ಚಿತ್ರದುರ್ಗ: ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ ಆ.9ರಿಂದ 2 ದಿನಗಳ ಕಾಲ ನಗರದ ಸರ್ಕಾರಿ ಕಲಾ ಕಾಲೇಜು ಸಭಾಭವನದಲ್ಲಿ ‘ಚಿತ್ರದುರ್ಗ ಪರಿಸರದ ಬಯಲಾಟಗಳು‘ ಬಯಲಾಟ ಪ್ರದರ್ಶನ, ವಿಚಾರ ಸಂಕಿರಣ ನಡೆಯಲಿದೆ.
ಆ.9ರಂದು ಬೆಳಿಗ್ಗೆ 10.30ಕ್ಕೆ ಮೈಸೂರು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಿವೃತ್ತ ಪ್ರಾಧ್ಯಾಪಕರಾದ ಕೆ.ಎಂ.ಮೈತ್ರಿ ಅವರು ಆಶಯ ಮಾತುಗಳನ್ನಾಡುವರು. ರಂಗ ಸಮಾಜದ ಸದಸ್ಯ ರಾಜಪ್ಪ ದಳವಾಯಿ, ಬಯಲಾಟ ಅಕಾಡೆಮಿ ಅಧ್ಯಕ್ಷ ದುರ್ಗದಾಸ್, ಪ್ರಾಚಾರ್ಯ ಕರಿಯಪ್ಪ ಮಾಳಿಗೆ ಪಾಲ್ಗೊಳ್ಳುವರು.
ಮಧ್ಯಾಹ್ನ 12.30ಕ್ಕೆ ‘ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಬೌಗೋಳಿಕ ಹಿನ್ನೆಲೆ’ ಕುರಿತು ತಜ್ಞರಾದ ಬಿ.ರಾಜಶೇಖರಪ್ಪ, ಜಿಲ್ಲೆಯ ಜಾನಪದ ಕುರಿತು ಮೀರಾಸಾಬಿಹಳ್ಳಿ ಶಿವಣ್ಣ, ಬಯಲಾಟ ಪರಂಪರೆ ಕುರಿತು ಬಿ.ಎಂ.ಗುರುನಾಥ ವಿಚಾರ ಮಂಡಿಸುವರು. ಮಧ್ಯಾಹ್ನ 2.30ಕ್ಕೆ ಯಶೋದಾ, ಚಿತ್ತಯ್ಯ, ಮಲ್ಲಿಕಾರ್ಜುನ ಕಲಮರಹಳ್ಳಿ ಮಾತನಾಡುವರು.
ಸಂಜೆ 4 ಗಂಟೆಗೆ ಚಳ್ಳಕೆರೆ ತಾಲ್ಲೂಕು ಮಲ್ಲೂರಹಳ್ಳಿ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ಬಯಲಾಟ ಸಂಘದ ಕಲಾವಿದರು ‘ದ್ರೌಪದಿ ವಸ್ತ್ರಾಪಹರಣ’ ಬಯಲಾಟ ಪ್ರದರ್ಶನ ಮಾಡಲಿದ್ದಾರೆ. ಸಂಜೆ 6.30ಕ್ಕೆ ಮೊಳಕಾಲ್ಮುರು ತಾಲ್ಲೂಕು, ಹಳೇಕೆರೆಯ ನುಂಕೆಮಲೆ ಕಾಲಭೈರವಸ್ವಾಮಿ ಸಂಘದ ಕಲಾವಿದರು ‘ಕಾಲ ಭೈರವೇಶ್ವರಸ್ವಾಮಿ ಮಹಾತ್ಮೆ’ ಬಯಲಾಟ ಪ್ರದರ್ಶನ ಮಾಡುವರು.
ಆ.10ರಂದು ಬೆಳಿಗ್ಗೆ ಚಿಕ್ಕಣ್ಣ ಎಣ್ಣಕಟ್ಟೆ, ಪಾರಿಜಾತಾ, ಅರುಣ ಜೋಳದ ಕೂಡ್ಲಿಗಿ ಅವರು ವಿಚಾರ ಮಂಡಿಸುವರು. ಮಧ್ಯಾಹ್ನ 12.30ಕ್ಕೆ ತಳಕು ಗ್ರಾಮದ ತರಾಸು ಬಯಲಾಟ ಕಲಾ ಸಂಘದ ಕಲಾವಿದರು ‘ವೀರ ಅಭಿಮನ್ಯು ಕಾಳಗ’ ಬಯಲಾಟ ಪ್ರದರ್ಶಿಸುವರು.
ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ವಿಮರ್ಶಕಿ ತಾರಿಣಿ ಶುಭದಾಯಿನಿ ಅವರು ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಯಾಗಿ ಕಲಾವಿದ ಕೆ.ಪಿ.ಭೂತಯ್ಯ, ಎಚ್.ಲಿಂಗಪ್ಪ, ಕೆ.ಆರ್.ದುರ್ಗದಾಸ ಪಾಲ್ಗೊಳ್ಳುವರು.
ಸಂಜೆ 5.30ಕ್ಕೆ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಬೆಳ್ಳೀಕಟ್ಟೆಯ ಬಸವೇಶ್ವರ ನಾಟ್ಯ ಸಂಘದ ಕಲಾವಿದರು ‘ಶತಕಂಠ ರಾಮಾಯಣ’ ಬಯಲಾಟ ಪ್ರದರ್ಶನ ಮಾಡುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.