿ ತಿರಸ್ಕೃತಗೊಂಡಿದ್ದವು. ಉಳಿದ ಅರ್ಜಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಕೇಂದ್ರ ಕಚೇರಿಗೆ ಶಿಫಾರಸು ಮಾಡಿದ್ದರು. ಇದರಲ್ಲಿ 313 ಅರ್ಹರನ್ನು ಆಯ್ಕೆ ಮಾಡಲಾಗಿದೆ. ಆದರೆ, ಈವರೆಗೆ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೆರವಿನ ಹಣ ಜಮೆ ಆಗಿಲ್ಲ.

ಜೀವನ ನಿರ್ವಹಣೆಗೂ ಕಷ್ಟ:ಕೊರೊನಾ ಸೋಂಕು ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಾರ್ಚ್‌ 25ರಿಂದ ಲಾಕ್‌ಡೌನ್‌ ಘೋಷಣೆ ಮಾಡಿತು. ಲಾಕ್‌ಡೌನ್‌ ಎರಡನೇ ಅವಧಿಗೆ ವಿಸ್ತರಣೆಯಾದ ಬಳಿಕ ಕಲಾವಿದರ ಸಂಕಷ್ಟ ಸರ್ಕಾರದ ಗಮನಕ್ಕೆ ಬಂದಿತು. ಜೀವನ ನಿರ್ವಹಣೆಗೂ ತೊಂದರೆ ಅನುಭವಿಸುವವರಿಂದ ಅರ್ಜಿ ಆಹ್ವಾನಿಸಿತು. ಏ.22ರಿಂದ ಏ.27ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿತ್ತು. ಇಲಾಖೆ ನಿಗದಿಪಡಿಸಿದ ನಿಯಮಾವಳಿ ಪಾಲನೆ ಮಾಡದ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು.

ADVERTISEMENT

ಶುಭ ಸಮಾರಂಭ, ಮದುವೆ, ಗೃಹ ಪ್ರವೇಶ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಲಾಕ್‌ಡೌನ್‌ಗೂ ಮೊದಲೇ ಕಡಿವಾಣ ಬಿದ್ದಿತ್ತು. ಇದು ನೈಜ ಕಲಾವಿದರನ್ನು ಬಹುದೊಡ್ಡ ಸಂಕಷ್ಟಕ್ಕೆ ಸಿಲುಕಿಸಿತು. ಬಡತನದಲ್ಲೇ ಇರುವ ಜಾನಪದ ಕಲಾವಿದರು ಜೀವನ ನಿರ್ವಹಣೆಗೆ ತೊಂದರೆ ಅನುಭವಿಸತೊಡಗಿದರು. ಬ್ಯಾಂಡ್‌, ವೀರಗಾಸೆ, ಡೊಳ್ಳು ಕುಣಿತ, ಸೋಬಾನೆ ಪದ, ಭಜನೆ ಸೇರಿ ಹಲವು ಬಗೆಯ ಕಲಾಸೇವೆಯಲ್ಲಿ ತೊಡಗಿಕೊಂಡವರು ಸಹಾಯಕ್ಕಾಗಿ ಸರ್ಕಾರದ ಮುಂದೆ ಕೈಚಾಚಿದರು.

ಅರ್ಹರ ಆಯ್ಕೆ ಗೊಂದಲ:ಅರ್ಜಿ ಸಲ್ಲಿಸಲು ಕಲಾವಿದರು ಹಲವು ರೀತಿಯ ಸಮಸ್ಯೆ ಎದುರಿಸಿದರು. ಲಾಕ್‌ಡೌನ್‌ ನಡುವೆ ಅರ್ಜಿ ಸಲ್ಲಿಸಲು ಕಷ್ಟಪಟ್ಟು ಚಿತ್ರದುರ್ಗಕ್ಕೆ ಬಂದಿದ್ದರು. ಹತ್ತು ವರ್ಷ ಕಲಾ ಸೇವೆಯಲ್ಲಿ ತೊಡಗಿಕೊಂಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲು ಹರಸಾಹಸಪಟ್ಟಿದ್ದರು.

ಅರ್ಹರ ಆಯ್ಕೆಗೆ ಆರಂಭದಲ್ಲಿ ರೂಪಿಸಿದ ಮಾರ್ಗಸೂಚಿಯಲ್ಲಿ ಹಲವು ದೋಷಗಳಿದ್ದವು. ಈ ಬಗ್ಗೆ ಚರ್ಚಿಸಿದ ಅಧಿಕಾರಿಗಳು ‘ಬಡ ಮತ್ತು ನಿರ್ಗತಿಕ ಕಲಾವಿದರು ಅರ್ಹರು’ ಎಂಬ ಷರತ್ತನ್ನು ವಿಧಿಸಿದರು. ಅರ್ಜಿ ಸಲ್ಲಿಸಿದ ಕಲಾವಿದರಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ರೈತರು ಹಾಗೂ ಅನುಕೂಲಸ್ಥರೂ ಇದ್ದರು.

ಮಧ್ಯವರ್ತಿಗಳ ಹಾವಳಿ:ಲಾಕ್‌ಡೌನ್‌ ಅವಧಿಯಲ್ಲಿ ಸರ್ಕಾರ ನೀಡುವ ನೆರವಿಗೂ ಮಧ್ಯವರ್ತಿಗಳು ಹುಟ್ಟಿಕೊಂಡಿದ್ದಾರೆ. ಕಲಾವಿದರಿಂದ ಹಣ ಪಡೆದು ಅರ್ಜಿ ಹಾಕಿಸಿರುವುದು ಬೆಳಕಿಗೆ ಬಂದಿದೆ.

ಸರ್ಕಾರ ಅರ್ಜಿ ಆಹ್ವಾನಿಸಿದ ಬಳಿಕ ಕಲಾವಿದರನ್ನು ಸಂಪರ್ಕಿಸಿದ ಮಧ್ಯವರ್ತಿಗಳು ನೆರವು ಪಡೆಯುವಂತೆ ಮನವೊಲಿಸಿದ್ದಾರೆ. ಹೆಸರು, ಪೂರ್ಣ ವಿಳಾಸದೊಂದಿಗೆ ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌ ನಕಲು ಪ್ರತಿ ಪಡೆದಿದ್ದಾರೆ. ಅರ್ಜಿಯೊಂದಿಗೆ ₹ 500 ನೀಡಿದರೆ, ₹ 2 ಸಾವಿರ ಕೊಡಿಸುವುದಾಗಿ ಆಮಿಷವೊಡ್ಡಿದ್ದಾರೆ. ಇದನ್ನು ನಂಬಿದ ಅನೇಕರು ಮಧ್ಯವರ್ತಿಗಳ ಬಲೆಗೆ ಬಿದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.