
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಕಾಮಗಾರಿ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ಘೋಷಿಸಿದ್ದ ₹ 5,300 ಕೋಟಿ ಬಿಡುಗಡೆ ಮಾಡಬೇಕು. ಮುಂಬರುವ ಬಜೆಟ್‌ನಲ್ಲಿ ಕಾಮಗಾರಿ ಮುಗಿಸಲು ರಾಜ್ಯ ಸರ್ಕಾರ ₹ 500 ಕೋಟಿ ಮೀಸಲಿಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದರು.
ಮಧ್ಯಕರ್ನಾಟಕ ಭಾಗದ ಬಹುದಿನಗಳ ಕನಸು ಈವರೆಗೂ ಈಡೇರಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭರವಸೆ ನೀಡುತ್ತಲೇ ರೈತರಿಗೆ ವಂಚನೆ ಮಾಡುತ್ತಿವೆ. ಸತತ ಬರಗಾಲದಿಂದಾಗಿ ಅಂತರ್ಜಲ ಕುಸಿತ ಉಂಟಾಗಿದ್ದು ಕುಡಿಯುವ ನೀರಿಗೂ ಕೊರತೆ ಎದುರಾಗಿದೆ. ರೈತರು ಬೆಳೆದಿರುವ ಬೆಳೆಗಳು ಒಣಗಿ ಹೋಗುತ್ತಿದ್ದು ಅನ್ನದಾತ ತೀವ್ರ ನಷ್ಟ ಅನುಭವಿಸುತ್ತಿದ್ದಾನೆ. ಹೀಗಿದ್ದರೂ ಯೋಜನೆ ಅನುಷ್ಠಾನಕ್ಕೆ ಸರ್ಕಾರಗಳು ಮುಂದಾಗುತ್ತಿಲ್ಲ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಬೆಳೆ ಹಾಯಿಯಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಲವು ದಶಕಗಳಿಂದಲೂ ಭದ್ರಾ ಮೇಲ್ದಂಡೆ ಯೋಜನೆಗಾಗಿ ಹೋರಾಟಗಳು ನಡೆಯುತ್ತಿದ್ದರೂ ಸರ್ಕಾರಗಳು ಕಿಮ್ಮತ್ತು ನೀಡುತ್ತಿಲ್ಲ. ರಾಜಕೀಯ ಕಾರಣಗಳಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ₹ 5,300 ಕೋಟಿ ನೀಡುವುದಾಗಿ ಭರವಸೆ ನೀಡಿದ್ದರೂ ಈವರೆಗೂ ನಯಾಪೈಸೆ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಫೆಬ್ರುವರಿ ತಿಂಗಳಲ್ಲೇ ಭದ್ರಾ ನೀರು ಹರಿದು ಬರುತ್ತದೆ ಎಂದು ಸ್ಥಳೀಯ ಸಚಿವರು, ಶಾಸಕರು ತಪ್ಪು ಸಂದೇಶ ನೀಡಿದ್ದರು. ಈಗ ಮಾರ್ಚ್, ಏಪ್ರಿಲ್ ಕತೆ ಹೇಳುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣಕ್ಕೆ ₹ 200 ಕೋಟಿ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಮಾತು ತಪ‍್ಪಿದ್ದಾರೆ. ಮುಂಬರುವ ಬಜೆಟ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸಲು ತಕ್ಷಣಕ್ಕೆ ₹ 500 ಕೋಟಿ ನೀಡಬೇಕು ಎಂದು ಒತ್ತಾಯಿಸಿದರು.
ಬೇಸಿಗೆ ಸಮೀಪಿಸುತ್ತಿದ್ದು ಸಮರ್ಪಕವಾಗಿ ನೀರು ಸಿಗದಿದ್ದರೆ ರೈತರಿಗೆ ಸಂಕಷ್ಟ ಬದುಕು ಸೃಷ್ಟಿಯಾಗುತ್ತದೆ. ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು ಭದ್ರಾ ನೀರು ಅನಿವಾರ್ಯವಾಗಿದೆ. ಹೋರಾಟ ಆರಂಭವಾಗಿ 20 ವರ್ಷ ಕಳೆದರೂ ಬಯಲು ಸೀಮೆಗೆ ನೀರು ಬಾರದಿರುವುದು ಸ್ಥಳೀಯ ಜನಪ್ರತಿನಿಧಿಗಳು ತಲೆತಗ್ಗಿಸುವ ವಿಚಾರವಾಗಿದೆ ಎಂದು ಆರೋಪಿಸಿದರು.
2022–23ರ ಕೇಂದ್ರ ಬಜೆಟ್‌ನಲ್ಲಿ ಹಣ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಆದರೆ ಇಲ್ಲಿಯವರೆಗೆ ಹಣ ಬಾರದಿರುವುದು ಖಂಡನೀಯ. ರಾಜ್ಯ ಸರ್ಕಾರ ಕೂಡ ಕೇಂದ್ರ ಸರ್ಕಾರದ ಕಡೆಗೆ ಕೈತೋರಿಸುವುದನ್ನು ನಿಲ್ಲಿಸಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕಲ್ಲಳ್ಳಿ ಭಾಗದ ಗಾಯತ್ರಿ ಜಲಾಶಯ ಸೇರಿ 16 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಕೆ ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ ₹ 400 ಕೋಟಿ ಮೀಸಲಿಡಬೇಕು. ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ. ಮೊಳಕಾಲ್ಮುರು ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು. ಭದ್ರ ಮೇಲ್ದಂಡೆ ಯೋಜನೆಯಲ್ಲಿ ಹೊಳಲ್ಕೆರೆ ತಾಲ್ಲೂಕಿಗೆ ಹನಿ ನೀರಾವರಿ ಬಿಟ್ಟು ಹೋಗಿದ್ದು ಅದನ್ನು ತಕ್ಷಣವೇ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.
ಹಿರಿಯೂರು ಸಮೀಪದ ವಾಣಿ ವಿಲಾಶ ಸಾಗರ ಜಲಾಶಯಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಿಂದ 5 ಟಿಎಂಸಿ ಅಡಿ ನೀರು ಮೀಸಲಿಡಬೇಕು. ಜಲಾಶಯಕ್ಕೆ ಕ್ರಸ್ಟ್ ಗೇಟ್ ಅಳವಡಿಸುವ ಪ್ರಸ್ತಾವವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತಸಂಘ ರಾಜ್ಯ ಘಟಕದ ಕಾರ್ಯಾಧ್ಯಕ್ಷರಾದ ಈಚಘಟ್ಟ ಸಿದ್ದವೀರಪ್ಪ, ಬೇಡರಡ್ಡಿಹಳ್ಳಿ ಬಸವರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ, ರವಿಕುಮಾರ್ ಮುಖಂಡರಾದ ರಂಗಸ್ವಾಮಿ, ಪ್ರಸನ್ನ, ಜಯಣ್ಣ, ಅನ್ನಪೂರ್ಣಮ್ಮ, ತಿಪ್ಪೇಸ್ವಾಮಿ, ರುದ್ರಮ್ಮನಹಳ್ಳಿ ತಿಪ್ಪೇಸ್ವಾಮಿ ಇದ್ದರು.
Cut-off box - ಪ್ರಾಣ ಹೋದರೆ ಸರ್ಕಾರವೇ ಹೊಣೆ ಕಾಮಗಾರಿ ಪೂರ್ಣಗೊಳಿಸುವಂತೆ ಹಲವು ವರ್ಷಗಳಿಂದ ಒತ್ತಾಯ ಮಾಡುತ್ತಿದ್ದರೂ ಕೇಂದ್ರ ರಾಜ್ಯ ಸರ್ಕಾರಗಳು ಸ್ಪಂದಿಸಿಲ್ಲ. ಮನವಿ ಪತ್ರ ಕೊಟ್ಟು ಸಾಕಾಗಿ ಹೋಗಿದೆ. ಈಗ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಬಂದಿದೆ. ಉಪವಾಸ ಸತ್ಯಾಗ್ರಹ ನಡೆಸುವುದು ಅನಿವಾರ್ಯವಾಗಿದೆ. ಈ ಸಂದರ್ಭದಲ್ಲಿ ರೈತರ ಪ್ರಾಣಕ್ಕೆ ತೊಂದರೆಯಾದರೆ ಅಥವಾ ಯಾವುದೇ ಅಹಿತರಕ ಘಟನೆ ನಡೆದರೆ ಸರ್ಕಾರವೇ ಹೊಣೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು. ಸಂಜೆ 6 ಗಂಟೆಯಾದರೂ ಯಾವೊಬ್ಬ ಅಧಿಕಾರಿಯೂ ಪ್ರತಿಭಟನಾ ಸ್ಥಳಕ್ಕೆ ಬರಲಿಲ್ಲ. ಮುಖಂಡರು ಕಾರ್ಯಕರ್ತರು ಅಹೋರಾತ್ರಿ ಧರಣಿ ಮುಂದುವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.