ADVERTISEMENT

ಸವಾಲುಗಳ ದಾಟಿ ಮುಕ್ತಾಯದ ಗಡಿಗೆ ಸಮೀಕ್ಷೆ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಶೇ 92.88 ಸಾಧನೆ; ರಾಜ್ಯಕ್ಕೆ 9ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 3:09 IST
Last Updated 14 ಅಕ್ಟೋಬರ್ 2025, 3:09 IST
ಚಳ್ಳಕೆರೆ ತಾಲ್ಲೂಕಿನ ಮಲ್ಲೂರಹಳ್ಳಿಯ ಕಪಿಲೆ ಪ್ರದೇಶದಲ್ಲಿ ಸಮೀಕ್ಷಕರು
ಚಳ್ಳಕೆರೆ ತಾಲ್ಲೂಕಿನ ಮಲ್ಲೂರಹಳ್ಳಿಯ ಕಪಿಲೆ ಪ್ರದೇಶದಲ್ಲಿ ಸಮೀಕ್ಷಕರು   

ಚಿತ್ರದುರ್ಗ: ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಜಿಲ್ಲೆಯಲ್ಲಿ ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದೆ. ಪ್ರಾರಂಭದಲ್ಲಿ ಎದುರಾದ ತಾಂತ್ರಿಕ ಸಮಸ್ಯೆಗಳು, ‘ವಿಶಿಷ್ಟ ಮನೆ ಸಂಖ್ಯೆ’ಯ (ಯುಎಚ್‌ಐಡಿ) ಹುಡುಕುತ್ತ ಮನೆ ಗುರುತಿಸುವಲ್ಲಿ ಎದುರಾದ ಸವಾಲುಗಳನ್ನು ದಾಟಿ ಸಮೀಕ್ಷಕರು ಕಾರ್ಯ ಪೂರ್ಣಗೊಳಿಸಿದ್ದಾರೆ.

ಸಮೀಕ್ಷೆ ಮೊದಲ ಮೂರು ದಿನ ಸಮೀಕ್ಷಕ, ಮೇಲ್ವಿಚಾರಕ, ಮಾಸ್ಟರ್‌ ಟ್ರೇನರ್‌ಗಳಿಗೆ ನಿಗದಿಯಾಗಿದ್ದ ವಾರ್ಡ್‌ ಬಿಟ್ಟು ಮೊಬೈಲ್‌ ಆ್ಯಪ್‌ ಬೇರೆ ಪ್ರದೇಶ ತೋರಿಸುತ್ತಿದ್ದ ಕಾರಣ ಸಮೀಕ್ಷೆಗೆ ಅಡ್ಡಿಯಾಗಿತ್ತು. ಇದರಿಂದ ಸಮೀಕ್ಷಕರು ಹೈರಾಣಾಗಿದ್ದರು.

ತಾಂತ್ರಿಕ ಸಮಸ್ಯೆಯ ನಡುವೆಯೂ ಮೊದಲ 2 ದಿನಗಳಲ್ಲಿ ಜಿಲ್ಲೆಯಾದ್ಯಂತ 5,000 ಕುಟುಂಬಗಳ ಸಮೀಕ್ಷೆ ನಡೆದಿತ್ತು. ಹಲವೆಡೆ ಲಾಗಿನ್‌ ಸಮಸ್ಯೆ ಕಾಡಿದ ಕಾರಣ ಸಮೀಕ್ಷಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು.

ADVERTISEMENT

ಮನೆಗಳಿಗೆ ಅಂಟಿಸಿದ್ದ ಯುಎಚ್‌ಐಡಿ ಸಂಖ್ಯೆ ಒಂದು ಮನೆಯಿಂದ ಇನ್ನೊಂದು ಮನೆಗೆ ಎಲ್ಲೆಲ್ಲೋ ತೋರಿಸುತ್ತಿದ್ದು ಸಮೀಕ್ಷೆಗೆ ಅಡ್ಡಿಯಾಗಿತ್ತು. ಬೆಂಗಳೂರಿನಲ್ಲಿರುವ ತಂತ್ರಜ್ಞರ ತಂಡ ಮೊಬೈಲ್‌ ಆ್ಯಪ್‌ ಸಮಸ್ಯೆಗೆ ಪರಿಹಾರ ನೀಡಿದ ಬಳಿಕ ವೇಗ ಪಡೆಯಿತು.

ಜಿಲ್ಲೆಯಲ್ಲಿ ಅಂದಾಜು 4.5 ಲಕ್ಷ ಮನೆಗಳಿಗೆ ‘ವಿಶಿಷ್ಟ ಮನೆ ಸಂಖ್ಯೆ’ಯ ಚೀಟಿ ಅಂಟಿಸಲಾಗಿದೆ. ವಿದ್ಯುತ್‌ ಮೀಟರ್‌ನ ಆರ್‌ಆರ್‌ ಸಂಖ್ಯೆ ಆಧರಿಸಿ ‘ಬೆಸ್ಕಾಂ’ ಸಿಬ್ಬಂದಿ ಯುಎಚ್‌ಐಡಿ ಚೀಟಿಗಳನ್ನು ಅಂಟಿಸಿದ್ದರು. ಇದರ ಆಧಾರದ ಮೇರೆಗೆ ಸಮೀಕ್ಷಕರಿಗೆ ಮನೆಗಳನ್ನು ಹಂಚಿಕೆ ಮಾಡಲಾಗಿತ್ತು. ‘ಆ್ಯಪ್‌’ನಲ್ಲಿ ಎದುರಾದ ತಾಂತ್ರಿಕ ಸಮಸ್ಯೆಯಿಂದ ಮರು ಹಂಚಿಕೆ ಮಾಡಿ ನಕ್ಷೆಗಳನ್ನು ಬದಲಿಸಲಾಗಿತ್ತು.

ಜಿಲ್ಲೆಯಲ್ಲಿ 4,54,736 ಮನೆಗಳು, 17,41,480 ಜನಸಂಖ್ಯೆ ಗುರುತಿಸಲಾಗಿದೆ. ಅದರಲ್ಲಿ 4,41,707 ಮನೆ, 16,17,446 ಜನರ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಈ ಮೂಲಕ ಶೇ 92.88ರಷ್ಟು ಸಾಧನೆಯಾಗಿದೆ. ರಾಜ್ಯದಲ್ಲಿ ಮನೆಯ ದತ್ತಾಂಶದಲ್ಲಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಜನಸಂಖ್ಯೆ ಸಮೀಕ್ಷೆಯಲ್ಲಿ 9ನೇ ಸ್ಥಾನ (ಅ.13 ರವರೆಗೆ)ದಲ್ಲಿದೆ. 1,24,034 ಜನಸಂಖ್ಯೆ, 13,029 ಮನೆಗಳು ಬಾಕಿ ಉಳಿದಿವೆ.

ಹಿರಿಯೂರು ತಾಲೂಕಿನಲ್ಲಿ ಮೊದಲ ದಿನ 3,000 ಕುಟುಂಬಗಳ ಗುರಿ ಇತ್ತು. ಆದರೆ ಕೇವಲ 440 ಮನೆಗಳ ಸಮೀಕ್ಷಾ ಕಾರ್ಯ ನಡೆದಿತ್ತು. ಹೊಸದುರ್ಗ ತಾಲ್ಲೂಕಿನಲ್ಲಿ ಕೇವಲ 100 ಮನೆಗಳ ಸಮೀಕ್ಷೆ ಕಾರ್ಯ ಆಗಿತ್ತು. ಸಮೀಕ್ಷೆಗೆ ಎದುರಾಗಿದ್ದ ತಾಂತ್ರಿಕ ಸಮಸ್ಯೆ ಬಗೆಹರಿಸಿದ ಬೆನ್ನಲ್ಲೇ ಸಮೀಕ್ಷಾ ಕಾರ್ಯದ ದಿನ ವಿಸ್ತರಣೆ ಮಾಡಿದ್ದರಿಂದ ಸಮೀಕ್ಷಕರು ನಿಟ್ಟಿಸಿರು ಬಿಟ್ಟರು.

ಗ್ರಾಮೀಣ ಪ್ರದೇಶವೇ ಹೆಚ್ಚಾಗಿರುವ ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ತಾಲ್ಲೂಕುಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಬಿಟ್ಟುಹೋಗಿರುವ ಮನೆಗಳನ್ನು ಗುರುತಿಸಿ ಸಮೀಕ್ಷೆಗೆ ಒಳಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಎರಡು ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳುವ ಭರವಸೆ ಮೂಡಿದೆ. ಸೆ. 22ರಿಂದ ಪ್ರಾರಂಭವಾಗಿದ್ದ ಸಮೀಕ್ಷೆ ಅ. 18ರವರೆಗೆ ನಡೆಯಲಿದೆ. ಒಟ್ಟು 3,768 ಗಣತಿದಾರರು, 376 ಮೇಲ್ವಿಚಾರಕರು, 92 ಮಾಸ್ಟರ್‌ ಟ್ರೇನರ್‌ಗಳು ಕಾರ್ಯ ನಿರ್ವಹಿಸಿದ್ದಾರೆ.

‘ಸಮೀಕ್ಷಾ ಕಾರ್ಯಕ್ಕೆ ಜಿಲ್ಲೆಯ 6 ತಾಲ್ಲೂಕುಗಳಲ್ಲಿ ತೆರೆಯಲಾಗಿದ್ದ ಸಹಾಯವಾಣಿಗೆ ಪ್ರಾರಂಭದಲ್ಲಿ ದಿನಕ್ಕೆ ಹತ್ತರಿಂದ ಹದಿನೈದು ಕರೆಗಳು ಬರುತ್ತಿದ್ದವು. ಸಮಸ್ಯೆಗಳು ಬಗೆಹರಿದ ಬಳಿಕ ಕರೆಗಳ ಸಂಖ್ಯೆ ಒಂದು, ಎರಡಕ್ಕೆ ಇಳಿದಿದೆ. ಸಮೀಕ್ಷಕರು ಬಿಟ್ಟು ಹೋದ, ಬಾಗಿಲು ಹಾಕಿದ ಮನೆಗಳಿಗೆ ಪುನಃ ತೆರಳಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿದ್ದಾರೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಲತಾ ತಿಳಿಸಿದರು.

ಜಿಲ್ಲೆಯಲ್ಲಿ ಸಮೀಕ್ಷೆ ಬಹುತೇಕ ಕೊನೆ ಹಂತಕ್ಕೆ ತಲುಪಿದೆ. ಸಮೀಕ್ಷಕರಿಗೆ ಬಹುತೇಕ ಮಾಹಿತಿ ನೀಡಿರುವ ಕಾರಣ ಸ್ವಯಂ ಪ್ರೇರಿತವಾಗಿ ಆನ್‌ಲೈನ್‌ ಸಮೀಕ್ಷೆಗೆ ಮುಂದಾಗಿಲ್ಲ. ಒಂದೆರಡು ದಿನಗಳಲ್ಲಿ ನೂರರಷ್ಟು ಸಾಧನೆಯಾಗಲಿದೆ.
ಪುಷ್ಪಲತಾ, ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.