ADVERTISEMENT

ಚಿಕ್ಕಜಾಜೂರು: ದುರಸ್ತಿಯಾಗದ ರಸ್ತೆ; ಗಾಯಾಳು ಸಾವು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 6:19 IST
Last Updated 6 ಅಕ್ಟೋಬರ್ 2025, 6:19 IST
ಜಿ.ಆರ್‌. ವಿರೂಪಾಕ್ಷಪ್ಪ
ಜಿ.ಆರ್‌. ವಿರೂಪಾಕ್ಷಪ್ಪ   

ಚಿಕ್ಕಜಾಜೂರು: ತಗ್ಗು ಗುಂಡಿಗಳಿಂದ ತುಂಬಿದ್ದ ರಸ್ತೆಯಲ್ಲಿ ಸಂಚರಿಸುವಾಗ ಆಯತಪ್ಪಿ ಬಿದ್ದು, ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಭಾನುವಾರ ಸಂಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಚಿಕ್ಕಜಾಜೂರಿನ ವಿನಾಯಕ ಮೆಡಿಕಲ್‌ ಸ್ಟೋರ್‌ನ ಮಾಲೀಕ  ಜಿ.ಆರ್‌. ವಿರೂಪಾಕ್ಷಪ್ಪ (74) ಮೃತರು.

ಇವರು ಸೆ. 26ರಂದು ರಾತ್ರಿ 8 ಗಂಟೆ ಸಮಯದಲ್ಲಿ ಮೆಡಿಕಲ್‌ ಸ್ಟೋರ್‌ ಬಾಗಿಲು ಹಾಕಿ, ಚಿಕ್ಕಜಾಜೂರಿನ ಸಾಯಿ ಸಿದ್ಧೇಶ್ವರ ಎನ್‌ಕ್ಲೇವ್‌ನಲ್ಲಿರುವ ಮನೆಗೆ ಮೊಪೆಡ್‌ನಲ್ಲಿ ಹಿಂತಿರುಗುವಾಗ ರಸ್ತೆಯ ಗುಂಡಿಯಲ್ಲಿ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು. ತಕ್ಷಣ ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. 

ADVERTISEMENT

ಈ ಕುರಿತು ಚಿಕ್ಕಜಾಜೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಸಂಜೆ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸಮೀಪದ ಬಾಣಗೆರೆ ಗ್ರಾಮದ ದಿವಂಗತ ಗೌಡ್ರ ರಾಮಚಂದ್ರಪ್ಪ ಅವರ ಪುತ್ರರಾದ ವಿರೂಪಾಕ್ಷಪ್ಪ ಅವರು ಚಿಕ್ಕಜಾಜೂರಿನಲ್ಲಿ 4 ದಶಕದಿಂದ ಮೆಡಿಕಲ್‌ ಸ್ಟೋರ್‌ ನಡೆಸುತ್ತಿದ್ದರು. ಮೃತರಿಗೆ ಪತ್ನಿ ಇದ್ದು, ಅಂತ್ಯಕ್ರಿಯೆ ಸ್ವಗ್ರಾಮ ಬಾಣಗೆರೆಯಲ್ಲಿ ಸೋಮವಾರ ಸಂಜೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಗ್ರಾಮಸ್ಥರ ಆಕ್ರೋಶ: ರಸ್ತೆಗಳ ಗುಂಡಿಯಿಂದಾಗಿ ಆಗಸ್ಟ್‌ನಲ್ಲಿ ಅಪಘಾತದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಗಂಗಾಧರ್‌ ಗಾಯಗೊಂಡು ಮೃತಪಟ್ಟಿದ್ದರು. ಈಗ ಮತ್ತೊಂದು ಅಪಘಾತದಲ್ಲಿ ಮತ್ತೊಬ್ಬರು ಮೃತಪಟ್ಟಿದ್ದಾರೆ.  ಇನ್ನೂ ಎಷ್ಟು ಜನರ ಪ್ರಾಣ ಹೋದ ನಂತರ, ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಳ್ಳುವುದೋ ಎಂದು ಗ್ರಾಮಸ್ಥರು ಹಾಗೂ ವಾಹನ ಚಾಲಕರು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.