ADVERTISEMENT

ಯೋಜನೆಗಳೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆ: ಸಚಿವ ಬಿ. ಶ್ರೀರಾಮು

ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 13:17 IST
Last Updated 17 ಅಕ್ಟೋಬರ್ 2020, 13:17 IST
ಚಳ್ಳಕೆರೆಯ ವಾಸವಿ ಮಹಲ್‌ನಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರು ಹಾಗೂ ಮತದಾರರ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಉದ್ಘಾಟಿಸಿದರು
ಚಳ್ಳಕೆರೆಯ ವಾಸವಿ ಮಹಲ್‌ನಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರು ಹಾಗೂ ಮತದಾರರ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಉದ್ಘಾಟಿಸಿದರು   

ಚಳ್ಳಕೆರೆ: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಜನಪರ ಯೋಜನೆಗಳೇ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ನಗರದ ವಾಸವಿ ಮಹಲ್‍ನಲ್ಲಿ ಶನಿವಾರ ಬಿಜೆಪಿ ತಾಲ್ಲೂಕು ಘಟಕದ ಆಯೋಜಿಸಿದ್ದ ಆಗ್ನೇಯ ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ನಾಲ್ಕು ಜನ ಶಾಸಕರು, ಅಭಿವೃದ್ಧಿ ಕೆಲಸ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ಜನರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದನ್ನು ಮತದಾರ ಶಿಕ್ಷಕರಿಗೆ ಮನವರಿಕೆ ಮಾಡಿಕೊಡಬೇಕು. ಈ ಮೂಲಕ ಪಕ್ಷದ ಅಭ್ಯರ್ಥಿಗೆ ಚುನಾವಣೆಯಲ್ಲಿ ಗೆಲುವು ತಂದುಕೊಡಲು ದೃಢ ಸಂಕಲ್ಪ ಮಾಡಬೇಕು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ADVERTISEMENT

ವಿವಿ ಸಾಗರದ ನೀರು ಚಳ್ಳಕೆರೆಗೆ ಹರಿಸಿರುವುದರಲ್ಲಿ ಬಿಜೆಪಿ ಸರ್ಕಾರದ ಪರಿಶ್ರಮವಿದೆ. ಆದ್ದರಿಂದ ನೀರಿನ ವಿಷಯವನ್ನು ಮನವರಿಕೆ ಮಾಡಿಕೊಂಡು ತಮ್ಮ ಪಕ್ಷವನ್ನು ಬೆಂಬಲಿಸಬೇಕು ಎಂದು ಶಿಕ್ಷಕರಲ್ಲಿ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ‘ಈ ಬಾರಿ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಚಿದಾನಂದಗೌಡರವರಿಗೆ ಮೊದಲ ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.

ಸಂಸದ ಎ. ನಾರಾಯಣಸ್ವಾಮಿ, ಚಿತ್ರದುರ್ಗ ಕ್ಷೇತ್ರದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಅಗ್ನೇಯ ಪದವೀಧರ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಚಿದಾನಂದಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮುರುಳಿ, ರಾಜ್ಯ ಕಾರ್ಯದರ್ಶಿ ಕೆ.ಎಸ್. ನವೀನ್ ಮಾತನಾಡಿದರು.

ಪಕ್ಷದ ಮುಖಂಡ ಜಿ.ಎಂ. ಸುರೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಮಾಜಿ ಅಧ್ಯಕ್ಷ ಬಿ.ವಿ. ಸಿರಿಯಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಲುವೆಹಳ್ಳಿ ಜಯಪಾಲಯ್ಯ, ಉಪಾಧ್ಯಕ್ಷ ರಾಮದಾಸ್, ಸಿ.ಎಸ್. ಪ್ರಸಾದ್, ಎಪಿಎಂಸಿ ಅಧ್ಯಕ್ಷ ಸೋಮಶೇಖರ ಮಂಡಿಮಠ, ಮಹಿಳಾ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷೆ ಇಂದುಮತಿ, ನಗರಸಭೆ ಸದಸ್ಯ ಎಸ್.ಜಯಣ್ಣ, ಜ್ಯೋತಿಪ್ರಕಾಶ್, ಎಸ್.ಟಿ. ಬೋರನಾಯಕ, ಶಶಿಧರರೆಡ್ಡಿ, ಮಂಜುನಾಥ್, ಮಹೇಶನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.