ADVERTISEMENT

ಗಾಂಧಿ, ಅಂಬೇಡ್ಕರ್‌ ಧಾರೆಯೇ ದಾರಿದೀಪ

ಸಾಹಿತಿ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ಅಭಿಮತ, ‘ವೈಷ್ಣವ ಜನತೋ’ ಕಾದಂಬರಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 16:49 IST
Last Updated 9 ಅಕ್ಟೋಬರ್ 2021, 16:49 IST
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ.ಲೋಕೇಶ ಅಗಸನಕಟ್ಟೆ ಅವರ ‘ವೈಷ್ಣವ ಜನತೋ’ ಕಾದಂಬರಿಯನ್ನು ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್‌ ಟ್ರಸ್ಟಿ ರುದ್ರಪ್ಪ ಹನಗವಾಡಿ ಬಿಡುಗಡೆ ಮಾಡಿದರು. ಪ್ರಾಧ್ಯಾಪಕ ಜೆ.ಕರಿಯಪ್ಪ ಮಾಳಿಗೆ, ಅಹರ್ನಿಶಿ ಪ್ರಕಾಶನದ ಕೆ. ಅಕ್ಷತಾ ಹುಂಚದಕಟ್ಟೆ, ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ,  ಪ್ರೊ.ಎಸ್‌.ಜಿ. ಸಿದ್ಧರಾಮಯ್ಯ, ಚಿಂತಕ ಬಂಜಗೆರೆ ಜಯಪ್ರಕಾಶ ಇದ್ದಾರೆ.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ.ಲೋಕೇಶ ಅಗಸನಕಟ್ಟೆ ಅವರ ‘ವೈಷ್ಣವ ಜನತೋ’ ಕಾದಂಬರಿಯನ್ನು ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್‌ ಟ್ರಸ್ಟಿ ರುದ್ರಪ್ಪ ಹನಗವಾಡಿ ಬಿಡುಗಡೆ ಮಾಡಿದರು. ಪ್ರಾಧ್ಯಾಪಕ ಜೆ.ಕರಿಯಪ್ಪ ಮಾಳಿಗೆ, ಅಹರ್ನಿಶಿ ಪ್ರಕಾಶನದ ಕೆ. ಅಕ್ಷತಾ ಹುಂಚದಕಟ್ಟೆ, ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ,  ಪ್ರೊ.ಎಸ್‌.ಜಿ. ಸಿದ್ಧರಾಮಯ್ಯ, ಚಿಂತಕ ಬಂಜಗೆರೆ ಜಯಪ್ರಕಾಶ ಇದ್ದಾರೆ.   

ಚಿತ್ರದುರ್ಗ: ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಸಂವಿಧಾನ ದೃಷ್ಟಿ ಹಾಗೂ ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ದೃಷ್ಟಿಯಲ್ಲಿ ಭಾರತವನ್ನು ಕಟ್ಟಬೇಕಿದೆ. ಇಬ್ಬರ ವಿಚಾರಗಳ ಮಿತಿಯೊಳಗೇ ದೇಶ ಬೆಳಕು ಕಾಣಬೇಕಿದೆ ಎಂದು ಸಾಹಿತಿ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.

ಗೆಳೆಯರ ಬಳಗ ಹಾಗೂ ಅಹರ್ನಿಶಿ ಪ್ರಕಾಶನದ ವತಿಯಿಂದ ತರಾಸು ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ.ಲೋಕೇಶ ಅಗಸನಕಟ್ಟೆ ಅವರ ‘ವೈಷ್ಣವ ಜನತೋ’ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಗಾಂಧಿ ಮತ್ತು ಅಂಬೇಡ್ಕರ ಅವರ ತತ್ವಸಿದ್ಧಾಂತವನ್ನು ಸಮನ್ವಯಗೊಳಿಸಿ ಲೇಖಕರು ಈ ಕಾದಂಬರಿ ರಚಿಸಿದ್ದಾರೆ.

‘ತಾತ್ವಿಕ ಸಂಘರ್ಷವನ್ನು ಲೇಖಕರು ಕಥನದ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ತಾತ್ವಿಕ ವಿಚಾರಗಳನ್ನು ಬಿಂಬಿಸುವ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಎಚ್ಚರಿಕೆಯಿಂದ ಹಲವು ವಿಚಾರಗಳನ್ನು ಮಂಡಿಸಿದ್ದಾರೆ. ಎರಡೂ ಧಾರೆಗಳ ಸ್ಥಿತಿಯನ್ನು ಕಲಾತ್ಮಕವಾಗಿ ಓದುಗರ ಮುಂದಿಟ್ಟಿದ್ದಾರೆ. ಕಲೆಯನ್ನು ದುಡಿಸಿಕೊಂಡು ಧ್ವನಿಪೂರ್ಣವಾಗಿ ಮಾತನಾಡಿದ್ದಾರೆ. ಕನ್ನಡದ ಗದ್ಯ ಕಥನಗಳಲ್ಲಿ ಇದೊಂದು ಅಪರೂಪದ ಕೃತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

‘ಗ್ರಾಮೀಣ ಭಾರತ ಏಕಮುಖ ಧಾರೆಯಲ್ಲ; ಅದೊಂದು ಬಹುತ್ವದ ಧಾರೆ. ಗ್ರಾಮೀಣ ಬದುಕು ಕಥನದ ಜೀವಾಳ. ಬಹುಸಂಸ್ಕೃತಿಯ ಗ್ರಾಮ ಭಾರತವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಶ್ರೇಣಿಕೃತ ವ್ಯವಸ್ಥೆಯನ್ನು ಎಚ್ಚರಿಕೆಯಿಂದ ಕಟ್ಟಿಕೊಟ್ಟಿದ್ದಾರೆ. ಅವರ ಆಲೋಚನೆ, ಚಿಂತನೆಗಳು ನೆಲ ಸಂಸ್ಕೃತಿಯೊಂದಿಗೆ ಬೆರೆತಿರುವುದು ಕೃತಿಯಲ್ಲಿ ಗೊತ್ತಾಗುತ್ತದೆ’ ಎಂದು ಹೇಳಿದರು.

‘ಸ್ಥಳೀಯ ಅನುಭವದಲ್ಲಿ ವಿಶ್ವದೃಷ್ಟಿಯನ್ನು ಕಟ್ಟಿಕೊಟ್ಟ ಕುವೆಂಪು ಅವರ ಕಾದಂಬರಿಗಳ ಸಾಲಿಗೆ ಈ ಕೃತಿ ನಿಲ್ಲುತ್ತದೆ. ಪ್ರಾಣಿ ಜನತ್ತಿನ ಮನೋ ನಿರೀಕ್ಷೆಗಳನ್ನು ಕೃತಿಕಾರರು ಅರ್ಥ ಮಾಡಿಕೊಂಡಿದ್ದಾರೆ. ಕೃತಿಕಾರರನ್ನು ಪ್ರಭಾವಿಸಿದ ವ್ಯವಸಾಯ ಸಂಸ್ಕೃತಿಯ ಶಕ್ತಿ ಇದು. ಇಂತಹ ಕೃಷಿ ಈಗ ಸಂಸ್ಕೃತಿಯಾಗಿ ಉಳಿದಿಲ್ಲ; ಸರಕಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಚಿಂತಕ ಬಂಜಗೆರೆ ಜಯಪ್ರಕಾಶ ಕೃತಿ ಕುರಿತು ಮಾತನಾಡಿ, ‘ಮಠ, ಗಾಂಧಿ, ಅಂಬೇಡ್ಕರ್‌ ಹಾಗೂ ಕಮ್ಯುನಿಸ್ಟ್‌ ಎಂಬ ನಾಲ್ಕು ಧಾರೆಗಳು ಕೃತಿಯಲ್ಲಿವೆ. ಆಶಯಾತ್ಮಕ ಕಾದಂಬರಿಯನ್ನು ಕಥನಾತ್ಮಕವಾಗಿ ಬರೆದಿದ್ದಾರೆ. ಕನ್ನಡ ಸಾಹಿತ್ಯದ ಕಥನಕಾರರ ಸಾಲಿಗೆ ಈ ಕೃತಿ ಮುಲಾಜಿಲ್ಲದೇ ಸೇರುತ್ತದೆ. ಇದರಲ್ಲಿ ಕಲ್ಪನೆಗಳೆಷ್ಟು, ವಾಸ್ತವವೆಷ್ಟು ಎಂಬುದು ಓದುಗರಿಗೆ ಬಿಟ್ಟಿದ್ದು’ ಎಂದರು.

‘ದಾವಣಗೆರೆ, ಅಗಸನಕಟ್ಟೆ ಕೇಂದ್ರವಾಗಿಟ್ಟುಕೊಂಡು ರಚಿಸಿದ ಕಾದಂಬರಿ ಗ್ರಾಮೀಣ ಭಾರತವನ್ನು ಪ್ರತಿನಿಧಿಸುತ್ತದೆ. ವರ್ತಮಾನದ ತಲ್ಲಣ ಹಾಗೂ ತೊಳಲಾಟಗಳು ಇಲ್ಲಿವೆ. ದಮನಿತರ ಹಾದಿಯನ್ನು ಚಿತ್ರಿಸುವಾಗ ನಾಟಕೀಯತೆ ಪ್ರದರ್ಶಿಸಿಲ್ಲ. ವಾಸ್ತವದ ನೆಲಗಟ್ಟಿಯಲ್ಲಿ ಕೃತಿ ರಚನೆಯಾಗಿದೆ. ಎಲ್ಲರೊಳಗೂ ಒಳಿತನ್ನು ಹುಡುಕಿ ಹೃದಯವಂತಿಕೆ ಪ್ರದರ್ಶಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಅಗಸನಕಟ್ಟೆ ಬಿಡುಗಡೆ’

‘ವೈಷ್ಣವ ಜನತೋ’ ಕಾದಂಬರಿಯ ಮೂಲಕ ಲೇಖಕ ಲೋಕೇಶ ಅಗಸನಕಟ್ಟೆ ಬಿಡುಗಡೆಯಾಗಿದ್ದಾರೆ ಎಂದು ಕವಿ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.

ಅಗಸನಕಟ್ಟೆ ಅವರ ಹಿಂದಿನ ಕಾದಂಬರಿ ‘ಅತೀತ ಲೋಕದ ಮಹಾಯಾತ್ರಿಕ’ ಕುರಿತು ಅವರು ಪರೋಕ್ಷವಾಗಿ ಮಾತನಾಡಿದರು.

‘ನೂತನ ಕೃತಿಯ ಮೂಲಕ ಅಗಸನಕಟ್ಟೆ ಅವರು ಹಿಂದಿನ ದೋಷವನ್ನು ಕಳೆದುಕೊಂಡಿದ್ದಾರೆ. ಯಜ್ಞ ಸಂಸ್ಕೃತಿಯಿಂದ ಬಿಡುಗಡೆಯಾಗಿದ್ದಾರೆ’ ಎಂದರು.

ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರೂ ಈ ಮಾತುಗಳನ್ನು ಬೆಂಬಲಿಸಿದರು. ‘ವೈಚಾರಿಕ ಪ್ರಜ್ಞೆಯ ಲೋಕೇಶ್‌ ಕಳೆದುಹೋಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅವರು ಇನ್ನೂ ಉಳಿದಿದ್ದಾರೆ ಎಂಬುದನ್ನು ಈ ಕೃತಿ ನಿರೂಪಿಸಿದೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಲೋಕೇಶ ಅಗಸನಕಟ್ಟೆ, ‘ಅವರೊಬ್ಬ (ಬಿಂದು ಮಾಧವ ಶರ್ಮಾ) ಅಪರೂಪದ ವ್ಯಕ್ತಿ. ಅದು (ಕೃತಿ) ನಾನು ಅವರನ್ನು ನೋಡಿದ ಪರಿ’ ಎಂದಷ್ಟೇ ಹೇಳಿದರು.

ಅಹರ್ನಿಶಿ ಪ್ರಕಾಶನದ ಕೆ. ಅಕ್ಷತಾ ಹುಂಚದಕಟ್ಟೆ, ಪ್ರಾಧ್ಯಾಪಕ ಜೆ.ಕರಿಯಪ್ಪ ಮಾಳಿಗೆ ಇದ್ದರು.


***

ಪುಣೆ ಒಪ್ಪಂದ ಪ್ರಸ್ತಾಪಿಸಿ ಗಾಂಧಿವಾದಿಗಳನ್ನು ಹಣಿಯುವ ಪ್ರಯತ್ನವನ್ನು ಅಂಬೇಡ್ಕರ್‌ವಾದಿಗಳು ಮಾಡುತ್ತಾರೆ. ವಾದ –ವಿವಾದದ ಬದಲು ಮನವರಿಕೆ ಮಾಡಿಕೊಡುವ ಮನೋಭಾವ ಬೆಳೆಸಿಕೊಳ್ಳಬೇಕು.

ರುದ್ರಪ್ಪ ಹನಗವಾಡಿ

ಟ್ರಸ್ಟಿ, ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್‌

***

ಲೇಖಕರ ಅನುಭವವೇ ಕಾದಂಬರಿಯ ವಸ್ತು. ತಮ್ಮ ಸುತ್ತಲಿನ ಸಿಹಿ–ಕಹಿ ಘಟನೆಗಳನ್ನು ಕಟ್ಟಿಕೊಟ್ಟಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ‘ವೈಷ್ಣವ ಜನತೋ’ ಗಟ್ಟಿ ಕಾದಂಬರಿಯಾಗಿ ಲಭ್ಯವಾಗಿದೆ.

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಸಾಣೇಹಳ್ಳಿ

***

ಕೊರೊನಾ ಸೋಂಕು ಕಾಣಿಸಿಕೊಂಡ ಸಮಯದಲ್ಲಿ 600 ಪುಟಗಳ ಕಾದಂಬರಿ ರಚಿಸಿದೆ. ಪುಟಗಳ ಸಂಖ್ಯೆ ಕಡಿಮೆ ಮಾಡುವ ಸಂದರ್ಭದಲ್ಲಿ ಮಗುವಿನ ಕತ್ತು ಹಿಸುಕಿದ ಅನುಭವ ಆಯಿತು.

ಡಾ.ಲೋಕೇಶ ಅಗಸನಕಟ್ಟೆ

ಕೃತಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.