ADVERTISEMENT

ಶತಮಾನದ ಹೊಸ್ತಿಲಿನಲ್ಲಿರುವ ಶಾಲೆಗೆ ದಾಖಲೆ ಮಕ್ಕಳು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 5:20 IST
Last Updated 8 ಅಕ್ಟೋಬರ್ 2021, 5:20 IST
ಜಿ. ಮಹೇಶ್
ಜಿ. ಮಹೇಶ್   

ಭರಮಸಾಗರ: ಇಲ್ಲಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ 1924ರಲ್ಲಿ ಸ್ಥಾಪನೆಗೊಂಡಿದ್ದು, ಇನ್ನು 3 ವರ್ಷಗಳಲ್ಲಿ ಶತಮಾನ ಪೂರೈಸಲಿದೆ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ದೇಶ–ವಿದೇಶಗಳಲ್ಲಿ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪ್ರಖ್ಯಾತ ಉದ್ಯಮಿಗಳು, ರಾಜಕಾರಣಿಗಳೂ ಆಗಿ ಇಂದಿಗೂ ಈ ಶಾಲೆಯನ್ನು ಸ್ಮರಿಸುತ್ತಾರೆ.

ಮೊದಲು ಸರ್ಕಾರಿ ಬಾಲಕ, ಬಾಲಕಿಯರ ಪ್ರಾಥಮಿಕ ಶಾಲೆ, ಮಾಧ್ಯಮಿಕ ಶಾಲೆಯಾಗಿತ್ತು. ಈಚಿನ ವರ್ಷಗಳಲ್ಲಿ 1ರಿಂದ 8ನೇ ತರಗತಿಯವರೆಗೆ ಸರ್ಕಾರಿ ಮಾದರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಾಯಿತು. 2018ರಲ್ಲಿ ವಿದ್ಯಾರ್ಥಿ, ಪೋಷಕರು ಪ್ರೌಢಶಾಲೆಗಾಗಿ 11 ದಿನಗಳ ಸತತ ಹೋರಾಟ ಮಾಡಿದ ಪರಿಣಾಮವಾಗಿ ಉನ್ನತೀಕರಿಸಿದ ಪ್ರೌಢಶಾಲೆ ಲಭಿಸಿ 9ರಿಂದ 10ನೇ ತರಗತಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ತರಗತಿಗಳು ನಡೆಯುತ್ತಿವೆ.

‘ಪ್ರೌಢಶಾಲೆಗಾಗಿ ವಿದ್ಯಾರ್ಥಿಗಳು ಪ್ರಧಾನಿಗೂ ಟ್ವೀಟ್ ಮಾಡಿ ಪ್ರಧಾನಿ ಕಚೇರಿಯಿಂದ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸುವ ತನಕವೂ ಹೋರಾಟ ಮಾಡಿ ಶಾಲೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 2018ರಲ್ಲಿ ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿಯೂ ಚರ್ಚಿತವಾಗಿ ಮುಂಜೂರಾದ ಶಾಲೆ ಇದು. ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗೆ ದಾಖಲಾಗಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಜಿಲ್ಲೆಯಲ್ಲಿಯೇ ದಾಖಲೆ ಪ್ರಮಾಣದಲ್ಲಿದೆ.

ADVERTISEMENT

ಎರಡು ಬಾರಿಯೂ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಲಭಿಸಿದ ಕಾರಣ ಪ್ರೌಢಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ಈ ಸರ್ಕಾರಿ ಶಾಲೆಯತ್ತ ಮುಖ ಮಾಡಿದ್ದಾರೆ. ಈ ಶಾಲೆಗೆ 2018 - 19ರ ಶೈಕ್ಷಣಿಕ ಸಾಲಿನಲ್ಲಿ 511 ಮಕ್ಕಳು ದಾಖಲಾಗಿದ್ದರು. 2019-20ರಲ್ಲಿ 629, 2020-21ನೇ ಸಾಲಿನಲ್ಲಿ ಕೋವಿಡ್ ಎರಡನೇ ಅಲೆ ಬಂದ ನಂತರ ಸೆಪ್ಟೆಂಬರ್‌ ಅಂತ್ಯಕ್ಕೆ 702 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಅದರಲ್ಲಿ 461 ಕನ್ನಡ ಮಾಧ್ಯಮ ಮತ್ತು 241 ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ. ಈ ವರ್ಷ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮ ರೂಪಿಸಿದ ಕಾರಣ 702 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಸರ್ಕಾರದ ಅನುದಾನದಲ್ಲಿ ಕಟ್ಟಡ, ಕಂಪ್ಯೂಟರ್ ಲ್ಯಾಬ್ ನಿರ್ಮಿಸಿ ಬೋಧನಾ ಗುಣಮಟ್ಟ ಹೆಚ್ಚಿಸಲಾಗಿದೆ. ಆನ್‌ಲೈನ್ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಸ್ಮಾರ್ಟ್‌ಕ್ಲಾಸ್‌ಗಳ ಮೂಲಕ ಮಕ್ಕಳಿಗೆ ತಂತ್ರಜ್ಞಾನದ ಪರಿಚಯ ಮಾಡಿಸಲಾಗುತ್ತಿದೆ. ಪ್ರತಿ ಶುಕ್ರವಾರ ಪಠ್ಯ–ಪಠ್ಯೇತರ ಚಟುವಟಿಕೆ, ಶನಿವಾರ ಯೋಗ ಮತ್ತು ಧ್ಯಾನ ಶಿಬಿರ, ಸ್ಕೌಟ್ಸ್‌ ಮತ್ತು ಸೇವಾದಳದ ರಚನೆ ಇಲ್ಲಿಯ ವಿಶೇಷ. ಕ್ರೀಡಾ ಚಟುವಟಿಕೆಯಲ್ಲಿ ರಾಜ್ಯಮಟ್ಟದವರೆಗೂ ಸ್ಪರ್ಧಿಸಿದ್ದಾರೆ.

ಶಾಲೆಯಲ್ಲಿ ಬಿಸಿಯೂಟದ ಆಧುನಿಕ ಪರಿಕರಗಳು, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಶಾಲೆಯ ಮುಂಭಾಗದಲ್ಲಿ ವಿವಿಧ ಗಿಡಗಳನ್ನು ಬೆಳೆಸಲಾಗಿದ್ದು ಉತ್ತಮ ನೆರಳು ಒದಗುತ್ತಿದೆ. ಶಾಲೆಯ ಆವರಣದಲ್ಲಿ ತೆರೆದ ರಂಗಮಂದಿರ ಇದೆ. ಶಾಲೆಯ ಮೊದಲ ಮಹಡಿಯಲ್ಲಿ ವಿಶಾಲವಾದ ಸಭಾಂಗಣವಿದೆ. ಇವು ಶಾಲೆಯ ವಾರ್ಷಿಕೋತ್ಸವ, ಸಭೆ ಸಮಾರಂಭಗಳು, ವಿವಿಧ ಶಿಬಿರ,ವಿದ್ಯಾರ್ಥಿಗಳ ಗುಂಪು ವ್ಯಾಸಂಗಕ್ಕೆ ಅನುಕೂಲಕರವಾಗಿದೆ. ಅಂಗವಿಕಲ ಸ್ನೇಹಿ ಪರಿಸರ ನಿರ್ಮಿಸುವ ನಿಮಿತ್ತ ಶಾಲೆಯ ಕಟ್ಟಡಗಳಿಗೆ ರ‍್ಯಾಂಪ್‌ಗಳನ್ನು ಮಾಡಲಾಗಿದೆ.

‘ಈ ಶಾಲೆಗೆ ಹೋಬಳಿಯ 15 ಗ್ರಾಮಗಳಿಂದ ಮಕ್ಕಳು ವ್ಯಾಸಂಗಕ್ಕೆ ಬರುತ್ತಿದ್ದಾರೆ. ದಾನಿಗಳು ಶಾಲೆಗೆತಟ್ಟೆ–ಲೋಟ, ವಿವಿಧ ಸಾಮಗ್ರಿಗಳನ್ನು ಕೊಡುಗೆ ನೀಡಿದ್ದಾರೆ. ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಕುಟುಂಬದವರೇ ಹೆಚ್ಚಾಗಿದ್ದು ಅವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪರಿಚಯ ಮತ್ತು ಜ್ಞಾನಾರ್ಜನೆಗೆ ಮಹತ್ವ ನೀಡಲಾಗಿದೆ. ಅದಕ್ಕಾಗಿ ವಿದ್ಯಾರ್ಥಿವೇತನ ಒದಗಿಸಲು ಸಹಾಯಕವಾಗುವ ಎನ್‌ಎಂಎಂಎಸ್ ಪರೀಕ್ಷೆಗೆ ಮಾರ್ಗದರ್ಶನ ಮಾಡುತ್ತಿದ್ದೇವೆ’ ಎನ್ನುತ್ತಾರೆ ಮುಖ್ಯೋಪಾಧ್ಯಾಯ ಜಿ. ಮಹೇಶ್.

ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪನೆಗೆ ಇಚ್ಛೆ
ಪ್ರೌಢಶಾಲಾ ವಿಭಾಗಕ್ಕೆ ಅಗತ್ಯವಿರುವ ಗಣಕಯಂತ್ರ, ಶೌಚಾಲಯ, ಲ್ಯಾಬ್ ವ್ಯವಸ್ಥೆ ಅಗತ್ಯವಿದೆ. ಆಗ ಮಾತ್ರ ಖಾಸಗಿ ಶಾಲೆಯೊಂದಿಗೆ ಪೈಪೋಟಿ ಮಾಡಬಹುದು. ಈ ವರ್ಷ ನೆರವೇರುತ್ತದೆ ಎಂಬ ಭರವಸೆ ಹೊಂದಿದ್ದೇವೆ. ಶಾಲೆಯ ಅಭಿವೃದ್ಧಿಗಾಗಿ ಹಳೇ ವಿದ್ಯಾರ್ಥಿಗಳ ಸಂಘವನ್ನು ಸ್ಥಾಪಿಸುವ ಬಗ್ಗೆ ಇಲ್ಲಿ ವ್ಯಾಸಂಗ ಮಾಡಿದ ಕೆಲವರು ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಶಾಲೆಗೆ ಸೌಲಭ್ಯ ಕ್ರೋಡೀಕರಿಸುವ ಆಲೋಚನೆ ಇದೆ.
– ಮುಬಾರಕ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ

ಕಾಂಪೌಂಡ್, ಶೌಚಾಲಯ ಅಗತ್ಯ
ಶಾಲೆಗೆ ಉತ್ತಮ ಕಾಂಪೌಂಡ್ ಅಗತ್ಯವಿದೆ. ಹೆಚ್ಚುತ್ತಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ, ಇನ್ನೂ 10 ಶಾಲಾ ಕೊಠಡಿಗಳು ಬೇಕಾಗಿವೆ. ಈಗ ಶಿಥಿಲಗೊಂಡಿರುವ ಹಳೇ ಶಾಲಾ ಕಟ್ಟಡವನ್ನು ನೆಲಸಮ ಮಾಡಬೇಕಾಗಿದೆ. ಈಗ ಒಟ್ಟು 23 ಶಿಕ್ಷಕರಿದ್ದು ಇನ್ನೂ ಹೆಚ್ಚಿನ ವಿಷಯ ಬೋಧನೆಗೆ ಶಿಕ್ಷಕರ ಅಗತ್ಯವಿದೆ. ಕುಡುಕರು, ಕಿಡಿಗೇಡಿಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಗೆ ಶಾಲೆಯ ವತಿಯಿಂದ ಮನವಿ ಮಾಡಲಾಗಿದೆ.
–ಶಿವಣ್ಣ, ಎಸ್.ಡಿ.ಎಂ.ಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.