ADVERTISEMENT

ಸಂಚಾರ ದಟ್ಟಣೆಗೆ ಸಿಗಲಿದೆ ಪರಿಹಾರ

ಸಂವಾದದಲ್ಲಿ ಎಸ್‌ಪಿ ಡಾ.ಕೆ.ಅರುಣ್‌ ಆಶ್ವಾಸನೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 15:57 IST
Last Updated 14 ನವೆಂಬರ್ 2019, 15:57 IST
ಚಿತ್ರದುರ್ಗದ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕಾದಂಬರಿಕಾರ ಡಾ.ಬಿ.ಎಲ್. ವೇಣು ಅವರಿಗೆ ಸಾಹಿತ್ಯ ಮದಕರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಚಿತ್ರದುರ್ಗದ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕಾದಂಬರಿಕಾರ ಡಾ.ಬಿ.ಎಲ್. ವೇಣು ಅವರಿಗೆ ಸಾಹಿತ್ಯ ಮದಕರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.   

ಚಿತ್ರದುರ್ಗ: ಗಾಂಧಿ ವೃತ್ತ ಸೇರಿ ನಗರದ ಹಲವೆಡೆ ಸಂಚಾರ ದಟ್ಟಣೆ ಹೆಚ್ಚಿದೆ. ಸಂಚಾರ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ತಿಳಿಸಿದರು.

ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿ ನಿರತರ ಸಂಘ ಕನ್ನಡ ರಾಜ್ಯೋತ್ಸವ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲರ ಜಯಂತ್ಯುತ್ಸವದ ಅಂಗವಾಗಿ ಗುರುವಾರ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘ಶಾಲೆ–ಕಾಲೇಜುಗಳ ಸಮೀಪ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಅಕ್ರಮ‌ ಚಟುವಟಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಗಸ್ತು ಹೆಚ್ಚಿಸಲಾಗಿದೆ’ ಎಂದು ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದರು.

ADVERTISEMENT

‘ಆಟೊ, ದ್ವಿಚಕ್ರ ವಾಹನಗಳಿಗೆ ಸೈಲೆನ್ಸರ್ ಪರಿವರ್ತನೆ ಮಾಡಲಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿರುವ ಕುರಿತು ಸಾರ್ವಜನಿಕರು ಗಮನ ಸೆಳೆದಿದ್ದಾರೆ. ಈ ಕುರಿತು ಸಂಚಾರ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು.

ಪೊಲೀಸ್ ಇಲಾಖೆ ವ್ಯಾಪ್ತಿಯ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಯಾವುದೇ ರೀತಿಯ ದೂರುಗಳಿದ್ದರೆ ಸಮೀಪದ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿ. ದೌರ್ಜನ್ಯ, ಹಣ ವಸೂಲಿ, ಲೈಂಗಿಕ ಕಿರುಕುಳದ ಪ್ರಕರಣಗಳ ತನಿಖೆಗೆ ಒತ್ತು ನೀಡಲಾಗುತ್ತದೆ’ ಎಂದರು.

66 ಸಿನಿಮಾಗೆ ಸಂಭಾಷಣೆ:‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟಗೊಂಡ ಕಥೆ ಹಾಗೂ ಕಾದಂಬರಿ ಬರವಣಿಗೆ ಬಗ್ಗೆ ಆಸಕ್ತಿ ಮೂಡಿಸಿದವು ಎಂದು ಕಾದಂಬರಿಕಾರ ಬಿ.ಎಲ್. ವೇಣು ಹೇಳಿದರು.

‘ವಿಷ್ಣುವರ್ಧನ್, ಪುಟ್ಟಣ್ಣ ಕಣಗಾಲ್, ಸಿದ್ಧಲಿಂಗಯ್ಯ, ರಾಜೇಂದ್ರ ಸಿಂಗ್ ಬಾಬು ಸೇರಿ ಹಲವರ ಜತೆ ಕೆಲಸ ಮಾಡುವ ಅವಕಾಶ ಒದಗಿಬಂದಿತು. 66 ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದೇನೆ. ಬೆಂಗಳೂರಿಗೆ ಬಂದು ನೆಲೆಸುವಂತೆ ವಿಷ್ಣುವರ್ಧನ್‌ ಸಾಕಷ್ಟು ಬಾರಿ ಹೇಳಿದ್ದರು. ಆದರೆ, ಚಿತ್ರದುರ್ಗ ಬಿಟ್ಟು ಹೋಗಲಿಲ್ಲ. ಅಲ್ಲಿಗೆ ಹೋಗಿದ್ದರೆ ಕಮರ್ಷಿಯಲ್ ಕಥೆಗಾರ ಆಗುತ್ತಿದ್ದೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಕಾದಂಬರಿಕಾರ ಡಾ.ಬಿ.ಎಲ್. ವೇಣು ಅವರಿಗೆ ಸಾಹಿತ್ಯ ಮದಕರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಆರ್ಯವೈಶ್ಯ ಸಂಘದ ಅಧ್ಯಕ್ಷ ಕಾಶಿ ವಿಶ್ವನಾಥ ಶ್ರೇಷ್ಠಿ, ಪಿ.ಎನ್.ಮೋಹನಕುಮಾರ್ ಗುಪ್ತ, ಆರ್ಯವೈಶ್ಯ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಸುಜಾತಾ ಪ್ರಾಣೇಶ್, ವಾಸವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ರಾಮಲಿಂಗ ಶ್ರೇಷ್ಠಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.