ADVERTISEMENT

ಕಪ್ಪುಚುಕ್ಕೆ ಇಲ್ಲದ ಆಡಳಿತವೇ ಮಾದರಿ: ಜಿ.ಎಚ್‌.ತಿಪ್ಪಾರೆಡ್ಡಿ

ಡಾ.ಬಾಬು ಜಗಜೀವನ್‌ರಾಮ್‌ ಜಯಂತಿಯಲ್ಲಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 14:18 IST
Last Updated 5 ಏಪ್ರಿಲ್ 2022, 14:18 IST
ಚಿತ್ರದುರ್ಗದಲ್ಲಿ ಡಾ.ಬಾಬು ಜಗಜೀವನ್‌ರಾಮ್‌ ಅವರ ಭಾವಚಿತ್ರದ ಮೆರವಣಿಗೆಯನ್ನು ಮಂಗಳವಾರ ಅದ್ದೂರಿಯಾಗಿ ಮಾಡಲಾಯಿತು.
ಚಿತ್ರದುರ್ಗದಲ್ಲಿ ಡಾ.ಬಾಬು ಜಗಜೀವನ್‌ರಾಮ್‌ ಅವರ ಭಾವಚಿತ್ರದ ಮೆರವಣಿಗೆಯನ್ನು ಮಂಗಳವಾರ ಅದ್ದೂರಿಯಾಗಿ ಮಾಡಲಾಯಿತು.   

ಚಿತ್ರದುರ್ಗ: ದೇಶದ ಉಪಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಡಾ.ಬಾಬು ಜಗಜೀವನ್‌ರಾಮ್‌ ಅವರು ಕಪ್ಪುಚುಕ್ಕೆ ಇಲ್ಲದ ಆಡಳಿತ ನೀಡಿದರು. ಅವರ ಕಾರ್ಯವೈಖರಿ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಸಮಾಜಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಬಾಬೂಜಿ ಅವರ 115ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶೋಷಿತ ಸಮುದಾಯದ ದುರ್ಬಲ ವರ್ಗಗಳ ನೇತಾರರಾಗಿದ್ದ ಬಾಬೂಜಿ ಅವರು ಅಸ್ಪೃಶ್ಯಯತೆಯನ್ನು ಕಿತ್ತೊಗೆಯುವ ಪಣತೊಟ್ಟಿದ್ದರು. ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಜೀವನ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಂಡರು. ಹೋರಾಟ ಹಾಗೂ ಆಡಳಿತ ಎರಡರಲ್ಲಿಯೂ ಯಶಸ್ವಿಯಾದರು’ ಎಂದು ಹೇಳಿದರು.

ADVERTISEMENT

‘ಬಾಬೂಜಿ ಅವರು ಕೃಷಿ, ರೈಲ್ವೆ, ಕಾರ್ಮಿಕ ಖಾತೆಯನ್ನು ನಿಭಾಯಿಸಿದ್ದಾರೆ. ಕೃಷಿ ಸಚಿವರಾಗಿದ್ದ ಸಂದರ್ಭದಲ್ಲಿ ಮಾಡಿದ ಹಸಿರು ಕ್ರಾಂತಿಯಿಂದ ಆಹಾರ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಗಲು ಸಾಧ್ಯವಾಯಿತು. ಹಲವು ರೀತಿಯ ಉತ್ಪನ್ನಗಳು ವಿದೇಶಕ್ಕೆ ರಫ್ತು ಆಗುತ್ತಿರುವುದರ ಹಿಂದೆ ಬಾಬೂಜಿ ಅವರ ಪರಿಶ್ರಮವಿದೆ. ಅವರ ಆಲೋಚನೆಯ ಫಲವಾಗಿ ದೇಶದ ಅಭಿವೃದ್ಧಿ ಸಾಧ್ಯವಾಗಿದೆ’ ಎಂದರು.

ಸಾಮಾಜಿಕ ಕಾರ್ಯಕರ್ತ ಹೊಳಿಯಪ್ಪ ಸಾಕ್ಯ ಅವರು ಡಾ.ಬಾಬು ಜಗಜೀವನ್‍ರಾಮ್ ಕುರಿತು ಉಪನ್ಯಾಸ ನೀಡಿದರು. ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಮತಾ, ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಮಂಜುಳ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ದಲಿತ ಮುಖಂಡರಾದ ಕುಮಾರ್, ರಾಜಣ್ಣ, ಮಂಜುನಾಥ್, ದುರುಗಪ್ಪ, ಮುರಾರ್ಜಿ, ತಿಪ್ಪೇಸ್ವಾಮಿ ಇದ್ದರು. ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಆದಿಜಾಂಬವ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.

ಬಾಬೂಜಿ ಬಾಲ್ಯದಿಂದಲೇ ನೋವು ಅನುಭವಿಸಿದರು. ಶೋಷಣೆಗೆ ಗುರಿಯಾದರೂ ಛಲಬಿಡದೆ ಶಿಕ್ಷಣ ಪೂರೈಸಿದರು. ರಾಜಕೀಯ ಪ್ರವೇಶಿಸಿ ಸಾಮಾಜಿಕ, ಆರ್ಥಿಕ, ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದರು.

ಕವಿತಾ ಎಸ್. ಮನ್ನಿಕೇರಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.