ADVERTISEMENT

ಬ್ಯಾಂಕ್ ಜನಾರ್ದನ್ ಜನ್ಮಭೂಮಿ ಹೊಳಲ್ಕೆರೆ

ಪಟ್ಟಣದಲ್ಲಿ ಬಾಲ್ಯದ ನೆನಪುಗಳನ್ನು ಬಿಟ್ಟುಹೋದ ಹಾಸ್ಯನಟ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 15:37 IST
Last Updated 14 ಏಪ್ರಿಲ್ 2025, 15:37 IST
ಹೊಳಲ್ಕೆರೆಯಲ್ಲಿ ಸೋಮವಾರ ನಾಗರಿಕರು ಬ್ಯಾಂಕ್ ಜನಾರ್ದನ್‌ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು. ಪುರಸಭೆ ಅಧ್ಯಕ್ಷ ವಿಜಯ ಸಿಂಹ ಖಾಟ್ರೋತ್, ಸದಸ್ಯ ಕೆ.ಸಿ.ರಮೇಶ್, ರಾಘವೇಂದ್ರ, ಜಗದೀಶ್ ನಾಡಿಗ್, ವೇದಮೂರ್ತಿ, ಮಂಜು, ಚಿತ್ತಪ್ಪ ಭಾಗವಹಿಸಿದ್ದರು
ಹೊಳಲ್ಕೆರೆಯಲ್ಲಿ ಸೋಮವಾರ ನಾಗರಿಕರು ಬ್ಯಾಂಕ್ ಜನಾರ್ದನ್‌ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು. ಪುರಸಭೆ ಅಧ್ಯಕ್ಷ ವಿಜಯ ಸಿಂಹ ಖಾಟ್ರೋತ್, ಸದಸ್ಯ ಕೆ.ಸಿ.ರಮೇಶ್, ರಾಘವೇಂದ್ರ, ಜಗದೀಶ್ ನಾಡಿಗ್, ವೇದಮೂರ್ತಿ, ಮಂಜು, ಚಿತ್ತಪ್ಪ ಭಾಗವಹಿಸಿದ್ದರು   

ಹೊಳಲ್ಕೆರೆ: ನಟ ಬ್ಯಾಂಕ್ ಜನಾರ್ದನ್‌ 1949ರಲ್ಲಿ ಪಟ್ಟಣದ ಜೆಸಿ ಬಡಾವಣೆಯಲ್ಲಿ ಜನಿಸಿದ್ದರು.

‘ಜನಾರ್ದನ್‌ ತಂದೆ ಪಟ್ಟಣದ ಲೋಕೋಪಯೋಗಿ ಇಲಾಖೆಯಲ್ಲಿ ಜೀಪ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಆಗ ಬಡನದಲ್ಲಿದ್ದ ಜನಾರ್ದನ್‌ ಕುಟುಂಬ ಪಟ್ಟಣದ ಗುಡಿಸಲೊಂದರಲ್ಲಿ ವಾಸ ಮಾಡುತ್ತಿತ್ತು. ಜನಾರ್ದನ್‌ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಎಂಎಂ ಸರ್ಕಾರಿ ಶಾಲೆಯಲ್ಲಿ ಎಸ್ಎಸ್ಎಲ್‌ಸಿ ಮುಗಿಸಿದರು. ತಂದೆ ನಿವೃತ್ತರಾದ ನಂತರ ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಅವರ ತಾಯಿ ಕೂಲಿ ಹೋಗಿ ಮಕ್ಕಳನ್ನು ಸಾಕಿದರು. ಜನಾರ್ದನ್‌ ಕೂಡ ತಾಯಿಯೊಂದಿಗೆ ಕೂಲಿ ಹೋಗುತ್ತಿದ್ದರು. ಸ್ಟುಡಿಯೊ ರಾಜಣ್ಣ, ಹನುಮಂತಪ್ಪ ಹಾಗೂ ನಾನು ಅವರ ಆತ್ಮೀಯರಾಗಿದ್ದೆವು’ ಎಂದು ಪಟ್ಟಣದ ಉದಯ್ ಶಂಕರ್ ಹೇಳುತ್ತಾರೆ.

‘ಜನಾರ್ದನ್‌ ಪಟ್ಟಣದ ವೈದ್ಯ ಉದಯ ಶೆಟ್ಟಿ ಎಂಬುವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಎಸ್ಎಸ್ಎಲ್‌ಸಿ ಮುಗಿಸಿದ್ದ ಜನಾರ್ದನ್‌ ಅವರನ್ನು ಡಾ.ಉದಯ ಶೆಟ್ಟಿ ಪಟ್ಟಣದ ಜಯಲಕ್ಷ್ಮಿ ಬ್ಯಾಂಕ್‌ನಲ್ಲಿ ಅಟೆಂಡರ್ ಕೆಲಸಕ್ಕೆ ಸೇರಿಸಿದರು. ನಂತರ ಈ ಬ್ಯಾಂಕ್ ವಿಜಯಾ ಬ್ಯಾಂಕ್ ಜತೆ ವಿಲೀನವಾಯಿತು. ಚಿಕ್ಕಂದಿನಿಂದಲೇ ನಟನೆಯ ಬಗ್ಗೆ ಆಸಕ್ತಿ ಹೊಂದಿದ್ದ ಜನಾರ್ದನ್‌ ಯುವಕರ ಗುಂಪು ಕಟ್ಟಿಕೊಂಡು ನಾಟಕ ಆಡುತ್ತಿದ್ದರು. ಮೊದಲು ಗಣೇಶನ ಪೆಂಡಾಲ್‌ನಲ್ಲಿ ನಾಟಕ ಆಡುತ್ತಿದ್ದ ಜನಾರ್ದನ್‌ಗೆ  ಸಿದ್ದೇಶ್ವರ ನಾಟಕ ಕಂಪನಿಯಲ್ಲಿ ಅವಕಾಶ ಸಿಕ್ಕಿತು. ಆಗ ಪಟ್ಟಣಕ್ಕೆ ಬಂದಿದ್ದ ಧೀರೇಂದ್ರ ಗೋಪಾಲ್ ಅವರು ಜನಾರ್ದನ್‌ ನಟನೆ ಕಂಡು ಬೆಂಗಳೂರಿಗೆ ಕರೆಸಿಕೊಂಡು ಸಿನಿಮಾದಲ್ಲಿ ಪಾತ್ರ ಕೊಟ್ಟರು’ ಎಂದು ಸಹಪಾಠಿಗಳಾದ ಪುರಸಭೆ ಸದಸ್ಯ ಕೆ.ಸಿ.ರಮೇಶ್, ಜಗದೀಶ್ ನಾಡಿಗ್ ನೆನಪಿಸಿಕೊಂಡರು.

ADVERTISEMENT

‘ಜನಾರ್ದನ್‌ ಕುಟುಂಬ ಹಲವು ವರ್ಷ ಇಲ್ಲಿಯೇ ವಾಸವಿತ್ತು. ನಟರಾದ ನಂತರವೂ ಅವರು ಪಟ್ಟಣದ ವಿಜಯಾ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ರಜೆ ಹಾಕಿ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದರು. ಇಲ್ಲಿ ವಾಸವಿದ್ದುಕೊಂಡೇ ಅವರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಅವರ ತಂದೆಯ ನಿಧನದ ನಂತರ ಇಲ್ಲಿ ಅವರಿಗಿದ್ದ 2 ಎಕರೆ ಜಮೀನು, ಮನೆ ಮಾರಾಟ ಮಾಡಿ ಬೆಂಗಳೂರಿಗೆ ಹೋದರು. ನಂತರ ಇಲ್ಲಿಂದ ಬೆಂಗಳೂರು ಬ್ಯಾಂಕ್ ಶಾಖೆಗೆ ವರ್ಗಾವಣೆ ಮಾಡಿಸಿಕೊಂಡರು’ ಎಂದು ಸಹಪಾಠಿಗಳು ನೆನಪಿಸಿಕೊಳ್ಳುತ್ತಾರೆ.

ಬ್ಯಾಂಕ್‌ನಲ್ಲಿ ತಿಂಗಳಿಗೆ ₹50 ಸಂಬಳ

ಪಟ್ಟಣದ ವಿಜಯಾ ಬ್ಯಾಂಕ್‌ನಲ್ಲಿ ಕೆಲಸಕ್ಕೆ ಸೇರಿದಾಗ ಜನಾರ್ದನ್‌ ತಿಂಗಳಿಗೆ ₹50 ಸಂಬಳ ಪಡೆಯುತ್ತಿದ್ದರು. ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿರುವಂತೆ ಆಗಿನ ಕಾಲಕ್ಕೆ ಇದು ದೊಡ್ಡ ಮೊತ್ತವಾಗಿತ್ತು. ಇದರ ಜತೆಗೆ ಭಾನುವಾರ ಹಾಗೂ ರಜಾ ದಿನಗಳಲ್ಲಿ ಡಾ.ಶಂಕರ ಶೆಟ್ಟಿ ತೋಟಕ್ಕೆ ತಾಯಿಯೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ. ಅವರು ವಾರಕ್ಕೊಮ್ಮೆ ಕೂಲಿ ಕೊಡುತ್ತಿದ್ದರು. ಆ ಹಣದಲ್ಲಿ ಸಂತೆ ಮಾಡಿಕೊಂಡು ಮನೆಗೆ ಹೋಗುತ್ತಿದ್ದೆ. ರಾತ್ರಿ ಪಟ್ಟಣದ ಮಲ್ಲಿಕಾರ್ಜುನ್ ಟೂರಿಂಗ್ ಟಾಕೀಸ್‌ನಲ್ಲಿ ರೀಲ್ ಸುತ್ತುವ ಕೆಲಸ ಮಾಡುತ್ತಿದ್ದೆ. ಅವರು ದಿನಕ್ಕೆ ₹ 1 ಎರಡು ಟೀ ಒಂದು ಬನ್ ನೀಡುತ್ತಿದ್ದರು. ನಾಟಕ ಕಂಪನಿಯಲ್ಲಿ ಅವಕಾಶ ಸಿಕ್ಕಿದ ನಂತರ ಹಣ ಕೂಡಿಸಿ ಕಪ್ಪು ಹೆಂಚಿನ ಮನೆ ಖರೀದಿಸಿದೆ ಎಂದು ಅವರು ಸಂಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.