ADVERTISEMENT

ಮೊಳಕಾಲ್ಮುರಿನಲ್ಲಿ ಲೆಕ್ಕಾಚಾರ ಜೋರು!

ಬಳ್ಳಾರಿ ಉಪ ಚುನಾವಣೆ: ನೆರೆಯ ಕ್ಷೇತ್ರದ ಸೋಲು–ಗೆಲುವು ಕೂತುಹಲ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 12:06 IST
Last Updated 17 ಅಕ್ಟೋಬರ್ 2018, 12:06 IST
ಬಿ. ಶ್ರೀರಾಮುಲು
ಬಿ. ಶ್ರೀರಾಮುಲು   

ಮೊಳಕಾಲ್ಮುರು: ನೆರೆ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೊಷಣೆಯಾದಾಗಿನಿಂದ ತಾಲ್ಲೂಕಿನಲ್ಲಿ ಅಲ್ಲಿನ ಸೋಲು– ಗೆಲುವಿನ ಲೆಕ್ಕಾಚಾರ ಬಿರುಸಿನಿಂದ ನಡೆಯುತ್ತಿದೆ. ಲೆಕ್ಕಾಚಾರ ಜೋರಾಗಲು ನೆರೆ ಕ್ಷೇತ್ರ ಎಂಬುದು ಮಾತ್ರ ಕಾರಣವಾಗಿಲ್ಲ. ಜತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ನಡೆಯಬೇಕಿದ್ದ ಅಭ್ಯರ್ಥಿಗಳ ಜಿದ್ದಾಟ ಬಹುತೇಕ ಅಲ್ಲಿ ನಡೆಯುತ್ತಿರುವುದು ಮುಖ್ಯ ಕಾರಣವಾಗಿದೆ.

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮಾಜಿ ಸಂಸದೆ ಜೆ. ಶಾಂತಾ, ಕಾಂಗ್ರೆಸ್‌ನಿಂದ ಎಂಎಲ್‌ಸಿ ವಿ.ಎಸ್‌. ಉಗ್ರಪ್ಪ ಹೆಸರು ಮುಂಚೂಣಿಯಲ್ಲಿದ್ದವು. ಕೊನೆ ಕ್ಷಣದಲ್ಲಿ ಕ್ರಮವಾಗಿ ಶ್ರೀರಾಮುಲು ಹಾಗೂ ಡಾ. ಯೋಗೇಶ್‌ಬಾಬುಗೆ ಟಿಕೆಟ್‌ ಸಿಕ್ಕಿತು. ಮತ್ತೊಂದು ಅಚ್ಚರಿಯಲ್ಲಿ ಕ್ಷೇತ್ರದ ಮಾಜಿ ಶಾಸಕ ಎಸ್‌. ತಿಪ್ಪೇಸ್ವಾಮಿ ಬಳ್ಳಾರಿ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವುದು ಗಮನ ಸೆಳೆದಿದೆ.

ಇಲ್ಲಿನ ವಿಧಾನಸಭಾ ಚುನಾವಣೆಯಲ್ಲಿಯೂ ತಿಪ್ಪೇಸ್ವಾಮಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದರು. ಆಗ ಶ್ರೀರಾಮುಲು ವಿರುದ್ಧ ನಡೆಸಿದ್ದ ವಾಗ್ದಾಳಿಯಿಂದ ಗಮನ ಸೆಳೆದಿದ್ದ ತಿಪ್ಪೇಸ್ವಾಮಿ ಈಗ ಶ್ರೀರಾಮುಲು ತವರಿನಲ್ಲಿ ಅವರ ಸಹೋದರಿ ಶಾಂತಾ ವಿರುದ್ಧ ಸ್ಪರ್ಧೆಗೆ ಇಳಿದಿರುವುದು ತಾಲ್ಲೂಕಿನ ಚಿತ್ತಕ್ಕೆ ಎಡೆ ಮಾಡಿಕೊಟ್ಟಿದೆ.

ADVERTISEMENT

ತಿಪ್ಪೇಸ್ವಾಮಿ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡು ಬಳ್ಳಾರಿ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿಸುತ್ತಾರೆ ಎಂಬ ವದಂತಿ ಬಲವಾಗಿ ಹಬ್ಬಿತ್ತು. ಈ ಬಗ್ಗೆ ಸಚಿವ ಡಿ.ಕೆ. ಶಿವಕುಮಾರ್‌ ಮೂಲಕ ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗುತ್ತಿತ್ತು. ಈಗ ತಿಪ್ಪೇಸ್ವಾಮಿ ಅಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿರುವುದು ಅಚ್ಚರಿ ಮೂಡಿಸಿದೆ.

ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಎಸ್‌. ತಿಪ್ಪೇಸ್ವಾಮಿ,‘ ಮೋಸ, ಸುಳ್ಳು, ಮಾಟ– ಮಂತ್ರಗಳಿಂದ ಚುನಾವಣೆ ಮಾಡುವ ಶ್ರೀರಾಮುಲುಗೆ ಬುದ್ಧಿ ಕಲಿಸಲು ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದೇನೆ. ಮೊಳಕಾಲ್ಮುರಿಗೆ ಈವರೆಗೂ ನಯಾಪೈಸೆ ಅನುದಾನ ತಾರದೇ ನಾನು ತಂದಿದ್ದ ಅನುದಾನಕ್ಕೆ ಶಂಕುಸ್ಥಾಪನೆಗಳನ್ನು ಮಾಡುತ್ತಿದ್ದಾರೆ. ಇನ್ನು ಮುಂದೆ ಸಕ್ರಿಯವಾಗಿ ಕ್ಷೇತ್ರದಲ್ಲಿ ಓಡಾಡಿಕೊಂಡು ಇರುತ್ತೇನೆ’ ಎಂದು ಹೇಳಿದರು.

‘ಸ್ವಂತ ಖರ್ಚಿನಲ್ಲಿ ಕೊಳವೆಬಾವಿ ಕೊರೆಸುವುದಾಗಿ ಹೇಳಿ ಶ್ರೀರಾಮುಲು ಕೈಚೆಲ್ಲಿದ್ದಾರೆ. ಇಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಸ್ಪರ್ಧೆ ಮಾಡಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿದೆ. ನನಗೆ ನಂಬಿಕೆ ದ್ರೋಹ ಮಾಡಿರುವ ಬಗ್ಗೆ ಬಳ್ಳಾರಿ ಮತದಾರದಲ್ಲಿ ಮನವರಿಕೆ ಮಾಡುತ್ತೇನೆ. ನಾಮಪತ್ರ ವಾಪಸ್‌ ಪಡೆಯುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಿಪ್ಪೇಸ್ವಾಮಿ ಸ್ಪರ್ಧೆ ಮಾಡುತ್ತಿರುವ ಬಗ್ಗೆ ಅಭಿಪ್ರಾಯ ಕೇಳಲು ಶ್ರೀರಾಮುಲು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.