ಚಿತ್ರದುರ್ಗ: ‘ಆಧುನಿಕ ಕಾಲಘಟ್ಟದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಬೇಸರದ ಸಂಗತಿ. ವಯಸ್ಸಾದ ಪೋಷಕರನ್ನು ಮಕ್ಕಳಂತೆ ನೋಡಿಕೊಳ್ಳುವುದು ನಾಗರಿಕ ಸಮಾಜದಲ್ಲಿ ಪ್ರತಿಯೊಬ್ಬರ ಕರ್ತವ್ಯ’ ಎಂದು ಬಿಜೆಪಿ ಮುಖಂಡ ಜಿ.ಎಸ್. ತಿಪ್ಪಾರೆಡ್ಡಿ ಹೇಳಿದರು.
ನಗರದ ಕಮ್ಮರೆಡ್ಡಿ ಸಮುದಾಯ ಭವನದಲ್ಲಿ ಶನಿವಾರ ರೆಡ್ಡಿ ಜನಸಂಘದಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ಮಾಜಿ ಸೈನಿಕರು, ನಿವೃತ್ತ ಸರ್ಕಾರಿ ನೌಕರರು ಹಾಗೂ ರಾಷ್ಟ್ರ ಪ್ರಶಸ್ತಿಗೆ ಭಾಜನರಾದವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
‘ಹಣದ ಆಸೆಗೆ ವಿದೇಶಕ್ಕೆ ಹೋಗಿ ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಈ ನಡವಳಿಕೆ ದೇಶದ ಪರಂಪರೆ, ಸಂಸ್ಕೃತಿಗೆ ಮಾರಕವಾಗಿದೆ. ಬೆಳೆಸಿದ, ಕಲಿಸಿದ ಪಾಲಕರನ್ನು ಎಂದಿಗೂ ಮರೆಯಬಾರದು. ವಯಸ್ಸಾದ ಹಿರಿಯರನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವುದು ಮಕ್ಕಳಾದವರ ಕರ್ತ್ಯವ್ಯವಾಗಬೇಕು’ ಎಂದರು.
‘ಸಮುದಾಯದ ಪೋಷಕರು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ತಿಪ್ಪಾರೆಡ್ಡಿ ಅವರನ್ನು ರಾಜ್ಯಸಭೆಗೆ ಕಳುಹಿಸುವ ನಿಟ್ಟಿನಲ್ಲಿ ಎಲ್ಲರೂ ಪಕ್ಷಾತೀತವಾಗಿ ಒತ್ತಾಯಿಸಬೇಕು’ ಎಂದು ಸಂಘದ ದಾವಣಗೆರೆ ನಿರ್ದೇಶಕ ಮೆ.ಕಾ. ಮುರುಳಿಕೃಷ್ಣ ಹೇಳಿದರು.
ಸಂಘದ ಉಪಾಧ್ಯಕ್ಷ ಎಂ.ಕೆ.ಅನಂತರೆಡ್ಡಿ, ಕಾರ್ಯದರ್ಶಿ ಡಿ.ಕೆ.ಶೀಲಾ, ಖಜಾಂಚಿ ಜಿ.ವೈ. ಸುರೇಶ್‌ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.