ADVERTISEMENT

ಚಿತ್ರದುರ್ಗ: ಡಿ.1ರಿಂದ ‘ಮೋದಿ ಮತ್ತೊಮ್ಮೆ’ ಅಭಿಯಾನ

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ನವೀನ್‌

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 11:29 IST
Last Updated 19 ನವೆಂಬರ್ 2018, 11:29 IST
ಕೆ.ಎಸ್. ನವೀನ್
ಕೆ.ಎಸ್. ನವೀನ್   

ಚಿತ್ರದುರ್ಗ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಲು ‘ಮೋದಿ ಮತ್ತೊಮ್ಮೆ’ ಅಭಿಯಾನವನ್ನು ಡಿ.1ರಿಂದ ಜ.14ರವರೆಗೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ನವೀನ್‌ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆ ಎದುರಿಸಲು ಸಿದ್ಧತೆ ನಡೆಯುತ್ತಿದೆ. ಭೂತ್‌ ಮಟ್ಟದ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲು ಇದು ನೆರವಾಗಲಿದೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರ ನಾಲ್ಕೂವರೆ ವರ್ಷದ ಆಡಳಿತಾವಧಿಯಲ್ಲಿ ಜಿಲ್ಲೆಯ ಸಾವಿರಾರು ಜನರು ಫಲಾನುಭವಿಗಳಾಗಿದ್ದಾರೆ. ಇವರೆಲ್ಲರನ್ನೂ ವೈಯಕ್ತಿಕವಾಗಿ ಭೇಟಿ ಮಾಡುವುದು ಈ ಅಭಿಯಾನದ ಉದ್ದೇಶ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವಂತೆಯೂ ಜಾಗೃತಿ ಮೂಡಿಸಲಾಗುವುದು’ ಎಂದರು.

ADVERTISEMENT

ಬೆಂಗಳೂರಿಗೆ ಪಾದಯಾತ್ರೆ: ‘ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ ಡಿಸೆಂಬರ್‌ ವೇಳೆಗೆ ವಿ.ವಿ.ಸಾಗರಕ್ಕೆ ನೀರು ಹರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಭರವಸೆ ನೀಡಿದ್ದರು. ಆದರೆ, ಯೋಜನೆಯನ್ನು 2023ಕ್ಕೆ ಪೂರ್ಣಗೊಳಿಸುವುದಾಗಿ ನೀರಾವರಿ ಇಲಾಖೆ ಹೇಳಿಕೊಂಡಿದೆ. ಯೋಜನೆಯನ್ನು ತತ್ವರಿತಗೊಳಿಸಲು ಸರ್ಕಾರದ ಮೇಲೆ ಒತ್ತಡ ಹೇರಲು ಚಿತ್ರದುರ್ಗದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

‘ರಾಜ್ಯ ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದ ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ನನೆಗುದಿಗೆ ಬಿದ್ದಿದೆ. ಭೂಸ್ವಾಧೀನ ಪ್ರಕ್ರಿಯೆ ಮುಗಿಯದ ಪರಿಣಾಮ ಯೋಜನೆ ಅನುಷ್ಠಾನಕ್ಕೆ ಅಡಚಣೆ ಉಂಟಾಗಿದೆ’ ಎಂದು ಆರೋಪಿಸಿದರು.

ಸಿ.ಎಂ. ಕ್ಷಮೆಯಾಚನೆಗೆ ಒತ್ತಾಯ: ‘ರೈತ ಮಹಿಳೆಯೊಬ್ಬರ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಡಿದ ಮಾತುಗಳು ಸಮಸ್ತ ಕೃಷಿಕರನ್ನು ಅವಮಾನಿಸಿವೆ. ಕೂಡಲೇ ಅವರು ರಾಜ್ಯದ ರೈತರ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

‘ಮಹಿಳೆಯ ಬಗ್ಗೆ ಬಳಸಿದ ಭಾಷೆ ಕುಮಾರಸ್ವಾಮಿ ಅವರ ಕೀಳು ಮಟ್ಟದ ಮನಸ್ಥಿತಿಗೆ ಸಾಕ್ಷಿ. ರಾಜ್ಯದ ಎಲ್ಲ ವರ್ಗದ ಜನರ ಸಮಸ್ಯೆಗಳನ್ನು ಪರಿಹರಿಸುವ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಉದ್ಧಟತನದಿಂದ ಮಾತನಾಡಿದ್ದು ತಪ್ಪು. ಹೋರಾಟಗಾರರ ಬಗ್ಗೆ ಹಗುರವಾದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು’ ಎಂದು ಎಚ್ಚರಿಕೆ ನೀಡಿದರು.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ವಿಭಾಗೀಯ ಸಹ ಪ್ರಮುಖ ಜಿ.ಎಂ.ಸುರೇಶ್‌, ಮುಖಂಡರಾದ ವೆಂಕಟಸ್ವಾಮಿ, ರಾಮಯ್ಯ, ಜಯಪಾಲ, ಮುರುಳಿ, ನಾಗರಾಜ ಬೇದ್ರೆ, ದಗ್ಗೆ ಶಿವಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.