ಮೊಳಕಾಲ್ಮುರು: ‘ಬುದ್ಧನ ಬೋಧನೆಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು ಶೀಘ್ರ ಪೂರ್ಣಗೊಳಿಸಲಾಗುವುದು’ ಎಂದು ಹಿರಿಯ ಬೌದ್ಧ ಬಿಕ್ಕು ಬೆಂಗಳೂರಿನ ಮಹಾಬೋಧಿ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಆನಂದ ಥೇರಾ ಹೇಳಿದರು.
ಶುಕ್ರವಾರ ಹಾನಗಲ್ ಸಮೀಪದ ‘ನಮ್ಮ’ ಆಶ್ರಮಕ್ಕೆ ಭೇಟಿ ನೀಡಿದ್ದ ಅವರು ಧರ್ಮವಾಣಿಯಲ್ಲಿ ಮಾತನಾಡಿದರು.
ಬುದ್ಧನ ಬೋಧನೆಗಳು ಪಾಲಿ ಭಾಷೆಯಲ್ಲಿವೆ. ಇದನ್ನು ಕನ್ನಡಕ್ಕೆ ಅನುವಾದ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದೆ. 38 ಸಂಪುಟಗಳನ್ನು ಇದು ಹೊಂದಿದ್ದು, ಮೊಳಕಾಲ್ಮುರು ಶ್ರೀನಿವಾಸ ಮೂರ್ತಿ ಅವರು ಈ ಸಂಪುಟಗಳ ಪೈಕಿಯ ‘ಮಂಚಿಮನೆ ಕಾಯ’, ‘ಬುದ್ಧರಾಣಿ ಕಾಯ’ ಸಂಪುಟಗಳ ಅನುವಾದ ಮಾಡಿದ್ದಾರೆ. ಕಷ್ಟಕರವಾದ ‘ಪಟಿಸಂವಿದ ಕಾಯ’ ಅನುವಾದ ಮಾಡಲಾಗುತ್ತಿದೆ. ಇದು ಕನ್ನಡ ಸಾಹಿತ್ಯ ಲೋಕಕ್ಕೆ ಬುದ್ಧ ಬೋಧನೆಗಳ ಕುರಿತ ಬಹುದೊಡ್ಡ ಕೊಡುಗೆಯಾಗಲಿದೆ’ ಎಂದು ನುಡಿದರು.
‘2600 ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಬುದ್ಧ ಧರ್ಮ ಪ್ರಚಾರ ಮಾಡಿದ್ದಾರೆ. ನೂರಾರು ವರ್ಷಗಳ ಕಾಲ ನಮ್ಮಲ್ಲಿ ಬೌದ್ಧ ಧರ್ಮ ಹೆಚ್ಚು ಸಕ್ರಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬೇರೆ ದೇಶಗಳಿಗೆ ಹೋಲಿಕೆ ಮಾಡಿದಲ್ಲಿ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಿದೆ, ಆದರೆ ಘನತೆಗೆ ಧಕ್ಕೆಯಾಗಿಲ್ಲ. ಕಷ್ಟ, ದುಃಖವನ್ನು ಹೆಚ್ಚು ಅರ್ಥ ಮಾಡಿಕೊಳ್ಳುವ ಮೂಲಕ ಮಾತ್ರ ಜೀವನವನ್ನು ಸರಿಯಾಗಿ ಮುನ್ನೆಡೆಸಲು ಸಾಧ್ಯವಿದೆ ಎನ್ನುವುದು ಬುದ್ಧನ ಪ್ರಮುಖ ಅನಿಸಿಕೆಯಾಗಿತ್ತು’ ಎಂದರು.
ಮಹಾಬೋಧಿ ಸೊಸೈಟಿ ಅಧ್ಯಕ್ಷ ಕಸ್ಸಪ ಮಹಥೇರಾ, ನಮ್ಮ ಆಶ್ರಮ ಅಧ್ಯಕ್ಷ ಮೊಳಕಾಲ್ಮುರು ಶ್ರೀನಿವಾಸಮೂರ್ತಿ, ಬೌದ್ಧ ಬಿಕ್ಕು ಸುಗತಾನಂದ ಥೇರಾ ಮತ್ತು ನಮ್ಮ ಆಶ್ರಮ ನಿರ್ದೇಶಕರು ಇದ್ದರು. ಕಾ
ರ್ಯಕ್ರಮ ನಂತರ ತಾಲ್ಲೂಕಿನ ಅಶೋಕ ಸಿದ್ದಾಪುರದ ಸಾಮ್ರಾಟ್ ಅಶೋಕನ ಶಿಲಾಶಾಸನಕ್ಕೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.