ADVERTISEMENT

ಬಜೆಟ್‌ನಲ್ಲಿ ಹೆಚ್ಚಿನ ಅನುದಾನ: ಸಚಿವ

ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 14:29 IST
Last Updated 29 ಜನವರಿ 2022, 14:29 IST
ಚಿತ್ರದುರ್ಗದಲ್ಲಿರುವ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಕಚೇರಿಯನ್ನು ಯೋಜನಾ ಸಚಿವ ಎನ್. ಮುನಿರತ್ನ ಅವರು ಶನಿವಾರ ಉದ್ಘಾಟಿಸಿದರು. ಮಂಡಳಿ ಅಧ್ಯಕ್ಷ ಜೀವನಮೂರ್ತಿ, ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಶಾಸಕಿ ಕೆ.ಪೂರ್ಣಿಮಾ, ಸದಸ್ಯೆ ಶ್ಯಾಮಲ ಶಿವಪ್ರಕಾಶ್ ಇದ್ದಾರೆ.
ಚಿತ್ರದುರ್ಗದಲ್ಲಿರುವ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಕಚೇರಿಯನ್ನು ಯೋಜನಾ ಸಚಿವ ಎನ್. ಮುನಿರತ್ನ ಅವರು ಶನಿವಾರ ಉದ್ಘಾಟಿಸಿದರು. ಮಂಡಳಿ ಅಧ್ಯಕ್ಷ ಜೀವನಮೂರ್ತಿ, ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಶಾಸಕಿ ಕೆ.ಪೂರ್ಣಿಮಾ, ಸದಸ್ಯೆ ಶ್ಯಾಮಲ ಶಿವಪ್ರಕಾಶ್ ಇದ್ದಾರೆ.   

ಚಿತ್ರದುರ್ಗ: ಮುಂಬರುವ ಬಜೆಟ್‌ನಲ್ಲಿ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ನೀಡಲು ಪ್ರಯತ್ನಿಸಲಾಗುವುದು ಎಂದು ತೋಟಗಾರಿಕೆ ಮತ್ತು ಯೋಜನೆ ಸಚಿವ ಎನ್. ಮುನಿರತ್ನ ಆಶ್ವಾಸನೆ ನೀಡಿದರು.

ತಮಟಕಲ್ಲು ರಸ್ತೆಯಲ್ಲಿರುವ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಇ-ಕಚೇರಿ, ಜಾಲತಾಣ ಮತ್ತು ಕಚೇರಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘1994ರಲ್ಲಿ ಬಯಲುಸೀಮೆ ಅಭಿವೃದ್ಧಿ ಮಂಡಳಿಯನ್ನು ಸ್ಥಾಪನೆ ಮಾಡಲಾಗಿದೆ. ವಾರ್ಷಿಕವಾಗಿ ಸರಾಸರಿ ₹ 35 ಕೋಟಿ ಅನುದಾನ ನೀಡಲಾಗಿದೆ. ಕೃಷಿ, ರಸ್ತೆ, ಕೆರೆ ಅಭಿವೃದ್ಧಿ ಸೇರಿ ಇತರ ಅಭಿವೃದ್ಥಿ ಕಾರ್ಯಗಳಿಗೆ ಬಳಕೆ ಮಾಡಲಾಗಿದೆ. 70 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಯಲುಸೀಮೆ ಪ್ರದೇಶವನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಕರ್ತವ್ಯ’ ಎಂದರು.

ADVERTISEMENT

‘ಬಿಡುಗಡೆಯಾದ ಅನುದಾನವನ್ನು ಸಕಾಲಕ್ಕೆ ಬಳಕೆ ಮಾಡಬೇಕು. ಅನುದಾನ ಮಂಜೂರಾದರೂ ಕಾಮಗಾರಿ ವಿಳಂಬ ಆಗುವುದರಿಂದ ಉದ್ದೇಶ ಈಡೇರದು. ಅನುದಾನ ಸದ್ಬಳಕೆ ಆಗದಿದ್ದರೆ ಸಾರ್ವಜನಿಕರಿಗೆ ಸೇವೆ ಒದಗಿಸಲು ಸಾಧ್ಯವಾಗದು. ಮಂಡಳಿ ವ್ಯಾಪ್ತಿಯ ಎಲ್ಲ ಶಾಸಕರ ಸಭೆ ಕರೆದು ಚರ್ಚಿಸಲಾಗುವುದು’ ಎಂದು ಆಶ್ವಾಸನೆ ನೀಡಿದರು.

ಮಂಡಳಿ ಅಧ್ಯಕ್ಷ ಎನ್.ಇ.ಜೀವನಮೂರ್ತಿ ಮಾತನಾಡಿ, ‘ರಾಜ್ಯದಲ್ಲಿ ಇಂತಹ ನಾಲ್ಕು ಮಂಡಳಿಗಳಿವೆ. ಕರಾವಳಿ, ಮಲೆನಾಡು, ಕಲ್ಯಾಣ ಕರ್ನಾಟಕ ಹಾಗೂ ಬಯಲುಸೀಮೆ ಅಭಿವೃದ್ಧಿ ಮಂಡಳಿ ಯೋಜನಾ ಇಲಾಖೆ ವ್ಯಾಪ್ತಿಯಲ್ಲಿವೆ. 14 ಜಿಲ್ಲೆ, 58 ತಾಲ್ಲೂಕು ಒಳಗೊಂಡಿರುವ ಬಯಲುಸೀಮೆ ಅಭಿವೃದ್ಧಿ ಮಂಡಳಿ ವ್ಯಾಪ್ತಿ ದೊಡ್ಡದು. ಆದರೆ, ಉಳಿದ ಮಂಡಳಿಗಿಂತ ಕಡಿಮೆ ಅನುದಾನ ಲಭ್ಯವಾಗುತ್ತಿದೆ. ಕಲ್ಯಾಣ ಕರ್ನಾಟಕದ ಸ್ಥಿತಿ ಬಯಲುಸೀಮೆಯಲ್ಲಿದ್ದರೂ ಅನುದಾನದ ಕೊರತೆ ಉಂಟಾಗುತ್ತಿದೆ’ ಎಂದರು.

ಶಾಸಕಿ ಕೆ.ಪೂರ್ಣಿಮಾ, ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ಮೆದೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಸದಸ್ಯರಾದ ಶ್ಯಾಮಲ ಶಿವಪ್ರಕಾಶ್, ಸುದೀರ್ ರಾಮಸಾ ಕಾಟಿಗರ್, ಕಾರ್ಯದರ್ಶಿ ಡಾ.ಶ್ರೀಧರ ಬಿ.ಭಜಂತ್ರಿ ಇದ್ದರು.

***

ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗಿಸಲು ಸಚಿವರು ಪ್ರಯತ್ನಿಸಬೇಕು. ಲಭ್ಯವಾದ ಅನುದಾನವನ್ನು 2023ರ ಒಳಗೆ ಬಳಕೆ ಮಾಡುವ ಅವಕಾಶ ನೀಡಬೇಕು.

ಜಿ.ಎಚ್‌.ತಿಪ್ಪಾರೆಡ್ಡಿ,ಶಾಸಕ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.