ಚಿತ್ರದುರ್ಗ: ತಾಲ್ಲೂಕಿನ ಹಿರೇಗುಂಟನೂರು ಹೋಬಳಿ ವ್ಯಾಪ್ತಿಯ ಹಲವು ಹಳ್ಳಿಗಳ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡದ ಕಾರಣ ರೈತರು ಬೆಳೆ ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘದ ಸದಸ್ಯರು ಗುರುವಾರ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಾನುಕೊಂಡ ಎಫ್ 9ಎ ಪೀಡರ್ ವ್ಯಾಪ್ತಿಯಲ್ಲಿ ಬರುವ ಕುರುಬರಹಳ್ಳಿ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಿಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗುತ್ತಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ 7 ಗಂಟೆಗಳ ವಿದ್ಯುತ್ ಸರಬರಾಜು ಮಾಡಬೇಕು ಎಂದು ಸರ್ಕಾರ ಆದೇಶಿಸಿದೆ. ಆದರೆ ಈ ಫೀಡರ್‌ನಿಂದ 4–5 ಗಂಟೆಗಳೂ ವಿದ್ಯುತ್ ನೀಡುತ್ತಿಲ್ಲ. ಈ ಕುರಿತು ಬೆಸ್ಕಾಂ ಅಧಿಕಾರಿಗಳಿಗೂ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕರೆಂಟ್ ಬಂದ 3 ಗಂಟೆಯಲ್ಲಿ ಸುಮಾರು 10–12 ಬಾರಿ ವಿದ್ಯುತ್ ಹೋಗುತ್ತಿದೆ. ರಾತ್ರಿಯ ವೇಳೆಯಲ್ಲಿ ಕೂಡ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ರೈತರು ತಮ್ಮ ಜಮೀನಿನಲ್ಲಿ ಅಡಿಗೆ, ಬಾಳೆ, ತರಕಾರಿ ಬೆಳೆದಿದ್ದಾರೆ. ಕರೆಂಟ್ ವ್ಯತ್ಯಯದಿಂದ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಬೆಳೆಗಳು ಒಣಗುತ್ತಿದ್ದು ಇಳುವರಿ ಕಡಿಮೆಯಾಗುತ್ತಿದೆ ಎಂದು ಆರೋಪಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮರ್ಪಕವಾಗಿ ವಿದ್ಯುತ್ ಸಿಗುತ್ತಿಲ್ಲ. ತಾಂತ್ರಿಕ ಸಮಸ್ಯೆಗಳು ಎದುರಾದಾಗ ಸಿಬ್ಬಂದಿ ಶೀಘ್ರವಾಗಿ ರಿಪೇರಿ ಮಾಡುವುದಿಲ್ಲ. ಸೆಕ್ಷನ್ ಅಧಿಕಾರಿಗಳು ಹಾಗೂ ಪವರ್ ಮ್ಯಾನ್‌ಗಳಿಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸುವುದಿಲ್ಲ. ಕೂಡಲೇ ಈ ಫೀಡರ್ ವ್ಯಾಪ್ತಿಯ ಸಿಬ್ಬಂದಿಯನ್ನು ಬದಲಾವಣೆ ಮಾಡಬೇಕು. ಸರ್ಕಾರದ ಆದೇಶದಂತೆ ನಿತ್ಯ 7 ಗಂಟೆ ವಿದ್ಯುತ್ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ, ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಮುಖಂಡರಾದ ಸುರೇಶ್ ಬಾಬು, ಎಂ.ಬಿ.ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಪ್ರಭು, ಜಾನುಕೊಂಡ ಸಿದ್ದೇಶ್, ನಿಂಗಪ್ಪ, ಕರಿಬಸಣ್ಣ, ರಾಜಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.