ADVERTISEMENT

ಬಜೆಟ್: ನೇರ ರೈಲು ಮಾರ್ಗಕ್ಕೆ ₹300 ಕೋಟಿ

ಕೇಂದ್ರ ಬಜೆಟ್‌ನಲ್ಲಿ ಅನುದಾನ ಮೀಸಲು, ದಶಕದ ಯೋಜನೆ ಸಾಕಾರ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 5:55 IST
Last Updated 2 ಫೆಬ್ರುವರಿ 2024, 5:55 IST
   

ಚಿತ್ರದುರ್ಗ: ಕೇಂದ್ರ ಸರ್ಕಾರ ಗುರುವಾರ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗದ ಯೋಜನೆಗೆ ₹ 300 ಕೋಟಿ ಅನುದಾನ ಮೀಸಲಿಟ್ಟಿದೆ. ನೇರ ರೈಲು ಮಾರ್ಗ ಸಾಕಾರಕ್ಕೆ ದಶಕದ ಬಳಿಕ ಭರವಸೆ ಚಿಗುರೊಡೆದಿದೆ.

‘ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಸಚಿವಾಲಯಕ್ಕೆ ₹ 2.2 ಲಕ್ಷ ಕೋಟಿ ಅನುದಾನ ಮೀಸಲಿಡಲಾಗಿದೆ. ಇದರಲ್ಲಿ ಕರ್ನಾಟಕಕ್ಕೆ ₹ 7,524 ಕೋಟಿ ಅನುದಾನ ಲಭ್ಯವಾಗಿದೆ. ನೂತನ ರೈಲು ಮಾರ್ಗಗಳಲ್ಲಿ ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗಕ್ಕೆ ₹ 300 ಕೋಟಿ ಅನುದಾನ ಲಭ್ಯವಾಗಿದೆ. ಚಿಕ್ಕಜಾಜೂರು–ಹುಬ್ಬಳ್ಳಿ ಜೋಡಿ ರೈಲು ಮಾರ್ಗಕ್ಕೆ ₹ 94 ಕೋಟಿ ಲಭ್ಯವಾಗಿದೆ’ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ದಾವಣಗೆರೆ–ಚಿತ್ರದುರ್ಗ–ತುಮಕೂರು ನೇರ ರೈಲು ಮಾರ್ಗ ದಶಕಗಳಿಂದ ಬೇಡಿಕೆ ಇದೆ. 195 ಕಿ.ಮೀ ಉದ್ದದ ರೈಲು ಮಾರ್ಗಕ್ಕೆ ಭೂಸ್ವಾಧೀನ ಪ್ರಕ್ರಿಯೆ ತೊಡಕಾಗಿತ್ತು. ಇತ್ತೀಚೆಗೆ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗತಿ ಪಡೆದಿದ್ದು, ದಾವಣಗೆರೆ–ಚಿತ್ರದುರ್ಗ ಹಾಗೂ ಹಿರಿಯೂರು ನಡುವೆ ಶೇ 82ರಷ್ಟು ಭೂಸ್ವಾಧೀನ ಪೂರ್ಣಗೊಂಡಿದೆ. ಟೆಂಡರ್ ಪ್ರಕ್ರಿಯೆಗೆ ಶೇ 90ರಷ್ಟು ಭೂಸ್ವಾಧೀನ ಪೂರ್ಣಗೊಳ್ಳಬೇಕಿದೆ.

ADVERTISEMENT

ಚಿತ್ರದುರ್ಗ ಜಿಲ್ಲೆಯಲ್ಲಿ 1,211 ಎಕರೆ ಭೂಸ್ವಾಧೀನವಾಗಿದ್ದು, ₹ 250 ಕೋಟಿ ಪರಿಹಾರ ವಿತರಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ 849 ಎಕರೆಯಲ್ಲಿ 695 ಎಕರೆ ಭೂಸ್ವಾಧೀನ ಪೂರ್ಣಗೊಂಡಿದೆ. ದಾವಣಗೆರೆ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಎಲ್ಲ 237 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು ಪರಿಹಾರ ವಿತರಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಚುನಾವಣೆ ಘೋಷಣೆಗೂ ಮುನ್ನವೇ ಯೋಜನೆಯ ಕಾಮಗಾರಿಗೆ ಚಾಲನೆ ದೊರೆಯುವ ಸಾಧ್ಯತೆ ಇದೆ.

2023–24ನೇ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ₹ 5,300 ಕೋಟಿ ಅನುದಾನವನ್ನು ಘೋಷಣೆ ಮಾಡಲಾಗಿತ್ತು. ಈ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ ಎಂಬ ಅಸಮಾಧಾನ ಜಿಲ್ಲೆಯ ಜನರಲ್ಲಿದೆ. ಪ್ರಸಕ್ತ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆಗೆ ಇನ್ನಷ್ಟು ಅನುದಾನ ದೊರೆಯುವ ನಿರೀಕ್ಷೆ ಕೂಡ ಹುಸಿಯಾಗಿದೆ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮಂಡಿಸಿದ ಬಜೆಟ್‌ ಬಗ್ಗೆ ಜಿಲ್ಲೆಯಲ್ಲಿ ಪರ–ವಿರೋಧ ಅಭಿಪ್ರಾಯಗಳು ಕೇಳಿಬಂದಿವೆ.

ಭರವಸೆ ನೀಡಬೇಕಿತ್ತು

ಭದ್ರಾ ಮೇಲ್ದಂಡೆ ಯೋಜನೆಗೆ ಕಳೆದ ಬಜೆಟ್‌ನಲ್ಲಿ ₹ 5300 ಕೋಟಿ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಈ ಅದಾನವನ್ನು ಪ್ರಧಾನಮಂತ್ರಿ ಕೃಷಿ ಸಂಚಾಯಿನಿ ಯೋಜನೆಯಡಿ ಒದಗಿಸುವ ಆಶ್ವಾಸನೆ ನೀಡಿತ್ತು. ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪವಿಲ್ಲ. ಕಳೆದ ಬಜೆಟ್‌ನಲ್ಲಿ ಯೋಜನೆಗೆ ಮೀಸಲಿಟ್ಟ ಅನುದಾನವನ್ನು ಕೇಂದ್ರ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. –ಬಿ.ಎ.ಲಿಂಗಾರೆಡ್ಡಿ ಕಾರ್ಯಾಧ್ಯಕ್ಷ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ

ಸರ್ವರನ್ನು ಒಳಗೊಂಡ ಬಜೆಟ್

ಬಡವರು ಮಹಿಳೆಯರು ಯುವಜನರು ಮತ್ತು ಅನ್ನದಾತರು ದೇಶದ ಆಧಾರ ಸ್ತಂಭಗಳು. ಎಲ್ಲ ಅರ್ಹರಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು ಎನ್ನುವ ನಿಟ್ಟಿನಲ್ಲಿ ಸರ್ವರನ್ನು ಬಜೆಟ್‌ನ್ನು ಒಳಗೊಂಡಿದೆ. ರೈತರ ಆದಾಯ ಹೆಚ್ಚಿಸಿ ಅವರಿಗೆ ಅಗತ್ಯವಾದ ನೆರವು ನೀಡಲು ಸರ್ಕಾರ ಬದ್ಧವಾಗಿದೆ. ಸ್ವಸಹಾಯ ಸಂಘಗಳು ಆರ್ಥಿಕವಾಗಿ ಸಬಲರಾಗಲು ಅನುವು ಮಾಡಿಟ್ಟಿದೆ. ಕೃಷಿ ಉತ್ಪನ್ನಗಳ ಮೌಲ್ಯ ಹೆಚ್ಚಳ ಹಾಗೂ ಬೆಳೆ ಸರಂಕ್ಷಣೆಗೆ ಅನುದಾನ ಮೀಸಲಿಡಲಾಗಿದೆ. ಎ. ಮುರುಳಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.