ADVERTISEMENT

ಬಾಗೂರು ಕೋಡಿಕಲ್ಲೇಶ್ವರ ದೇಗುಲ ಜಲಾವೃತ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 6:06 IST
Last Updated 21 ನವೆಂಬರ್ 2021, 6:06 IST
ಹೊಸದುರ್ಗ ತಾಲ್ಲೂಕಿನ ಐತಿಹಾಸಿಕ ಬಾಗೂರು ಕೋಡಿಕಲ್ಲೇಶ್ವರ ದೇಗುಲ ಜಲಾವೃತವಾಗಿದೆ (ಎಡಚಿತ್ರ). ಮಧುರೆ ಕೆರೆ ಕೋಡಿ ಬಿದ್ದು, ಜಮೀನಿಗೆ ಹರಿದ ನೀರಿನಲ್ಲಿ ಜನರು ಶನಿವಾರ ಮೀನು ಹಿಡಿದರು
ಹೊಸದುರ್ಗ ತಾಲ್ಲೂಕಿನ ಐತಿಹಾಸಿಕ ಬಾಗೂರು ಕೋಡಿಕಲ್ಲೇಶ್ವರ ದೇಗುಲ ಜಲಾವೃತವಾಗಿದೆ (ಎಡಚಿತ್ರ). ಮಧುರೆ ಕೆರೆ ಕೋಡಿ ಬಿದ್ದು, ಜಮೀನಿಗೆ ಹರಿದ ನೀರಿನಲ್ಲಿ ಜನರು ಶನಿವಾರ ಮೀನು ಹಿಡಿದರು   

ಹೊಸದುರ್ಗ: ತಾಲ್ಲೂಕಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಶನಿವಾರವೂ ಪಟ್ಟಣ ಸೇರಿ ಹಲವೆಡೆ ಮಳೆ ಸುರಿಯಿತು.

ಐತಿಹಾಸಿಕ ಬಾಗೂರು ಮೂಡಲಕೆರೆ ಕೋಡಿ ಬಿದ್ದಿದ್ದು, ಕೋಡಿಕಲ್ಲೇಶ್ವರ ದೇಗುಲ ಜಲಾವೃತವಾಗಿದೆ. ನೂರಾರು ಎಕರೆ ಬೆಳೆಗಳಿಗೆ ಹಾನಿಯಾಗಿದೆ.

ನಿರಂತರ ಮಳೆಯಿಂದಾಗಿ ಎಲ್ಲೆಡೆಯ ಬ್ಯಾರೇಜ್‌, ಚೆಕ್‌ಡ್ಯಾಂಗಳು ಭರ್ತಿಯಾಗಿವೆ. ಬಹುತೇಕ ಕೆರೆಗಳು ಕೋಡಿ ಬಿದ್ದಿವೆ. ಕೆಲವೆಡೆ ಕಟ್ಟೆಗಳು ಒಡೆದಿದ್ದು, ಹಲವೆಡೆ ರೈತರ ಜಮೀನುಗಳಿಗೆ ನೀರು ನುಗ್ಗಿದೆ. ಇದರಿಂದ ರಾಗಿ, ಮೆಕ್ಕೆಜೋಳ, ಹತ್ತಿ, ನವಣೆ, ಸಾಮೆ, ಕಡಲೆ ಸೇರಿ ನೂರಾರು ಎಕರೆ ಪ್ರದೇಶದಲ್ಲಿದ್ದ ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ. ಕಟಾವಿಗೆ ಬಂದಿದ್ದ ಬೆಳೆಗಳು ಮೊಳಕೆಯೊಡೆದು ಜಮೀನಿನಲ್ಲಿಯೇ ಕೊಳೆಯುತ್ತಿದೆ. ಇದರಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ಕಷ್ಟಪಟ್ಟು ಬೆಳೆದಿದ್ದ ರೈತರಿಗೆ ಬೆಳೆ ಬೆಳೆಯಲು ಮಾಡಿದ್ದ ಸಾಲ ಹೇಗೆ ತೀರಿಸಬೇಕು ಎಂಬ ಚಿಂತೆ ಕಾಡುತ್ತಿದೆ.

ADVERTISEMENT

ತಗ್ಗುಪ್ರದೇಶದ ತೆಂಗು, ಅಡಿಕೆ, ಬಾಳೆ ತೋಟಗಳಲ್ಲಿಯೂ ನೀರು ನಿಂತಿದೆ. ಚಿಕ್ಕ ಅಡಿಕೆ, ಬಾಳೆ ಸಸಿಗಳು ಕೊಳೆಯುವ ಭೀತಿ ಎದುರಾಗಿದೆ. ಮಧುರೆ ಕೆರೆ ಶುಕ್ರವಾರ ಕೋಡಿ ಬಿದ್ದಿದೆ. ನೀರು ಬಾಗೂರು ಕೆರೆಗೆ ನುಗ್ಗಿದೆ. ಇದರಿಂದ ಬಾಗೂರು ಕೆರೆಯಲ್ಲಿದ್ದ ಸಾಕಷ್ಟು ಮೀನು ಮಧುರೆ ಕೆರೆಯತ್ತ ಹತ್ತಿದ್ದು, ಮಧುರೆ ಸೇರಿ ಸುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಜನರು ತಂಡೋಪತಂಡವಾಗಿ ಕೆರೆಕೋಡಿ, ಜಮೀನುಗಳಲ್ಲಿ ಬಲೆ ಬೀಸಿ ಮೀನು ಶಿಕಾರಿ ಮಾಡಿದರು.

ಅಡಿಕೆ, ತೆಂಗು, ಬಾಳೆ, ರಾಗಿ, ಮೆಕ್ಕೆಜೋಳ, ಹತ್ತಿ ಸೇರಿ ಇನ್ನಿತರ ಬೆಳೆಗಳಿದ್ದ ಜಮೀನುಗಳಿಗೂ ಮೊಣಕಾಲುದ್ದ ನೀರು ನುಗ್ಗಿದ್ದರಿಂದ ಜಮೀನುಗಳಿಗೂ ಮೀನು ಬಂದಿತು. ಜಮೀನುಗಳಲ್ಲಿಯೂ ಮೀನು ಪ್ರಿಯರು ದಿನವಿಡೀ 25 ಕ್ವಿಂಟಲ್‌ಗೂ ಅಧಿಕ ಮೀನು ಹಿಡಿದ್ದಾರೆ. ಮೀನು ಹಿಡಿಯಲು ಚನ್ನಗಿರಿ, ದೇವರಹಳ್ಳಿ, ಅಜ್ಜಂಪುರ ಭಾಗಗಳಿಂದಲೂ ಸಾಕಷ್ಟು ಜನರು ಬಂದಿದ್ದರು ಎಂದು ಮಧುರೆ ಗ್ರಾಮದ ಮುಖಂಡ ಆರ್‌. ನಟರಾಜು ತಿಳಿಸಿದರು.

ಬಹುತೇಕ ಹಳ್ಳಗಳು ಭರ್ತಿಯಾಗಿ ಹರಿಯುತ್ತಿವೆ. ನದಿಯಲ್ಲಿ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಬರಿದಾಗಿದ್ದ ಕೊಳವೆಬಾವಿಯಲ್ಲಿಯೂ ನೀರು ಹೆಚ್ಚಾಗಿದೆ. ಬುಕ್ಕಸಾಗರ, ಮಾಡದಕೆರೆ, ದೇವಪುರ ಕೋಡಿಹಳ್ಳಿ ಲಂಬಾಣಿಹಟ್ಟಿ ಸೇರಿ ಇನ್ನಿತರ ಗ್ರಾಮಗಳ ಕೆಲವು ಮನೆಗಳಲ್ಲಿ ಅಂತರ್ಜಲ ಬರುತ್ತಿದೆ. ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಅವರು ಪ್ರವಾಹ ಪೀಡಿತ ಜಮೀನು ಹಾಗೂ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.

31 ಮನೆಗಳಿಗೆ ಹಾನಿ: ತಾಲ್ಲೂಕಿನ ಹರಿಯನಹಳ್ಳಿ ಕರಿಯಪ್ಪ, ಕೆರೆಹೊಸಹಳ್ಳಿಶಾರದಮ್ಮ, ಬೆಲಗೂರು ಜಯಮ್ಮ, ಗೀತಾ, ಕರಿಯಮ್ಮ, ಎಸ್‌.ನೇರಲಕೆರೆ ಬೇಲೂರಪ್ಪ, ಶಿವಗಂಗಮ್ಮ, ಎಸ್‌.ಎಸ್‌.ಪಾಳ್ಯ ಮಹಮದ್‌ ಅಜಾದ್‌, ಸೈಯದ್‌ ನಷೀರ್‌, ಮಕ್ಬೂಲ್‌, ಶ್ರೀರಾಂಪುರ ನಾಗರತ್ನಮ್ಮ, ಕೃಷ್ಣಮೂರ್ತಿ, ಪೂಜಾರ್‌ನಿಂಗರಾಜು, ಕೈನಡು ಹನುಮಂತಪ್ಪ, ಗಿರಿಜಮ್ಮ, ಗೊಲ್ಲರಹಳ್ಳಿ ಜಯಬಾಯಿ, ತಂಡಗ ಮಂಜುನಾಥ, ಲಕ್ಷ್ಮಮ್ಮ, ರಾಮಲಕ್ಷ್ಮಮ್ಮ, ಗರಗ ಮೈಲಾರಪ್ಪ, ಗೋವಿಂದಪ್ಪ, ಹರೇನಹಳ್ಳಿ ತಿಮ್ಮಪ್ಪ, ಈರಮ್ಮ, ಕಾಳನಾಯ್ಕನಹಟ್ಟಿ ಗಂಗೀಬಾಯಿ, ಕುಮಾರಮ್ಮ, ಮತ್ತೋಡು ಜಯಮ್ಮ, ಹನುಮಂತಪ್ಪ, ಕಪ್ಪನಾಯಕನಹಳ್ಳಿ ವನಿತಾ, ಬುಕ್ಕಸಾಗರ ಲಕ್ಷ್ಮಮ್ಮ, ಮಧುರೆ ಹನುಮಕ್ಕ ಅವರ ಮನೆಗಳಿಗೆ ಹಾನಿಯಾಗಿದ್ದು, ₹ 13.70 ಲಕ್ಷ ನಷ್ಟ ಉಂಟಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.