ADVERTISEMENT

ಐಐಎಸ್‌ಸಿ ಕೌಶಲ ಅಭಿವೃದ್ಧಿ ಕೇಂದ್ರದಲ್ಲಿ ಆಡಿಯೊ–ವಿಡಿಯೊ ಪಾಠ

ಕುದಾಪುರದ ಭಾರತೀಯ ವಿಜ್ಞಾನ ಸಂಸ್ಥೆಯ ಕೌಶಲ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಎಂ.ಎಸ್. ಹೆಗಡೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 14:56 IST
Last Updated 2 ಜೂನ್ 2020, 14:56 IST
ಎಂ.ಎಸ್.ಹೆಗಡೆ
ಎಂ.ಎಸ್.ಹೆಗಡೆ   

ನಾಯಕನಹಟ್ಟಿ : ಪ್ರೌಢಶಾಲಾ ಮಕ್ಕಳಿಗಾಗಿ ಕನ್ನಡದಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳ ಪಾಠಗಳನ್ನು ತಂತ್ರಜ್ಞಾನ ಬಳಸಿ ಸರಳವಾಗಿ ನಿರೂಪಿಸುವ ‘ಆಡಿಯೊ-ವಿಡಿಯೊ’ ಪಾಠ ಯೋಜನೆ ತಯಾರಿಸಲಾಗುತ್ತಿದೆ ಎಂದು ಕುದಾಪುರದ ಭಾರತೀಯ ವಿಜ್ಞಾನ ಸಂಸ್ಥೆಯ ಕೌಶಲ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಎಂ.ಎಸ್. ಹೆಗಡೆ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ಬೌದ್ಧಿಕಮಟ್ಟ ಹೆಚ್ಚಿಸಲು ಭಾರತೀಯ ವಿಜ್ಞಾನ ಸಂಸ್ಥೆಯು ಸದಾ ಶ್ರಮಿಸುತ್ತಿದೆ. ಜತೆಗೆ ದೇಶದ ಸಾವಿರಾರು ವಿಜ್ಞಾನ ಶಿಕ್ಷಕರಿಗೆ ಹಲವು ವಿಷಯಗಳಿಂದ ತರಬೇತಿಯನ್ನು ನೀಡುತ್ತಾ ಬಂದಿದೆ. ಲಾಕ್‌ಡೌನ್ ಸಮಯದಲ್ಲಿ ಶಾಲೆಗಳು ಮುಚ್ಚಿವೆ. ಮಕ್ಕಳು ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹಾಗಾಗಿ 8, 9, 10ನೇ ತರಗತಿಯ ಮಕ್ಕಳಿಗೆ ಕನ್ನಡದಲ್ಲಿ ವಿಜ್ಞಾನ ಮತ್ತು ಗಣಿತ ವಿಷಯದ ಪಠ್ಯಗಳನ್ನು ಸರಳವಾಗಿ ಮತ್ತು ವಿಷಯಕ್ಕೆ ಪೂರಕವಾಗಿ ಅನಿಮೇಷನ್ ಚಿತ್ರಗಳನ್ನು ಬಳಸಿ ಹೊಸದಾಗಿ ಪಠ್ಯಯೋಜನೆಯನ್ನು ರೂಪಿಸಲಾಗುತ್ತಿದೆ’ ಎಂದರು.

‘ಸಂಸ್ಥೆಯ ನುರಿತ ವಿಷಯ ತಜ್ಞರು ಮತ್ತು ಎಂಜಿನಿಯರ್‌ಗಳಿಂದ ಪ್ರೌಢಶಾಲಾ ಮಕ್ಕಳ ಬೌದ್ಧಿಕ ಮಟ್ಟಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರದ ಪಠ್ಯಗಳನ್ನು ಆಧರಿಸಿ ಗಣತ ವಿಜ್ಞಾನ ಪಾಠಗಳನ್ನು ತಂತ್ರಜ್ಞಾನದೊಂದಿಗೆ ಕನ್ನಡದಲ್ಲಿ ತಯಾರಿಸಲಾಗುತ್ತಿದೆ. ಈ ಯೋಜನೆಯಲ್ಲಿ ವಿಜ್ಞಾನ ಮತ್ತು ಗಣಿತದ ಪ್ರತಿಯೊಂದು ಪಾಠಗಳಿಗೆ ತಕ್ಕಂತೆ ಚಿತ್ರಗಳನ್ನು ಬಳಸಿ ನಿರೂಪಣೆ ಮಾಡಲಾಗುತ್ತದೆ. ಪ್ರತೀ ಪಾಠವೂ 10ರಿಂದ 15 ನಿಮಿಷದ್ದಾಗಿರುತ್ತದೆ. ಪಾಠದ ಕೊನೆಯಲ್ಲಿ ಪ್ರಶ್ನೋತ್ತರವೂ ಇರಲಿದೆ. ಇದನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ತೋರಿಸಿ ಮತ್ತೆ ರಿವೈಂಡ್ ಮಾಡಿಸಬಹುದಾಗಿದೆ’ ಎಂದರು.

ADVERTISEMENT

‘ಪ್ರತಿ ವಿಡಿಯೊ 10ರಿಂದ 15ನಿಮಿಷ ಇರುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ಆಕರ್ಷಕವಾಗಿರುತ್ತದೆ. ಈ ಎಲ್ಲ ಪಾಠಗಳನ್ನು ಯೂಟ್ಯೂಬ್, ಹಾಗೂ ಐಐಎಸ್‌ಸಿ ಅಧಿಕೃತ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾಗುವುದು. ಮಕ್ಕಳು ಯಾವ ಸಮಯದಲ್ಲಾದರೂ ಜಾಲತಾಣಕ್ಕೆ ತೆರಳಿ ಉಚಿತವಾಗಿ ವೀಕ್ಷಿಸಬಹುದು. ವಿಷಯಕ್ಕೆ ತಕ್ಕಂತೆ ಚಿತ್ರಗಳು, ಸರಳ ನಿರೂಪಣೆ ಇರುವುದರಿಂದ ಮಕ್ಕಳ ಮನಸ್ಸಿನಲ್ಲಿ ದೀರ್ಘ ಸಮಯ ಉಳಿಯಲು ಸಹಕಾರಿಯಾಗುತ್ತದೆ. ಈ ಪಾಠಗಳ ತಯಾರಿಸುವ ಕಾರ್ಯವು ಜೂನ್ ಅಂತ್ಯದ ವೇಳೆಗೆ ಮುಗಿಯುತ್ತದೆ. ಶಾಲೆ ಪ್ರಾರಂಭವಾದ ಬಳಿಕ ಸಮೀಪದ ಕನ್ನಡ ಮಾಧ್ಯಮದ ಪ್ರೌಢಶಾಲೆಗೆ ತೆರಳಿ ಮಕ್ಕಳಿಗೆ ತೋರಿಸಿ ಅಭಿಪ್ರಾಯ ಸಂಗ್ರಹಿಸಲಾಗುವುದು’ ಎಂದರು.

ಐಐಎಸ್‌ಸಿ ಇಂಜಿನಿಯರ್ ಹೇಮಂತ್, ಗಜಾನನ, ಸಿಬ್ಬಂದಿ ವಿಜಯ್, ಪಾಠಯೋಜನೆಯ ತಂತ್ರಜ್ಞರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.