ADVERTISEMENT

ದ್ವೇಷ ಅಸೂಯೆಯಿಂದ ದೂರವಾದರೆ ಬದುಕು ನೆಮ್ಮದಿ: ಬಸವಕುಮಾರ ಸ್ವಾಮೀಜಿ

ಮುರುಘಾಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ; ದಾಂಪತ್ಯಕ್ಕೆ ಕಾಲಿಟ್ಟ14 ಜೋಡಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 8:30 IST
Last Updated 6 ಡಿಸೆಂಬರ್ 2025, 8:30 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ಶುಕ್ರವಾರ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಿತು
ಚಿತ್ರದುರ್ಗದ ಮುರುಘಾ ಮಠದಲ್ಲಿ ಶುಕ್ರವಾರ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಿತು   

ಚಿತ್ರದುರ್ಗ: ‘ದ್ವೇಷ ಅಸೂಯೆಯಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ಅವುಗಳಿಂದ ಸದಾ ದೂರವಿದ್ದು ಪ್ರೀತಿ ವಾತ್ಸಲ್ಯ ಮಮತೆಯಿಂದ ನೆಮ್ಮದಿಯಾಗಿರಬೇಕು’ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವ ಕುಮಾರ ಸ್ವಾಮೀಜಿ ತಿಳಿಸಿದರು.

ನಗರದ ಮುರುಘಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ 35ನೇ ವರ್ಷದ 12ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದ ಅವರು, ‘ಸಮಾಜದಲ್ಲಿ ಕಲಹ, ಆತಂಕಗಳಿಗೆ ಮುಖ್ಯ ಕಾರಣ ದ್ವೇಷ. ದ್ವೇಷದಿಂದ ದೇಶವೇ ನಾಶವಾಗುತ್ತದೆ’ ಎಂದು ಎಚ್ಚರಿಸಿದರು.

‘ಹಿಂದಿನ ಕಾಲದ ಜನರು ನೂರು ವರ್ಷಕ್ಕೂ ಹೆಚ್ಚು ಕಾಲ ಬಾಳುತ್ತಿದ್ದರು. ಕಾರಣ ಅವರಲ್ಲಿ ಮಾನವೀಯತೆ, ಮಮತೆ, ಪ್ರೀತಿ ವಾತ್ಸಲ್ಯವಿತ್ತು. ಅವರಲ್ಲಿ ದುಶ್ಚಟಗಳಿರಲಿಲ್ಲ. ಆದರೆ ಇಂದು ದ್ವೇಷ, ಅಸೂಯೆ ತಾಂಡವವಾಡುತ್ತಿವೆ. ದುಶ್ಚಟಗಳು ಹೆಚ್ಚಾಗಿವೆ. ಈ ಕಾರಣಕ್ಕೆ ಚಿಕ್ಕ ವಯಸ್ಸಿನಲ್ಲೇ ಜನರು ದುರ್ಮರಣಕ್ಕೆ ಈಡಾಗುತ್ತಿದ್ದಾರೆ’ ಎಂದರು.

ADVERTISEMENT

‘ಸತಿಪತಿಗಳು ಒಂದಾಗಿ ಜೀವನ ನಡೆಸಿದರೆ ಅದು ಅಮೃತವಾಗುತ್ತದೆ. ಮನಸ್ಸು ಮತ್ತು ಆಲೋಚನೆಗಳ ನಡುವೆ ಹೊಂದಾಣಿಕೆ ಕಾಪಾಡಿಕೊಳ್ಳಬೇಕು’ ಎಂದು ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ತಿಳಿಸಿದರು.

‘ವ್ಯಕ್ತಿಯ ಸ್ವಪ್ರತಿಷ್ಠೆ, ಅಹಂಕಾರ ಭಾವನೆಯಿಂದಾಗಿ ಪರಸ್ಪರ ಹೊಂದಾಣಿಕೆ ಇಲ್ಲವಾಗುತ್ತಿದೆ. ಇದರ ಪರಿಣಾಮವಾಗಿ ವಿಚ್ಛೇದನ ಪ್ರಕರಣ ಜಾಸ್ತಿಯಾಗುತ್ತಿರುವುದನ್ನು ಕಾಣಬಹುದಾಗಿದೆ. ಜತೆಗೆ ನಂಬಿಕೆ, ವಿಶ್ವಾಸ ಎಷ್ಟು ಕೊಟ್ಟರೂ ಸಿಗದು. ಅದನ್ನು ಅಳವಡಿಸಿಕೊಳ್ಳಿ. ಹಾಲು ಒಡೆಯಲು ಒಂದು ಹನಿ ಹುಳಿ ಹಿಂಡಿದರೆ ಸಾಕು. ಹಾಗಾಗಿ ಚಾಡಿ ಮಾತುಗಳನ್ನು ಸತಿಪತಿಗಳು ಕೇಳಬಾರದು’ ಎಂದು ಕಿವಿಮಾತು ಹೇಳಿದರು.

‘ಬೆಚ್ಚನೆಯ ಮನೆ ಇದ್ದು, ವೆಚ್ಚಕ್ಕೆ ಹೊನ್ನಿದ್ದು, ಇಚ್ಛೆಯನ್ನು ಅರಿಯುವಂತಹ ಸತಿ ಇದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆ. ಆದ್ದರಿಂದ ಸತಿ ಪತಿಗಳು ಒಂದಾಗಿ ಬಾಳಿ. ಅತ್ತೆ-ಮಾವ, ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು’ ಎಂದು ಶಿರಸಂಗಿ ಖಾಸಾಮಠದ ಬಸವ ಮಹಾಂತ ಸ್ವಾಮೀಜಿ ಸಲಹೆ ನೀಡಿದರು.

‘ಮಠದಲ್ಲಿ ಪ್ರತಿ ತಿಂಗಳು ನಡೆಯುವ ಸಾಮೂಹಿಕ ಕಲ್ಯಾಣ ಮಹೋತ್ಸವವು ಈ ಭಾಗದ ಬಡಜನರ ಕಲ್ಯಾಣ ಕಾರ್ಯಗಳಿಗೆ ವರದಾನವಾಗಿದೆ. ದೇಶ, ಸಮಾಜ ಶಾಂತಿಯಿಂದ ಇರಬೇಕಾದರೆ ಮನೆ, ಮನಸ್ಸುಗಳು ಚೆನ್ನಾಗಿರಬೇಕು. ಮನೆಗೆ ಬಂದ ಸೊಸೆಯನ್ನು ಅತ್ತೆಯಂದಿರು ಮಗಳಂತೆ, ಸೊಸೆ ಅತ್ತೆಯನ್ನು ತಾಯಿಯಂತೆ ನೋಡಿಕೊಂಡರೆ ಆ ಸಂಸಾರ ಸುಖಿ ಸಂಸಾರವಾಗುತ್ತದೆ’ ಎಂದು ಹೊಳಲ್ಕೆರೆ ಒಂಟಿಕಂಬದ ಮಠದ ಉಸ್ತುವಾರಿ ತಿಪ್ಪೇರುದ್ರ ಸ್ವಾಮೀಜಿ ತಿಳಿಸಿದರು.

14 ಜೋಡಿ ದಾಂಪತ್ಯಕ್ಕೆ ಕಾಲಿಟ್ಟವು. ಜಾನಪದ ಕಲಾವಿದ ಗಂಜಿಗಟ್ಟೆ ಕೃಷ್ಣಮೂರ್ತಿ, ದರ್ಶನ್‌ ದೇವರು, ಜ್ಞಾನಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.