ADVERTISEMENT

ಚಿತ್ರದುರ್ಗ: ಮೆದುಳಿನ ಗಡ್ಡೆ: ಯಶಸ್ವಿ ಶಸ್ತ್ರಚಿಕಿತ್ಸೆ

ಬಸವೇಶ್ವರ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಸರ್ಜರಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 7:17 IST
Last Updated 14 ನವೆಂಬರ್ 2021, 7:17 IST
ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಮೆದುಳಿನ ಗಡ್ಡೆಗೆ ಈಚೆಗೆ ಶಸ್ತ್ರಚಿಕಿತ್ಸೆ ಪಡೆದು ಗುಣಮುಖರಾಗಿರುವ ಚಳ್ಳಕೆರೆಯ ಪಾಲಮ್ಮ. ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಇದ್ದರು.
ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಮೆದುಳಿನ ಗಡ್ಡೆಗೆ ಈಚೆಗೆ ಶಸ್ತ್ರಚಿಕಿತ್ಸೆ ಪಡೆದು ಗುಣಮುಖರಾಗಿರುವ ಚಳ್ಳಕೆರೆಯ ಪಾಲಮ್ಮ. ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಇದ್ದರು.   

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ 45 ವರ್ಷದ ಮಹಿಳೆ ಪಾಲಮ್ಮ ಅವರಿಗೆ ಈಚೆಗೆ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ‘ಮೆದುಳಿನ ಗಡ್ಡೆ’ ಸಂಬಂಧ ಯಶಸ್ವಿಯಾಗಿ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಮಾಡಲಾಯಿತು.

‘ತಲೆ ಸುತ್ತು ಬರುತ್ತದೆ ಎಂದು ಆಸ್ಪತ್ರೆಗೆ ಬಂದಿದ್ದರು. ಡೆಂಗಿ ಜ್ವರ ಕೂಡ ಇದ್ದಿದ್ದರಿಂದ ಇವರ ಸ್ಥಿತಿ ಗಂಭೀರವಾಗಿತ್ತು. ಅಲ್ಲದೆ, ಎಂಆರ್‌ಐ ಸ್ಕ್ಯಾನಿಂಗ್ ಮಾಡಿದ ನಂತರವೇ ಇವರಿಗೆ ಮೆದುಳಿನ ಗಡ್ಡೆ ರೋಗ ಇರುವುದು ಪತ್ತೆಯಾಯಿತು. ತಡಮಾಡದೆ ಶಸ್ತ್ರಚಿಕಿತ್ಸೆ ಮಾಡಲಾಯಿತು’ ಎಂದು ನರರೋಗ ತಜ್ಞ ಡಾ.ಕಿರಣ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಇಂತಹ ಪ್ರಕರಣಕ್ಕೆ ಬಸವೇಶ್ವರ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿರುವುದು ಇದೇ ಮೊದಲು. ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ. ಈಗ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ’ ಎಂದರು.

ADVERTISEMENT

ಅನಸ್ತೇಸಿಯಾ ವಿಭಾಗದ ಡಾ.ಮೇಘಾ, ಇಎನ್‌ಟಿ ತಜ್ಞ ಡಾ.ಮಂಜುನಾಥ ರಾವ್, ಸಾಮಾನ್ಯ ಔಷಧ ವಿಭಾಗದ ಡಾ.ತೇಜಸ್ವಿ ಸೇರಿ ಇತರ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾಗಿದೆ ಎಂದರು.

ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ‘ಶ್ರೀಮಠದ ಆಸ್ಪತ್ರೆಗೆ ಬರುವ ರೋಗಿಗಳು ಹೊರ ಜಿಲ್ಲೆ, ಬೇರೆ ಊರುಗಳಿಗೆ ಚಿಕಿತ್ಸೆಗೆ ಹೋಗದಂತೆ ಇಲ್ಲಿಯೇ ಚಿಕಿತ್ಸೆ ಮಾಡುವಷ್ಟು ಆಧುನಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ. ನುರಿತ ತಜ್ಞ ವೈದ್ಯರು ಕೂಡ ಇದ್ದಾರೆ’ ಎಂದರು.

ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಆಸ್ಪತ್ರೆಯ ಡೀನ್ ಡಾ.ಪ್ರಶಾಂತ್, ವೈದ್ಯಕೀಯ ಅಧೀಕ್ಷಕ ಡಾ. ಫಾಲಾಕ್ಷಯ್ಯ, ಚಿಕಿತ್ಸೆಗೆ ಒಳಗಾಗಿದ್ದ ಪಾಲಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.