ADVERTISEMENT

₹ 80 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ

ಮುಂದಿನ ಶೈಕ್ಷಣಿಕ ವರ್ಷದಿಂದ ಕೇಂದ್ರೀಯ ವಿದ್ಯಾಲಯ ಆರಂಭ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 5:02 IST
Last Updated 29 ನವೆಂಬರ್ 2022, 5:02 IST
ಚಿತ್ರದುರ್ಗದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಗುರುತಿಸಿರುವ ಸರ್ಕಾರಿ ವಿಜ್ಞಾನ ಕಾಲೇಜು ಕಟ್ಟಡವನ್ನು ಕೇಂದ್ರೀಯ ವಿದ್ಯಾಲಯ ಸಂಘಟನೆ ಪ್ರಾದೇಶಿಕ ಸಹಾಯಕ ಆಯುಕ್ತ ಪಿ.ಸಿ.ರಾಜು ನೇತೃತ್ವದ ನಿಯೋಗ ಪರಿಶೀಲಿಸಿತು. ಬೀರಬಲ್ಲ ದಿಂಡ್ವಾ ಇದ್ದಾರೆ.
ಚಿತ್ರದುರ್ಗದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಗುರುತಿಸಿರುವ ಸರ್ಕಾರಿ ವಿಜ್ಞಾನ ಕಾಲೇಜು ಕಟ್ಟಡವನ್ನು ಕೇಂದ್ರೀಯ ವಿದ್ಯಾಲಯ ಸಂಘಟನೆ ಪ್ರಾದೇಶಿಕ ಸಹಾಯಕ ಆಯುಕ್ತ ಪಿ.ಸಿ.ರಾಜು ನೇತೃತ್ವದ ನಿಯೋಗ ಪರಿಶೀಲಿಸಿತು. ಬೀರಬಲ್ಲ ದಿಂಡ್ವಾ ಇದ್ದಾರೆ.   

ಚಿತ್ರದುರ್ಗ: ಮುಂದಿನ ಶೈಕ್ಷಣಿಕ ವರ್ಷದಿಂದ ಕೇಂದ್ರೀಯ ವಿದ್ಯಾಲಯ ಕಾರ್ಯಾರಂಭ ಮಾಡಲಿದೆ. ಆರಂಭದಲ್ಲಿ 1 ರಿಂದ 5 ತರಗತಿವರೆಗೆ ಪ್ರವೇಶಾತಿ ನೀಡಲಾಗುವುದು ಎಂದು ಕೇಂದ್ರೀಯ ವಿದ್ಯಾಲಯ ಸಂಘಟನೆ ಪ್ರಾದೇಶಿಕ ಸಹಾಯಕ ಆಯುಕ್ತ ಪಿ.ಸಿ.ರಾಜು ತಿಳಿಸಿದರು.

ಕೇಂದ್ರೀಯ ವಿದ್ಯಾಲಯಕ್ಕೆ ತಾತ್ಕಾಲಿಕವಾಗಿ ನಿಗದಿಪಡಿಸಿದ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದ ಸ್ಥಳ ಹಾಗೂ ಮೂಲಸೌಕರ್ಯಗಳನ್ನು ಸೋಮವಾರ ವೀಕ್ಷಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ರೈಲ್ವೆ, ಅಂಚೆ, ಡಿಆರ್‌ಡಿಒ, ಇಸ್ರೊ ಸೇರಿ ಕೇಂದ್ರ ಸರ್ಕಾರಿ ಇಲಾಖೆ ಹಾಗೂ ಸಂಸ್ಥೆಗಳಿವೆ. ಇವುಗಳಲ್ಲಿ ಹೆಚ್ಚಿನ ನೌಕರರು ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆ ಮಾಡುವಂತೆ ಕೋರಿಕೆ ಬಂದಿದೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ನಿರ್ದೇಶನದಂತೆ ಕೇಂದ್ರೀಯ ವಿದ್ಯಾಲಯ ಸ್ಥಾಪನೆಯ ಕುರಿತು ಸ್ಥಳ ಪರಿಶೀಲನೆ ನಡೆಸಲಾಗಿದೆ. ಎರಡು ದಿನಗಳಲ್ಲಿ ವರದಿ ಸಲ್ಲಿಸಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

‘ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದ ನೆಲ ಮಹಡಿಯಲ್ಲಿ ಬೋಧನಾ ಕೊಠಡಿಗಳು ವಿಶಾಲವಾಗಿವೆ. 10 ಬೋಧನೆಗೆ, 2 ಸಿಬ್ಬಂದಿಗೆ ಅನುಕೂಲ ಯೋಗ್ಯವಾಗಿವೆ. ಎರಡು ಶೌಚಾಲಯ ಸೇರಿ 17 ಕೊಠಡಿಗಳು ಲಭ್ಯ ಇವೆ. ತರಗತಿಗಳನ್ನು ಆರಂಭಿಸಲು ಯಾವುದೇ ಕೊರತೆ ಇಲ್ಲ. ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ 12 ತರಗತಿಯವರೆಗೆ ವಿದ್ಯಾಭ್ಯಾಸವನ್ನು ನೀಡಲಾಗುವುದು. ಪ್ರತಿ ತರಗತಿಗೆ 40ರಂತೆ ಆರಂಭದಲ್ಲಿ 200 ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಲಾಗುವುದು’ ಎಂದು ಹೇಳಿದರು.

‘ಕೇಂದ್ರೀಯ ವಿದ್ಯಾಲಯ ಸ್ಥಾಪನೆಗಾಗಿ ಕುಂಚಿಗನಾಳ್‌ ಬಳಿ 9.38 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಸದ್ಯ ಮಂಜೂರು ಮಾಡಿರುವ ಭೂಮಿಯಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿವೆ. ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕಿದೆ. ₹ 80 ಕೋಟಿ ಅನುದಾನದಲ್ಲಿ ಕೇಂದ್ರ ಲೋಕೋಪಯೋಗಿ ಇಲಾಖೆ ವತಿಯಿಂದ 18 ರಿಂದ 24 ತಿಂಗಳಲ್ಲಿ ಕಟ್ಟಡ ನಿರ್ಮಿಸಲಾಗುವುದು’ ಮಾಹಿತಿ ನೀಡಿದರು. ದಾವರಣಗೆರೆ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಬೀರಬಲ್ಲ ದಿನವಾ, ಕೇಂದ್ರ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ರಾಜಗೋಪಾಲ ನಿಯೋಗದಲ್ಲಿದ್ದರು. ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್‌.ಜೆ, ತಹಶೀಲ್ದಾರ್ ಸತ್ಯನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.