ADVERTISEMENT

ಮೊಳಕಾಲ್ಮುರು: ಮೇವಿಗಾಗಿ ರಸ್ತೆ ಬದಿಯ ಮರಗಳಿಗೆ ಕೊಡಲಿ ಏಟು

ಅರಣ್ಯ ಇಲಾಖೆ ನಿರ್ಲಕ್ಷ್ಯ: ನೆರಳಿಗಾಗಿ ದಾರಿಹೋಕರ ಪರದಾಟ

ಕೊಂಡ್ಲಹಳ್ಳಿ ಜಯಪ್ರಕಾಶ
Published 18 ಫೆಬ್ರುವರಿ 2023, 4:56 IST
Last Updated 18 ಫೆಬ್ರುವರಿ 2023, 4:56 IST
ಮೊಳಕಾಲ್ಮುರು–ಕೋನಸಾಗರ ರಸ್ತೆಯಲ್ಲಿ ರಸ್ತೆ ಬದಿ ಬೇವಿನ ಮರಗಳನ್ನು ಕಡಿದಿರುವುದು.
ಮೊಳಕಾಲ್ಮುರು–ಕೋನಸಾಗರ ರಸ್ತೆಯಲ್ಲಿ ರಸ್ತೆ ಬದಿ ಬೇವಿನ ಮರಗಳನ್ನು ಕಡಿದಿರುವುದು.   

ಮೊಳಕಾಲ್ಮುರು: ಕುರಿ–ಮೇಕೆಗಳಿಗೆ ಮೇವು ಹೊಂದಿಸಲು ಕುರಿಗಾಹಿಗಳು ರಸ್ತೆ ಬದಿ ಸೋಂಪಾಗಿ ಬೆಳೆದಿರುವ ಮರಗಳ ರೆಂಬೆಗಳನ್ನು ಕಡಿಯುತ್ತಿರುವ ಕಾರಣ ತಾಲ್ಲೂಕಿನ ವಿವಿಧೆಡೆ ದಾರಿಹೋಕರಿಗೆ ನೆರಳು ನೀಡಬೇಕಿದ್ದ ಮರಗಳು ಬೋಳಾಗುತ್ತಿವೆ. ಪಟ್ಟಣದಿಂದ ಮರ್ಲಹಳ್ಳಿ- ನೇರ್ಲಹಳ್ಳಿ, ಕೋನಸಾಗರ, ಕೊಂಡ್ಲಹಳ್ಳಿ ಮಾರ್ಗದಲ್ಲಿ ನೂರಾರು ಮರಗಳಗೆ ಕೊಡಲಿ ಏಟು ಬಿದ್ದಿರುವುದು ಕಂಡುಬಂದಿದೆ.

ವಲಯ ಅರಣ್ಯ ಇಲಾಖೆ 15 ವರ್ಷಗಳ ಹಿಂದೆ ಸಸಿಗಳನ್ನು ನೆಟ್ಟು ನೀರುಣಿಸಿ ಮುತುವರ್ಜಿಯಿಂದ ಬೆಳೆಸಿರುವ ಮರಗಳು ಈಗ ರೆಂಬೆ– ಕೊಂಬೆಗಳಿಲ್ಲದೆ ಬೋಳುಬೋಳಾಗಿದ್ದು, ಅವುಗಳನ್ನು ಬೆಳೆಸಲು ಇಲಾಖೆ ವ್ಯಯಿಸಿದ್ದ ಹಣವೂ ವ್ಯರ್ಥವಾಗುತ್ತಿದೆ ಎಂಬುದು ಸ್ಥಳೀಯರ ಆರೋಪ.

ಮೊಳಕಾಲ್ಮುರಿನಿಂದ ಬಿ.ಜಿ. ಕೆರೆ ಸಂಪರ್ಕಿಸುವ ಮಲ್ಪೆ- ಮೊಳಕಾಲ್ಮುರು ರಸ್ತೆಯಲ್ಲಿನ ಎರಡೂ ಬದಿಯಲ್ಲಿ 2004-05ನೇ ಸಾಲಿನಲ್ಲಿ ಹೆಚ್ಚಾಗಿ ಬೇವಿನ ಮರಗಳನ್ನು ಬೆಳೆಸಲಾಗಿದೆ. ಅಲ್ಲಿಂದ ಮೂರು ವರ್ಷ ಇದನ್ನು ವಲಯ ಅರಣ್ಯಾಧಿಕಾರಿ ಕಚೇರಿಯು ನಿರ್ವಹಣೆ ಮಾಡಬೇಕಿದ್ದು, ನಂತರ ಸಾಮಾಜಿಕ ಅರಣ್ಯ ಇಲಾಖೆ ಅಥವಾ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಬೇಕು ಎಂಬ ನಿಯಮ ಇದೆ ಎಂದು ನಿವೃತ್ತ ಅರಣ್ಯ ಅಧಿಕಾರಿ ರಾಮುಲು ಹೇಳಿದರು.

ADVERTISEMENT

ಕುರಿ–ಮೇಕೆಗಳ ಮೇವಿಗಾಗಿ ಮರಗಳ ರೆಂಬೆಗಳನ್ನು ಕಡಿಯುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕುರಿಗಾಹಿಗಳ ಮನವೊಲಿಸಿ, ಎಚ್ಚರಿಕೆ ನೀಡಿ, ಜಾಗೃತಿ ಮೂಡಿಸುವ ಮೂಲಕ ಅದನ್ನು ತಡೆಯಬೇಕಿದೆ.
ಈ ಭಾಗದಲ್ಲಿ ಕುರಿ ಸಾಕಣೆ ಪ್ರಮುಖವಾಗಿರುವ ಕಾರಣ ಇಲಾಖೆಯ ಸಿಬ್ಬಂದಿಯು ನಿಗಾ ವಹಿಸುವ ಅಗತ್ಯವಿದೆ ಎಂದು ಅವರು
ತಿಳಿಸಿದರು.

‘ಈ ಮರಗಳನ್ನು ನಮ್ಮ ಇಲಾಖೆಗೆ ಹಸ್ತಾಂತರಿಸಿಲ್ಲ. ಇದಕ್ಕೂ ನಮಗೂ ಸಂಬಂಧವಿಲ್ಲ. ಇವುಗಳ ನಿರ್ವಹಣೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ವಲಯ ಅರಣ್ಯ ಇಲಾಖೆಯು ಇದನ್ನು ನಮ್ಮ ವ್ಯಾಪ್ತಿಗೆ ಹಸ್ತಾಂತರಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಮರಗಳನ್ನು ಕಡಿದಿರುವ ಬಗ್ಗೆ ಮಾಹಿತಿ ಇಲ್ಲ. ನಾನು ಹೊಸದಾಗಿ ತಾಲ್ಲೂಕಿಗೆ ಬಂದಿದ್ದು, ಮರಗಳನ್ನು ಬೆಳೆಸಿರುವ ಬಗ್ಗೆ, ಹಸ್ತಾಂತರಿಸುವ ಬಗ್ಗೆ ಮಾಹಿತಿ ಇಲ್ಲ’ ಎಂದು ಸಾಮಾಜಿಕ ಅರಣ್ಯಾಧಿಕಾರಿ ಮಸ್ತಾನ್ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು.

ಸಾಮಾಜಿಕ ಹಾಗೂ ವಲಯ ಅರಣ್ಯ ಇಲಾಖೆಗಳ ನಡುವಿನ ಸಂವಹನ ಕೊರತೆಯಿಂದಾಗಿ ಪರಿಸರ ನಾಶವಾಗುತ್ತಿದೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇತ್ತ ಗಮಹರಿಸಿ ರಸ್ತೆ ಬದಿ ಮರಗಳನ್ನು ಉಳಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಜನಸಂಸ್ಥಾನ ವಿರೂಪಾಕ್ಷಪ್ಪ ಒತ್ತಾಯಿಸಿದರು.

ಮರಗಳನ್ನು ಯಾರು ಕಾಪಾಡಬೇಕು ಎಂಬುದನ್ನು ಇಲಾಖೆ ಅಧಿಕಾರಿಗಳು ಕುಳಿತು ಮಾತನಾಡಿಕೊಳ್ಳಲಿ. ನುಣುಚಿಕೊಳ್ಳುವುದನ್ನು ಬಿಟ್ಟು ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು.

-ಜನಸಂಸ್ಥಾನ ವಿರೂಪಾಕ್ಷಪ್ಪ, ಸ್ಥಳೀಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.