ADVERTISEMENT

24ಕ್ಕೆ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ

ತಾ.ಪಂ, ಜಿ.ಪಂ ಹಾಗೂ ವಿಧಾನಸಭಾ ಉಪಚುನಾವಣೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 14:38 IST
Last Updated 21 ಜುಲೈ 2021, 14:38 IST
ಎನ್‌.ರವಿಕುಮಾರ್‌
ಎನ್‌.ರವಿಕುಮಾರ್‌   

ಚಿತ್ರದುರ್ಗ: ಮುಂಬರುವ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಜುಲೈ 24ರಂದು ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿದೆ. ಯಾವುದೇ ದಿನದಲ್ಲಾದರೂ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಚುನಾವಣೆಯ ಬಿಸಿ ಹೆಚ್ಚಾಗುತ್ತಿದೆ. ಪಕ್ಷ ಗೆಲುವು ಸಾಧಿಸಲು ಕಾರ್ಯತಂತ್ರ ರೂಪಿಸಬೇಕಿದೆ. ಈ ವಿಚಾರಗಳು ಸಭೆಯಲ್ಲಿ ಚರ್ಚೆ ಆಗಲಿದೆ’ ಎಂದು ಮಾಹಿತಿ ನೀಡಿದರು.

‘ಹಾನಗಲ್‌ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಮುಂಬರುವ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ಸ್ಥಳೀಯ ಸಂಸ್ಥೆಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದಿರುವ ಬಿಜೆಪಿ, ವಿಧಾನಪರಿಷತ್‌ನ 25 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಹೊಂದಿದೆ. ಪ್ರತಿ ಜಿಲ್ಲೆಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗುವುದು’ ಎಂದು ವಿವರಿಸಿದರು.

ADVERTISEMENT

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಹತ್ತು ವಿಭಾಗಗಳ ಪ್ರಭಾರಿ, ಸಹಪ್ರಭಾರಿ, ಸಂಘಟನಾ ಕಾರ್ಯದರ್ಶಿ ಹಾಗೂ ಸಹ ಸಂಘಟನಾ ಕಾರ್ಯದರ್ಶಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಏಳು ಮೋರ್ಚಾಗಳ ಅಧ್ಯಕ್ಷರು ಸೇರಿ 80 ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇಂಡಿಯನ್‌ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ಬೆಳಿಗ್ಗೆ 11ಕ್ಕೆ ಸಭೆ ಆರಂಭವಾಗಲಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ 60 ಸಾವಿರ ಬೂತ್‌ಗಳಿವೆ. ಬೂತ್‌ ಅಧ್ಯಕ್ಷರ ತಾಲ್ಲೂಕು ಮಟ್ಟದ ಸಭೆಯನ್ನು ಆಗಸ್ಟ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಮುಂಬರುವ ಚುನಾವಣೆಯಲ್ಲಿ ಪ್ರತಿ ಬೂತ್‌ನಲ್ಲಿಯೂ ಬಿಜೆಪಿಗೆ ಲೀಡ್‌ ನೀಡುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಲಾಗುತ್ತದೆ. ಆ.16ರಿಂದ 30ರವರೆಗೆ ಬೂತ್‌ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ ಮಾಡಲಾಗುತ್ತದೆ. ಜುಲೈ 25ಕ್ಕೆ ನಡೆಯುವ ಮನ್‌ ಕೀ ಬಾತ್‌ ಆಲಿಸಲು ಸಾರ್ವಜನಿಕ ಸಭೆ ಆಯೋಜಿಸುವಂತೆ ಬೂತ್ ಅಧ್ಯಕ್ಷರಿಗೆ ಜವಾಬ್ದಾರಿ ನೀಡಲಾಗಿದೆ’ ಎಂದರು.

‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರ ಸಂಖ್ಯೆ ಹೆಚ್ಚಾಗಿದೆ. ಪಕ್ಷ ಬೆಂಬಲಿತರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿದ್ದಾರೆ. ಸೆ.1ರಿಂದ 15ರವರೆಗೆ ಗ್ರಾಮ ಪಂಚಾಯಿತಿ ಸದಸ್ಯರ ಜಿಲ್ಲಾ ಮಟ್ಟದ ಸಮಾವೇಶಗಳನ್ನು ನಡೆಸಲಾಗುತ್ತದೆ. ಅಕ್ಟೋಬರ್‌ನಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಮಾವೇಶ ಆಯೋಜಿಸಲಾಗುವುದು. ಪಕ್ಷ ಕಟ್ಟುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆಗಳು ನಡೆಯಲಿವೆ’ ಎಂದು ಹೇಳಿದರು.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಎಸ್.ನವೀನ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ ಇದ್ದರು.

***

ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಏಳು ಸ್ಥಾನ ಬಿಜೆಪಿ ಗೆದ್ದಿತ್ತು. 25 ಸ್ಥಾನಗಳಲ್ಲಿ ಬಹುತೇಕ ಬಿಜೆಪಿ ಗೆಲುವು ಸಾಧಿಸಲಿದೆ. ಅಜೆಂಡಾದಲ್ಲಿ ಇರುವ ವಿಷಯಗಳು ಮಾತ್ರ ಸಭೆಯಲ್ಲಿ ಚರ್ಚೆ ಆಗಲಿವೆ.

ಎನ್‌.ರವಿಕುಮಾರ್‌
ಬಿಜೆಪಿ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.