ADVERTISEMENT

ಕನಕಪುರಕ್ಕೆ ವರ್ಗವಾಗಿರುವ ವೈದ್ಯಕೀಯ ಕಾಲೇಜು ಮರಳಿ ತನ್ನಿ: ಬಿಜೆಪಿ ಸವಾಲು

ಜಿಲ್ಲಾ ಕಾಂಗ್ರೆಸ್‌ಗೆ ಬಿಜೆಪಿ ಕಾರ್ಯದರ್ಶಿ ಕೆ.ಎಸ್‌.ನವೀನ್‌ ಸವಾಲು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 7:40 IST
Last Updated 11 ಆಗಸ್ಟ್ 2020, 7:40 IST
ಕೆ.ಎಸ್. ನವೀನ್.
ಕೆ.ಎಸ್. ನವೀನ್.   

ಚಿತ್ರದುರ್ಗ: ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಳಾಂತರ ತಡೆಯಲು ಸಿದ್ಧರಿದ್ದೇವೆ. ಆದರೆ, ಕನಕಪುರಕ್ಕೆ ಸ್ಥಳಾಂತರಗೊಂಡಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಮರಳಿ ತರಲು ಹೋರಾಟ ನಡೆಸಿ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್‌.ನವೀನ್‌ ಕಾಂಗ್ರೆಸ್‌ಗೆ ಸವಾಲು ಹಾಕಿದರು.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ರಾಜಕೀಯ ಪ್ರಭಾವ ಬಳಸಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವೈದ್ಯಕೀಯ ಕಾಲೇಜು ಕಿತ್ತುಕೊಂಡಿದ್ದಾರೆ. ವೈದ್ಯಕೀಯ ಕಾಲೇಜು ಹಿಂಪಡೆಯಲು ಶಾಸಕ ಟಿ.ರಘುಮೂರ್ತಿ ಅವರು ಕನಕಪುರಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಿ. ಅವರಿಗೆ ಬಿಜೆಪಿಯೂ ಕೈಜೋಡಿಸುತ್ತದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಸರ್ಕಾರಿ ಪದವಿ ಕಾಲೇಜು ಸ್ಥಳಾಂತರದ ಆದೇಶದ ಪ್ರತಿ ಹಿಡಿದು ರಾಜಕೀಯ ಮಾಡುತ್ತಿರುವ ಶಾಸಕರ ಹುನ್ನಾರವನ್ನು ಜನರು ಅರ್ಥ ಮಾಡಿಕೊಳ್ಳಬೇಕು. 2013ರಲ್ಲಿ ಬಿಜೆಪಿ ಸರ್ಕಾರ ಚಿತ್ರದುರ್ಗಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿತ್ತು. 34 ಎಕರೆ ಭೂಮಿ ಹಾಗೂ ಅನುದಾನವನ್ನೂ ಮೀಸಲಿಟ್ಟಿತ್ತು. ಹಿಂದುಳಿದ ಜಿಲ್ಲೆಯ ಕಾಲೇಜು ಕಿತ್ತುಕೊಂಡವರು ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾರೆ. ಇದರ ಬಗ್ಗೆ ಏಕೆ ಮಾತನಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.

ADVERTISEMENT

‘ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ರಘುಮೂರ್ತಿ ಅವರ ಪ್ರಭಾವ ಕಡಿಮೆಯಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ತುರುವನೂರು ವ್ಯಾಪ್ತಿಯಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಸಿಕ್ಕಿವೆ. ಇದರಿಂದ ವಿಚಲಿತಗೊಂಡ ಶಾಸಕರು ವಿನಾ ಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ಶಾಸಕರ ಹೋರಾಟ ಬೆಂಬಲಿಸುವ ಮಠಾಧೀಶರು ಇದನ್ನು ಅರ್ಥ ಮಾಡಿಕೊಳ್ಳಬೇಕು. ವೈದ್ಯಕೀಯ ಕಾಲೇಜು ಮರಳಿ ತರುವ ಹೋರಾಟಕ್ಕೆ ಕಾಂಗ್ರೆಸ್‌ ಮೇಲೆ ಒತ್ತಡ ಹೇರಬೇಕು’ ಎಂದು ಮನವಿ ಮಾಡಿದರು.

‘ಪದವಿ ಕಾಲೇಜು ಸ್ಥಳಾಂತರ ಮಾಡದಂತೆ ಉಪಮುಖ್ಯಮಂತ್ರಿ ಅಶ್ವತ್ಥ್‌ ನಾರಾಯಣ ಅವರಿಗೆ ಮನವಿ ಮಾಡಲಾಗಿದೆ. ಬಿಜೆಪಿಯ ಐದು ಶಾಸಕರು ಮತ್ತೊಮ್ಮೆ ಪತ್ರ ಬರೆಯಲಿದ್ದಾರೆ. ಬಿಜೆಪಿ ನಿಯೋಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವೊಲಿಸಲಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿಕೊಳ್ಳಲು ಮೂರು ವರ್ಷ ಕಾಲಾವಕಾಶ ನೀಡುವಂತೆ ಕೋರಿಕೊಳ್ಳಲು ಸಿದ್ಧರಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಮುಖಂಡರಾದ ಸಿದ್ದಾಪುರ ಸುರೇಶ್‌, ನಾಗರಾಜ್‌ ಬೇದ್ರೆ, ದಗ್ಗೆ ಶಿವಪ್ರಕಾಶ್‌, ನಂದಿ ನಾಗರಾಜ್‌, ಶಶಿಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.